
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಹಾಗೂ ನಿರ್ದೇಶಕ ಹನು ರಾಘವಪುಡಿ ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರುವ ‘ಫೌಜಿ’ (Fauzi) ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಹಾಗಾಗಿ ಸಹಜವಾಗಿಯೇ ಹೈಪ್ ಹೆಚ್ಚಿದೆ. ಆದರೆ, ಇತ್ತೀಚೆಗೆ ಚಿತ್ರೀಕರಣದ ಸ್ಥಳದಿಂದ ಕೆಲವು ಫೋಟೋಗಳು ಲೀಕ್ ಆಗಿದ್ದು, ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಅವರ ಲುಕ್ ವೈರಲ್ ಆಗಿರುವುದರಿಂದ ‘ಫೌಜಿ’ ಚಿತ್ರತಂಡ ವಾರ್ನಿಂಗ್ ನೀಡಿದೆ.
ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಭಾಸ್ ಅವರ ಈ ಸ್ಟೈಲಿಶ್ ಫೋಟೋಗಳನ್ನು ಕಂಡ ಪ್ರೇಕ್ಷಕರು ಇವು ಎಐ ಮೂಲಕ ಸೃಷ್ಟಿಸಿದ ಫೋಟೋಗಳು ಇರಬಹುದು ಎಂದು ಜನರು ಭಾವಿಸಿದ್ದರು. ಆದರೆ, ಚಿತ್ರತಂಡವು ಇದು ಚಿತ್ರೀಕರಣದ ನಿಜವಾದ ದೃಶ್ಯಗಳು ಎಂದು ಖಚಿತಪಡಿಸುತ್ತಿದ್ದಂತೆಯೇ ಫೋಟೋಗಳು ವೈರಲ್ ಆಗಿವೆ.
ಲೀಕ್ ಆಗಿರುವ ಫೋಟೋಗಳನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಶೇರ್ ಮಾಡಲು ಆರಂಭಿಸಿದ್ದಾರೆ. ಇದರಿಂದ ಚಿತ್ರದ ಮೇಲಿನ ಹೈಪ್ ಇನ್ನಷ್ಟು ಜಾಸ್ತಿ ಆಗಿದೆ ಎಂಬುದು ನಿಜ. ಆದರೂ ಲೀಕ್ ಬಗ್ಗೆ ಆಕ್ರೋಶಗೊಂಡಿರುವ ನಿರ್ಮಾಣ ಸಂಸ್ಥೆ, ‘ಈ ಫೋಟೋಗಳನ್ನು ಹಂಚಿಕೊಳ್ಳಬೇಡಿ, ಇದು ಚಿತ್ರದ ಅನುಭವವನ್ನು ಹಾಳುಮಾಡುತ್ತದೆ. ಫೋಟೋ ಶೇರ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನಿರ್ದೇಶಕ ಹನು ರಾಘವಪುಡಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ನಾವು ಹಗಲಿರುಳು ಕಷ್ಟಪಟ್ಟು ಸಿನಿಮಾವನ್ನು ಅದ್ಭುತವಾಗಿ ರೂಪಿಸುತ್ತಿದ್ದೇವೆ. ದಯವಿಟ್ಟು ಲೀಕ್ ಮಾಡುವ ಮೂಲಕ ಆ ಮ್ಯಾಜಿಕ್ ಅನ್ನು ಹಾಳುಮಾಡಬೇಡಿ. ಚಿತ್ರಮಂದಿರದಲ್ಲೇ ಈ ಅದ್ಭುತವನ್ನು ಆನಂದಿಸಿ’ ಎಂದು ವಿನಂತಿಸಿದ್ದಾರೆ.
ಇದನ್ನೂ ಓದಿ: ‘ನಿವೃತ್ತಿ ದಿನ ಹತ್ತಿರ ಬಂತು’; ಪ್ರಭಾಸ್ ಹೊಸ ಲುಕ್ ನೋಡಿ ಬಂತು ಟೀಕೆ
‘ಫೌಜಿ’ ಚಿತ್ರವು ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಇಮಾನ್ವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟರಾದ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಜಯಪ್ರದಾ ಮುಂತಾದವರು ಕೂಡ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಕನ್ನಡದ ನಟಿ ಚೈತ್ರಾ ಜೆ. ಆಚಾರ್ ಕೂಡ ಪಾತ್ರವರ್ಗದಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.