ಪ್ರಭಾಸ್, ರಾಮ್​ ಚರಣ್​, ಮಹೇಶ್​ ಬಾಬು​ ಕ್ವಾರಂಟೈನ್​; ಟಾಲಿವುಡ್​ನಲ್ಲಿ ಹೆಚ್ಚಾಯ್ತು ಕೊರೊನಾ ಕಾಟ

| Updated By: ರಾಜೇಶ್ ದುಗ್ಗುಮನೆ

Updated on: Apr 22, 2021 | 6:17 PM

Coronavirus: ದೇಶಾದ್ಯಂತ ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಇದರಿಂದ ಸೆಲೆಬ್ರಿಟಿಗಳೂ ತೊಂದರೆ ಅನುಭವಿಸುತ್ತಿದ್ದಾರೆ. ಪವನ್​ ಕಲ್ಯಾಣ್​ ಸೇರಿದಂತೆ ತೆಲುಗು ಚಿತ್ರರಂಗದ ಹಲವು ನಟರು ಈಗ ಕ್ವಾರಂಟೈನ್​ ಆಗಬೇಕಾಗಿದೆ.

ಪ್ರಭಾಸ್, ರಾಮ್​ ಚರಣ್​, ಮಹೇಶ್​ ಬಾಬು​ ಕ್ವಾರಂಟೈನ್​; ಟಾಲಿವುಡ್​ನಲ್ಲಿ ಹೆಚ್ಚಾಯ್ತು ಕೊರೊನಾ ಕಾಟ
ಪ್ರಭಾಸ್, ರಾಮ್ ಚರಣ್, ಮಹೇಶ್ ಬಾಬು
Follow us on

ಟಾಲಿವುಡ್​ ಮಂದಿಗೆ ಕೊರೊನಾ ವೈರಸ್​ ಸಿಕ್ಕಾಪಟ್ಟೆ ಕಾಟ ಕೊಡಲಾರಂಭಿಸಿದೆ. ಇಷ್ಟು ದಿನ ಆರಾಮಾಗಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರಿಗೆ ಈಗ ಭಯ ಶುರುವಾಗಿದೆ. ದೇಶಾದ್ಯಂತ ಕೊವಿಡ್​ 19 ಎರಡನೇ ಅಲೆ ಶುರುವಾಗಿದೆ. ಅನೇಕ ಸೆಲೆಬ್ರಿಟಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಪವನ್​ ಕಲ್ಯಾಣ್​ ಸೇರಿದಂತೆ ತೆಲುಗು ಚಿತ್ರರಂಗದ ಹಲವು ನಟರು ಈಗ ಕ್ವಾರಂಟೈನ್​ ಆಗಬೇಕಾಗಿದೆ. ಸ್ಟಾರ್​ ನಟರಾದ ಪ್ರಭಾಸ್​, ಮಹೇಶ್​ ಬಾಬು ಹಾಗೂ ರಾಮ್​ ಚರಣ್​ ಸೆಲ್ಫ್​ ಕ್ವಾರಂಟೈನ್​ ಆಗಿದ್ದಾರೆ.

ರಾಧೆ ಶ್ಯಾಮ್​, ಸಲಾರ್, ಆದಿ ಪುರುಷ್​ ಮುಂತಾದ ಸಿನಿಮಾ ಕೆಲಸಗಳಲ್ಲಿ ಪ್ರಭಾಸ್​ ತೊಡಗಿಕೊಂಡಿದ್ದರು. ಅವರ ಪರ್ಸನಲ್​ ಮೇಕಪ್​ ಕಲಾವಿದರಿಗೆ ಕೊರೊನಾ ವೈರಸ್​ ತಗುಲಿದೆ. ಹಾಗಾಗಿ ಪ್ರಭಾಸ್​ ಸೆಲ್ಫ್​ ಕ್ವಾರಂಟೈನ್​ ಆಗಬೇಕಾದ ಪರಿಸ್ಥಿತಿ ಬಂದಿದೆ. ಅವರ ಎಲ್ಲ ಸಿನಿಮಾ ಕೆಲಸಗಳಿಗೆ ಈಗ ಬ್ರೇಕ್​ ಹಾಕಲಾಗಿದೆ. ಅಲ್ಲದೆ, ಮಹೇಶ್​ ಬಾಬು ಕೂಡ ಇಂಥದ್ದೇ ಪರಿಸ್ಥಿತಿ ಎದುರಿಸುವಂತಾಗಿದೆ.

ಮಹೇಶ್​ ಬಾಬು ನಟನೆಯ ಸರ್ಕಾರು ವಾರಿ ಪಾಟ ಚಿತ್ರದ ಶೂಟಿಂಗ್​ ನಡೆಯುತ್ತಿತ್ತು. ಈ ವೇಳೆ ಮಹೇಶ್​ ಬಾಬು ಅವರ ಪರ್ಸನಲ್​ ಸ್ಟೈಲಿಸ್ಟ್​ಗೆ ಕೊರೊನಾ ವೈರಸ್​ ಪಾಸಿಟಿವ್​ ಆಗಿರುವುದು ಧೃಡಪಟ್ಟಿದೆ. ಕೂಡಲೇ ಮಹೇಶ್​ ಬಾಬು ಅವರು ಫ್ಯಾಮಿಲಿ ಡಾಕ್ಟರ್​ರನ್ನು ಭೇಟಿ ಆಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸೆಲ್ಫ್​ ಐಸೋಲೇಟ್​ ಆಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಸದ್ಯ ಈ ಪರಿಸ್ಥಿತಿಯಲ್ಲಿ ಸರ್ಕಾರು ವಾರಿ ಪಾಟ ಚಿತ್ರದ ಶೂಟಿಂಗ್​ ಸ್ಥಗಿತಗೊಳಿಸಲಾಗಿದೆ.

ಇನ್ನು, ರಾಮ್​ ಚರಣ್​ ಕೂಡ ಐಸೋಲೇಟ್​ ಆಗಿದ್ದಾರೆ. ಚಿರಂಜೀವಿ ಅವರ ಕ್ಯಾರವಾನ್ ಚಾಲಕ ಕೊರೊನಾ ವೈರಸ್​ನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ರಾಮ್​ ಚರಣ್​ ನಿರ್ಮಾಣ ಮಾಡುತ್ತಿರುವ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿರುವ ಸೋನು ಸೂದ್​ ಅವರಿಗೆ ಕೊವಿಡ್​ 19 ಪಾಸಿಟಿವ್​ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ರಾಮ್​ ಚರಣ್​ ಈಗ ಸೆಲ್ಫ್​ ಐಸೊಲೇಟ್​ ಆಗಿರುವ ಬಗ್ಗೆ ಸುದ್ದಿ ಕೇಳಿಬಂದಿದೆ. ಕಳೆದ ವರ್ಷ ಅವರಿಗೆ ಕೊರೊನಾ ವೈರಸ್​ ತಗುಲಿತ್ತು. ನಂತರ ಗುಣಮುಖರಾಗಿದ್ದರು. ಹಾಗಾಗಿ ಈ ಬಾರಿ ಅವರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಚಿರಂಜೀವಿ ಕ್ಯಾರವಾನ್ ಚಾಲಕ ಕೊರೊನಾದಿಂದ ನಿಧನ; ಮೆಗಾಸ್ಟಾರ್ ಅಭಿಮಾನಿಗಳಲ್ಲಿ ಆತಂಕ

(Prabhas Mahesh Babu Ram Charan isolated themselves due to coronavirus second wave)