ಸಾಮಾಜಿಕ ಜಾಲತಾಣಗಳ (Social Media) ಬಳಕೆ ಹೆಚ್ಚಾದಷ್ಟು ಸುಳ್ಳು ಸುದ್ದಿಗಳ (Fake News) ಪ್ರಸಾರವೂ ಹೆಚ್ಚಾಗಿದೆ. ಯೂಟ್ಯೂಬ್ ಚಾನೆಲ್ಗಳು, ಟ್ವಿಟ್ಟರ್ ಹ್ಯಾಂಡಲ್ಗಳು ಹೆಚ್ಚು ಲೈಕ್ಸ್, ವೀವ್ಸ್ ಪಡೆಯಲು ರೋಚಕವಾದ ಸುದ್ದಿಗಳನ್ನೇ ಪ್ರಸಾರ ಮಾಡುತ್ತಾರೆ. ಈ ರೋಚಕ ಸುದ್ದಿಗಳು ಬಹುಪಾಲು ಸುಳ್ಳು ಸುದ್ದಿಗಳೇ ಆಗಿರುತ್ತವೆ. ಎರಡು ವರ್ಷದ ಹಿಂದೆ ಯೂಟ್ಯೂಬ್ ಚಾನೆಲ್ ಒಂದು ರಿಯಾ ಚಕ್ರವರ್ತಿ, ಅಕ್ಷಯ್ ಕುಮಾರ್ ಬಗ್ಗೆ ತನಗೆ ತೋಚಿದಂತೆ ಸುಳ್ಳು ಸುದ್ದಿಗಳನ್ನು ಹರಡಿ ಲಕ್ಷಾಂತರ ರೂಪಾಯಿ ಹಣ ಗಳಿಸಿದ್ದ. ಈಗಲೂ ಇದೇ ಹಾದಿಯಲ್ಲಿ ಜನಪ್ರಿಯವಾಗಿರುವ ಹಲವರು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿದ್ದಾರೆ. ಅದರಲ್ಲಿ ಉಮೈರ್ ಸಂಧು (Umair Sandhu) ಸಹ ಒಬ್ಬ.
ತನ್ನನ್ನು ತಾನು ಅರಬ್ ದೇಶಗಳ ಸೆನ್ಸಾರ್ ಬೋರ್ಡ್ನ ಸದಸ್ಯ ಎಂದು ಹೇಳಿಕೊಳ್ಳುವ ಉಮೈರ್ ಸಂಧು ಆರಂಭದಲ್ಲಿ ಸಿನಿಮಾಗಳ ವಿಮರ್ಶೆಯನ್ನು, ಟ್ರೈಲರ್ಗಳ ವಿಮರ್ಶೆಯನ್ನು ಭಾರತದಲ್ಲಿ ಬಿಡುಗಡೆ ಆಗುವ ಮುನ್ನ ಹಂಚಿಕೊಳ್ಳುತ್ತಿದ್ದರು. ಕೆಜಿಎಫ್, ಕೆಜಿಎಫ್ 2 ಸಿನಿಮಾಗಳ ವಿಮರ್ಶೆಯನ್ನೂ ಈತ ಹಂಚಿಕೊಂಡಿದ್ದ. ಅದಾದ ಬಳಿಕ ಬಾಲಿವುಡ್ ನಟ-ನಟಿಯರ ಸಂಬಂಧದ ಬಗ್ಗೆ ಗಾಳಿ ಸುದ್ದಿಗಳನ್ನು ಹರಡಲು ಪ್ರಾರಂಭಿಸಿದ.
ಸಿಕ್ಕ-ಸಿಕ್ಕ ನಟ-ನಟಿಯರ ಬಗ್ಗೆ ತೀರ ಅತಿರೇಕದ ಸುಳ್ಳು ಸುದ್ದಿಗಳನ್ನು ಉಮೈರ್ ಸಂಧು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ. ಇತ್ತೀಚೆಗಷ್ಟೆ ಬಹುಭಾಷಾ ನಟಿ ಪೂಜಾ ಹೆಗ್ಡೆ ಕುರಿತು ಸುಳ್ಳು ಸುದ್ದಿಯೊಂದನ್ನು ಹಂಚಿಕೊಂಡಿದ್ದ. ಇದರ ವಿರುದ್ಧ ನಟಿ ಪೂಜಾ ಹೆಗ್ಡೆ ನೊಟೀಸ್ ಒಂದನ್ನು ಉಮೈರ್ ಸಂಧುಗೆ ಕಳುಹಿಸಿದ್ದಾರೆ. ಜುಲೈ 15 ರಂದು ಟ್ವೀಟ್ ಮಾಡಿದ್ದ ಉಮೈರ್ ಸಂಧು, ”ಇಂದು ಮಧ್ಯಾಹ್ನ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಅವರ ಕುಟುಂಬದವರು ಪೂಜಾ ಹೆಗ್ಡೆಯನ್ನು ಕಾಪಾಡಿದ್ದಾರೆ. ಪೂಜಾ ಹೆಗ್ಡೆಯ ಅಣ್ಣನ ಪ್ರಕಾರ, ಪೂಜಾ ಕಳೆದ ಎರಡು ವಾರಗಳಿಂದಲೂ ಖಿನ್ನತೆಯಿಂದ ಬಳಲುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ತಮನ್ನಾ-ವಿಜಯ್ ವರ್ಮಾ ಸಂಬಂಧದ ಬಗ್ಗೆ ಅಶ್ಲೀಲ ಕಮೆಂಟ್; ವಿಮರ್ಶಕನ ವಿರುದ್ಧ ಬೀಳುತ್ತಾ ಕೇಸ್?
ಟ್ವೀಟ್ಗೆ ಪ್ರತಿಕ್ರಿಯೆಯಾಗಿ ನಟಿ ಪೂಜಾ ಹೆಗ್ಡೆ ಉಮೈರ್ ಸಂಧುಗೆ ನೊಟೀಸ್ ಕಳುಹಿಸಿದ್ದಾರೆ. ಅದರ ಚಿತ್ರವನ್ನು ಹಂಚಿಕೊಂಡಿರುವ ಉಮೈರ್ ಸಂಧು, ‘ಫ್ಲಾಪ್ ನಟಿ ಪೂಜಾ ಹೆಗ್ಡೆ ಲೀಗಲ್ ನೊಟೀಸ್ ಕಳಿಸಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಉಮೈರ್ ಸಂಧುಗೆ ನಟಿ ಕೃತಿ ಸೆನನ್ ಸಹ ನೊಟೀಸ್ ಕಳುಹಿಸಿದ್ದರು. ”ಕೃತಿ ಸೆನನ್ ಹಾಗೂ ಪ್ರಭಾಸ್ ಬ್ರೇಕಅಪ್ ಮಾಡಿಕೊಂಡಿದ್ದಾರೆ ಅದಕ್ಕೆ ಕೃತಿ ಸೆನನ್ನ ಹಳೆಯ ಸಂಬಂಧಗಳೇ ಕಾರಣ’ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದ.
ಕೇವಲ ನಟಿಯರನ್ನೇ ಗುರಿಯಾಗಿಟ್ಟುಕೊಂಡು ಈ ಉಮೈರ್ ಸಂಧು ಟ್ವೀಟ್ ಮಾಡುತ್ತಿರುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಅನ್ನು ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾದ ಸೆಟ್ನಲ್ಲಿ ಎಲ್ಲರ ಮುಂದೆ ಹೊಡೆದಿದ್ದಾನೆ ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದ. ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಇಬ್ಬರೂ ಪರಸ್ಪರ ದೂರಾಗಿದ್ದಾರೆ. ‘ರಾಧೆ’ ಸಿನಿಮಾದ ಸಮಯದಲ್ಲಿ ಸಲ್ಮಾನ್ ಖಾನ್, ದಿಶಾ ಪಟಾನಿಯೊಟ್ಟಿಗೆ ಬಹಳ ಸಲುಗೆಯಿಂದ ಇದ್ದ ಕಾರಣಕ್ಕೆ ಟೈಗರ್ ಶ್ರಾಫ್, ದಿಶಾರಿಂದ ದೂರಾಗಿದ್ದಾನೆ ಎಂದಿದ್ದರು. ಈ ರೀತಿಯ ಇನ್ನೂ ಹಲವು ತಲೆ-ಬುಡವಿಲ್ಲದ ಟ್ವೀಟ್ಗಳನ್ನು ಉಮೈರ್ ಸಂಧು ಮಾಡಿದ್ದಾನೆ.
ಪೊನ್ನಿಯಿನ್ ಸೆಲ್ವನ್ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗುವ ಮುನ್ನವೇ ಆ ಸಿನಿಮಾ ಚೆನ್ನಾಗಿಲ್ಲವೆಂದು ಹಿಂದೊಮ್ಮೆ ಉಮೈರ್ ಸಂಧು ಟ್ವೀಟ್ ಮಾಡಿದ್ದಾಗ, ಮಣಿರತ್ನಂ ಪತ್ನಿ ಸುಹಾಸಿನಿ ನಾವು ಸಿನಿಮಾವನ್ನು ಭಾರತದ ಹೊರಗೆ ಯಾವ ಸೆನ್ಸಾರ್ ಮಂಡಳಿಗೂ ನೀಡಿಲ್ಲ, ನೀನು ನಮ್ಮ ಸಿನಿಮಾವನ್ನು ಎಲ್ಲಿ ನೋಡಿದೆ ಎಂದು ಪ್ರಶ್ನೆ ಮಾಡಿದ್ದರು. ಮಾತ್ರವಲ್ಲದೆ ಈತನೊಬ್ಬ ನಕಲಿ ವಿಮರ್ಶಕ ಎಂದು ಟೀಕಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Fri, 28 July 23