ಭಾರತೀಯ ಚಿತ್ರರಂಗದಲ್ಲಿ ನಟಿ ಪೂಜಾ ಹೆಗ್ಡೆ(Pooja Hegde) ಅವರು ಬಹುಬೇಡಿಕೆಯ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಅನೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಬೆಡಗಿಯ ಸಿನಿಮಾಗಳು (Pooja Hegde Movies) ಗೆಲುವು ಕಂಡಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಅವರು ನಟಿಸಿದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿವೆ. ಪೂಜಾ ಹೆಗ್ಡೆ ಪಾಲಿಗೆ 2022ರ ವರ್ಷ ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬೇಕು. ಅವರು ನಟಿಸಿದ ‘ರಾಧೆ ಶ್ಯಾಮ್’, ‘ಆಚಾರ್ಯ’ ಹಾಗೂ ‘ಬೀಸ್ಟ್’ ಸಿನಿಮಾಗಳು ಅಭಿಮಾನಿಗಳ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ವಿಫಲ ಆಗಿವೆ. ಇದರಿಂದಾಗಿ ಪೂಜಾ ಹೆಗ್ಡೆ ಡಿಮ್ಯಾಂಡ್ ಕಡಿಮೆ ಆಗಬಹುದು ಎಂದು ಊಹಿಸಿದ್ದವರಿಗೆ ಇಲ್ಲೊಂದು ಅಚ್ಚರಿ ಎದುರಾಗಿದೆ. ಅವರು ಹೊಸ ಹೊಸ ಚಿತ್ರಗಳಿಗೆ ಆಯ್ಕೆ ಆಗುತ್ತಲೇ ಇದ್ದಾರೆ. ಈಗ ಖ್ಯಾತ ನಟ ವಿಜಯ್ ದೇವರಕೊಂಡ (Vijay Deverakonda) ಜೊತೆ ‘ಜನ ಗಣ ಮನ’ ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂದು ಸುದ್ದಿ ಆಗಿದೆ.
ಪೂಜಾ ಹೆಗ್ಡೆ ಸೋಲಿನ ಹಿಸ್ಟರಿ:
ಈ ವರ್ಷ ಮಾರ್ಚ್ 11ರಂದು ‘ರಾಧೆ ಶ್ಯಾಮ್’ ಸಿನಿಮಾ ತೆರೆಗೆ ಬಂದಿತು. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಅಷ್ಟಾಗಿ ನಿರೀಕ್ಷೆ ಇರಲಿಲ್ಲ. ಟ್ರೇಲರ್ ನೋಡಿದ ಫ್ಯಾನ್ಸ್ ನಿರಾಸೆಗೊಂಡಿದ್ದರು. ಸಿನಿಮಾ ಕೂಡ ಮಕಾಡೆ ಮಲಗಿತು. ಪೂಜಾ ಹೆಗ್ಡೆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿತ್ತು. ಆದರೆ, ಸಿನಿಮಾ ಸೋಲು ಅನುಭವಿತು. ಪೂಜಾ ಹೆಗ್ಡೆ ಅವರ ಈ ವರ್ಷದ ಮೊದಲ ಸೋಲು ಇದು. ಇದಾದ ನಂತರ ತೆರೆಗೆ ಬಂದಿದ್ದು ದಳಪತಿ ವಿಜಯ್ ನಟನೆಯ ‘ಬೀಸ್ಟ್’. ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಸೃಷ್ಟಿ ಮಾಡಿತ್ತು. ಆದರೆ, ಸಿನಿಮಾ ನೋಡಿದ ಫ್ಯಾನ್ಸ್ ನಿರಾಸೆಗೊಂಡರು. ಅದರಲ್ಲೂ, ಪೂಜಾ ಹೆಗ್ಡೆ ಪಾತ್ರ ಕೆಲವೇ ದೃಶ್ಯಗಳಿಗೆ ಸೀಮಿತವಾಗಿತ್ತು. ಇನ್ನು, ಏಪ್ರಿಲ್ 29ರಂದು ತೆರೆಗೆ ಬಂದ ‘ಆಚಾರ್ಯ’ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಲ್ಕು ದೃಶ್ಯಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಈ ಚಿತ್ರ ಕೂಡ ಸೋಲು ಕಂಡಿದೆ. ಹಲವು ಹಿಟ್ ಚಿತ್ರಗಳನ್ನು ನೀಡಿದ ಕೊರಟಾಲ ಶಿವ ಅವರು ಉತ್ತಮ ಸಿನಿಮಾ ಕಟ್ಟಿಕೊಡಲು ವಿಫಲರಾಗಿದ್ದಾರೆ. ರಾಮ್ ಚರಣ್ ಹಾಗೂ ಚಿರಂಜೀವಿ ಕಾಂಬಿನೇಷನ್ ಕೆಲಸ ಮಾಡಿಲ್ಲ. ಈ ಚಿತ್ರದ ಮೂಲಕ ಪೂಜಾ ಹೆಗ್ಡೆ ಅವರು ಈ ವರ್ಷ ಮೂರನೇ ಬಾರಿಗೆ ಸೋಲು ಕಾಣುವಂತಾಯಿತು.
ಪೂಜಾ ಹೆಗ್ಡೆ ಕೈಯಲ್ಲಿವೆ ಹೈ-ವೋಲ್ಟೇಜ್ ಸಿನಿಮಾಗಳು:
ಎಷ್ಟೇ ಸೋಲು ಕಂಡರೂ ಕೂಡ ಪೂಜಾ ಹೆಗ್ಡೆ ಚಾರ್ಮ್ ಕಡಿಮೆ ಆಗಿಲ್ಲ. ಅವರು ಸಲ್ಮಾನ್ ಖಾನ್ ನಟನೆಯ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದಲ್ಲದೇ ಮಹೇಶ್ ಬಾಬು ಅವರ 28ನೇ ಚಿತ್ರಕ್ಕೂ ಪೂಜಾ ಹೆಗ್ಡೆ ನಾಯಕಿ. ಅದರ ಜೊತೆಗೆ ‘ಜನ ಗಣ ಮನ’ ಸಿನಿಮಾಗೂ ಅವರನ್ನೇ ಅಪ್ರೋಚ್ ಮಾಡಲಾಗಿದೆ ಎಂದು ಸುದ್ದಿ ಕೇಳಿಬರುತ್ತಿದೆ. ವಿಜಯ್ ದೇವರಕೊಂಡ ಹೀರೋ ಆಗಿ ನಟಿಸುತ್ತಿರುವ ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ ಆಯ್ಕೆ ಬಗ್ಗೆ ಕೆಲವೆಡೆ ವರದಿ ಪ್ರಕಟ ಆಗಿದೆ. ಆದರೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
‘ಜನ ಗಣ ಮನ’ ಸಿನಿಮಾ ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಮೂಡಿ ಬರಲಿದೆ. ವಿಜಯ್ ದೇವರಕೊಂಡ ಅವರು ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:02 am, Sat, 14 May 22