ಕ್ಷುಲ್ಲಕ ಕಾರಣಕ್ಕೆ ಪವನ್ ಕಲ್ಯಾಣ್ ಅಭಿಮಾನಿಯನ್ನು ಕೊಂದ ಪ್ರಭಾಸ್ ಅಭಿಮಾನಿ

|

Updated on: Apr 23, 2023 | 5:58 PM

Prabhas-Pawan Kalyan: ತೆಲುಗು ನಟರ ಅಭಿಮಾನಿಗಳ ಅತಿರೇಕಕ್ಕೆ ಮತ್ತೊಂದು ಉದಾಹರಣೆ ದೊರಕಿದೆ. ಕ್ಷುಲ್ಲಕ ಕಾರಣಕ್ಕೆ ಪ್ರಭಾಸ್ ಅಭಿಮಾನಿಯೊಬ್ಬ ಪವನ್ ಕಲ್ಯಾಣ್ ಅಭಿಮಾನಿಯ ಹತ್ಯೆ ಮಾಡಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಪವನ್ ಕಲ್ಯಾಣ್ ಅಭಿಮಾನಿಯನ್ನು ಕೊಂದ ಪ್ರಭಾಸ್ ಅಭಿಮಾನಿ
ಪ್ರಭಾಸ್-ಪವನ್
Follow us on

ತೆಲುಗು ಸ್ಟಾರ್ ನಟರ (Tollywood Star) ಅಭಿಮಾನಿಗಳದ್ದು (Fan) ತುಸು ಅತಿರೇಕದ ಅಭಿಮಾನ. ನಟರ ಹೆಸರು ಹಚ್ಚೆ ಹಾಕಿಸಿಕೊಳ್ಳುವುದು, ನಟರನ್ನು ಭೇಟಿಯಾಗಲು ನೂರಾರು ಕಿ.ಮೀ ಗಟ್ಟಲೆ ನಡೆದು ಹೋಗುವುದು, ನೆಚ್ಚಿನ ನಟರ ಸಿನಿಮಾ ಬಿಡುಗಡೆಯಂದು ಕುರಿ, ಕೋಣ ಕಡಿಯುವುದು, ರಕ್ತದ ಅಭಿಷೇಕ ಮಾಡುವುದು ಇನ್ನೂ ಹಲವು ಅತಿರೇಕಗಳನ್ನು ಅಭಿಮಾನಿಗಳು ಅಲ್ಲಿ ಪ್ರದರ್ಶಿಸುತ್ತಿರುತ್ತಾರೆ. ಇಷ್ಟಕ್ಕೆ ನಿಲ್ಲದೆ ಸ್ಟಾರ್ ನಟರ ಅಭಿಮಾನಿಗಳು ಆಗಾಗ್ಗೆ ಗುಂಪು ಗಲಾಟೆಗೂ ಇಳಿಯುತ್ತಾರೆ, ಪರಸ್ಪರರ ಅಭಿಮಾನಿಗಳ ಕೊಲೆಗಳು ನಡೆದ ಉದಾಹರಣೆಯೂ ಇವೆ. ಇದೀಗ ಇಂಥಹುದೇ ಒಂದು ಕೆಟ್ಟ ಘಟನೆ ನಡೆದಿದೆ.

ಆಂಧ್ರದ ಅತ್ತಿಲಿಯಲ್ಲಿ ಪ್ರಭಾಸ್ (Prabhas) ಅಭಿಮಾನಿಯೊಬ್ಬ ಪವನ್ ಕಲ್ಯಾಣ್ (Pawan Kalyan) ಅಭಿಮಾನಿಯನ್ನು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿದ್ದಾನೆ. ಆಗಿದ್ದಿಷ್ಟು, ಕಿಶೋರ್ ಮತ್ತು ಹರಿಕುಮಾರ್ ಎಂಬ ಇಬ್ಬರು ಗೆಳೆಯರು ಈಲೂರಿನಿಂದ ಮನೆಯೊಂದಕ್ಕೆ ಬಣ್ಣ ಬಳಿಯುವ ಕಾರ್ಯಕ್ಕೆ ಅತ್ತಿಲಿಗೆ ಹೋಗಿದ್ದಾರೆ. ಪವನ್ ಕಲ್ಯಾಣ್ ಅಭಿಮಾನಿಯಾಗಿದ್ದ ಕಿಶೋರ್, ಪವನ್ ಕಲ್ಯಾಣ್ ವಿಡಿಯೋ ತುಣುಕೊಂದನ್ನು ವಾಟ್ಸ್​ಆಪ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಆಗಿ ಹಾಕಿಕೊಂಡಿದ್ದ. ಆದರೆ ಪ್ರಭಾಸ್ ಅಭಿಮಾನಿಯಾಗಿದ್ದ ಹರಿಕುಮಾರ್​ಗೆ ಇದು ಹಿಡಿಸದೆ ಅದನ್ನು ತೆಗೆದು ಪ್ರಭಾಸ್ ವಿಡಿಯೋ ಹಾಕಿಕೊಳ್ಳುವಂತೆ ಹೇಳಿದ್ದಾನೆ.

ಹರಿ ಹೇಳಿದಂತೆ ಪ್ರಭಾಸ್ ವಿಡಿಯೋ ಹಾಕಿಕೊಳ್ಳಲು ಒಪ್ಪದ ಕಿಶೋರ್ ಮೇಲೆ ಹರಿ ಜಗಳ ಮಾಡಿದ್ದು, ಜಗಳದ ನಡುವೆ ಅಲ್ಲಿಯೇ ಇದ್ದ ಕಬ್ಬಿಣದ ರಾಡ್ ಒಂದನ್ನು ತೆಗೆದುಕೊಂಡು ಕಿಶೋರ್​ ಮೇಲೆ ಹರಿ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿದ್ದ ಕಿಶೋರ್ ಅನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಜೀವ ಬಿಟ್ಟಿದ್ದಾನೆ. ಅತ್ತಿಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪ್ರಭಾಸ್ ಅಭಿಮಾನಿ ಹರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ರೀತಿಯ ಘಟನೆ ಇದು ಮೊದಲೇನೂ ಅಲ್ಲ. ಈ ಹಿಂದೆಯೂ ವಿವಿಧ ಸ್ಟಾರ್ ನಟರ ಅಭಿಮಾನಿಗಳ ನಡುವೆ ಜಗಳಗಳಾಗಿದ್ದವು. ಕೆಲ ವರ್ಷಗಳ ಹಿಂದೆ ಪವನ್ ಕಲ್ಯಾಣ್ ಅಭಿಮಾನಿಯೊಬ್ಬಾತನನ್ನು ಜೂ ಎನ್​ಟಿಆರ್ ಅಭಿಮಾನಿ ಇದೇ ರೀತಿಯ ತೀರ ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿದ್ದ. ಆ ಘಟನೆ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿಯೇ ನಡೆದಿತ್ತು.

ಆಂಧ್ರ-ತೆಲಂಗಾಣ ಮಾತ್ರವೇ ಅಲ್ಲದೆ ತಮಿಳುನಾಡಿನಲ್ಲಿಯೂ ಈ ರೀತಿಯ ಅತಿರೇಕದ ಅಭಿಮಾನಿಗಳಿದ್ದಾರೆ. 2020ರ ಸಮಯದಲ್ಲಿ ವಿಜಯ್ ಹಾಗೂ ರಜನೀಕಾಂತ್ ಅಭಿಮಾನಿಗಳಿಬ್ಬರು, ಇಬ್ಬರು ನಟರಲ್ಲಿ ಯಾರು ಹೆಚ್ಚು ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ ಎಂಬ ವಿಷಯಕ್ಕೆ ಜಗಳವಾಡಿ ಅದು ಒಬ್ಬನ ಹತ್ಯೆಯಲ್ಲಿ ಕೊನೆಯಾಗಿತ್ತು.

ಕರ್ನಾಟಕದಲ್ಲಿ ಇನ್ನೂ ಈ ಹಂತದ ಅತಿರೇಕದ ಅಭಿಮಾನ ಇಲ್ಲವಾದರೂ ನಿಧಾನಕ್ಕೆ ಅದು ಪ್ರಾರಂಭವಾಗುತ್ತಿರುವ ಮುನ್ಸೂಚನೆ ಅಲ್ಲಲ್ಲಿ ಕಾಣಲು ಸಿಗುತ್ತಿದೆ. ಒಬ್ಬ ನಟನ ಅಭಿಮಾನಿಗಳು ಇನ್ನೊಬ್ಬ ನಟನನ್ನು ಬೈಯ್ಯುವುದು, ನಟನ ಅಭಿಮಾನಿಗಳು ಒಟ್ಟು ಸೇರಿ ಬೈದ ವ್ಯಕ್ತಿಯನ್ನು ಹಿಡಿದು-ಬಡಿದು ಬುದ್ದಿ ಕಲಿಸುವುದು ಇನ್ನೂ ಇತ್ಯಾದಿಗಳು ಆಗಾಗ್ಗೆ ನಡೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ