ನೆಗೆಟಿವ್ ‘ಬುಜ್ಜಿ’ ಜೊತೆ ಪಾಸಿಟಿವ್ ‘ಭೈರವ’, ಬಿಡುಗಡೆ ಆಯ್ತು ‘ಕಲ್ಕಿ’ ಹೊಸ ಟೀಸರ್
ಪ್ರಭಾಸ್ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾದ ಹೊಸ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಮುಖ ಪಾತ್ರಗಳಾದ ‘ಭೈರವ’ ಹಾಗೂ ‘ಬುಜ್ಜಿ’ಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಲಾಗಿದೆ. ಸಿನಿಮಾ ಜೂನ್ 27ಕ್ಕೆ ಬಿಡುಗಡೆ ಆಗಲಿದೆ.
ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898’ (Kalki 2898 ad) ಸಿನಿಮಾ ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾವು ಭೂತ ಹಾಗೂ ಭವಿಷ್ಯದ ಕುರಿತಾಗಿದ್ದು, ಹಾಲಿವುಡ್ನ (Hollywood) ‘ಡ್ಯೂನ್’, ‘ಸ್ಟಾರ್ ವಾರ್ಸ್’ ಅನ್ನು ನೆನಪಿಸುವಂತಿದೆ ಮೇಕಿಂಗ್. ಚಿತ್ರತಂಡ ಕೆಲ ದಿನಗಳ ಹಿಂದೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ‘ಬುಜ್ಜಿ’ ಹಾಗೂ ‘ಭೈರವ’ನ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸುವುದಾಗಿ ಹೇಳಿತ್ತು. ಅಂತೆಯೇ ಇಂದು ಅದ್ಧೂರಿ ಕಾರ್ಯಕ್ರಮ ಮಾಡಿ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಟೀಸರ್ನಲ್ಲಿ ‘ಬುಜ್ಜಿ’ ಹಾಗೂ ‘ಭೈರವ’ನನ್ನು ಪರಿಚಯಿಸಲಾಗಿದೆ.
ಸಿನಿಮಾದಲ್ಲಿ ವಾರಿಯರ್ ‘ಭೈರವ’ನಾಗಿ ಪ್ರಭಾಸ್ ನಟಿಸಿದ್ದಾರೆ. ಅತ್ಯಾಧುನಿಕ ಆರ್ಮರ್ ಉಡುಪು ತೊಟ್ಟು ಸಖತ್ ಸ್ಟೈಲಿಷ್ ಆಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈ ಭೈರವನ ಗೆಳೆಯನೇ ಬುಜ್ಜಿ. ಈ ಬುಜ್ಜಿ ಮನುಷ್ಯನಲ್ಲ ಬದಲಿಗೆ ‘ಮಷಿನ್ ಮನುಷ್ಯ’. ಮಾತನಾಡುವ, ಸ್ವಂತವಾಗಿ ಯೋಚಿಸುವ ಬುಜ್ಜಿ, ಸದಾ ನೆಗೆಟಿವ್ ಆಗಿಯೇ ಯೋಚಿಸುತ್ತದೆ. ಭೈರವ ಯಾವುದನ್ನು ಆಗುತ್ತದೆ ಎಂದುಕೊಳ್ಳುತ್ತಾನೊ ಅದನ್ನು ಆಗುವುದಿಲ್ಲ ಎಂದು ಹೇಳುವುದೇ ಬುಜ್ಜಿಯ ಕೆಲಸ. ಭೈರವನ ಕಾಲೆಳೆಯುವುದು, ಭೈರವನಿಗೆ ಕೋಪ ತರಿಸುವುದೆಂದರೆ ಬುಜ್ಜಿಗೆ ಬಲು ಪ್ರೀತಿ. ಆದರೂ ಭೈರವನಿಗೆ ಬುಜ್ಜಿಯ ಮೇಲೆ ವಿಪರೀತಿ ಲವ್.
ಇದನ್ನೂ ಓದಿ:ಸಿನಿಮಾ ಪ್ರಚಾರಕ್ಕೆ ಮದುವೆ ವಿಚಾರ ಎಳೆತಂದ ಪ್ರಭಾಸ್? ಸ್ಟೇಟಸ್ ಅರ್ಥ ಏನು?
ಇದೀಗ ಬಿಡುಗಡೆ ಆಗಿರುವ ಟೀಸರ್, ಕೇವಲ ಬುಜ್ಜಿ ಹಾಗೂ ಭೈರವನಿಗಷ್ಟೆ ಸೀಮಿತವಾಗಿದೆ. ಬೇರೆ ಪಾತ್ರಗಳನ್ನು ಟೀಸರ್ನಲ್ಲಿ ತೋರಿಸಲಾಗಿಲ್ಲ. ಪ್ರಭಾಸ್ರ ಅತ್ಯಾಧುನಿಕ ವಾರ್ ಮಷಿನ್, ಮರಳಿನ ಮೇಲೆ ನಡೆಯುವ ಅದ್ಭುತ ಚೇಸ್ನ ದೃಶ್ಯಗಳು ಇದೀಗ ಬಿಡುಗಡೆ ಆಗಿರುವ ಟೀಸರ್ನಲ್ಲಿವೆ. ‘ಕಲ್ಕಿ’ ಸಿನಿಮಾವನ್ನು ಪಕ್ಕಾ ಹಾಲಿವುಡ್ ರೇಂಜ್ನಲ್ಲಿ ನಿರ್ಮಿಸಿರುವುದು ಟೀಸರ್ನಲ್ಲಿ ಎದ್ದು ಕಾಣುತ್ತಿದೆ. ಆಕ್ಷನ್ ಜೊತೆಗೆ ಬುಜ್ಜಿಯ ಕಾಮಿಡಿ ಟಚ್ ಅನ್ನು ಪ್ರೇಕ್ಷಕರು ಸಖತ್ ಎಂಜಾಯ್ ಮಾಡಲಿರುವುದು ಪಕ್ಕಾ.
ಇಂದು ನಡೆದ ಕಾರ್ಯಕ್ರಮದಲ್ಲಿ ಸಹ ಪ್ರಭಾಸ್ ಅದ್ಧೂರಿಯಾಗಿ ವಾರ್ ಮಷಿನ್ ನಲ್ಲಿಯೇ ಎಂಟ್ರಿ ಕೊಟ್ಟಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಸ್, ಚಿತ್ರತಂಡದ ಪ್ರಮುಖ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. ನಿರ್ಮಾಪಕ ಅಶ್ವಿನ್ ದತ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದ ಪ್ರಭಾಸ್, ಅವರ ಪುತ್ರಿಯರ ಎನರ್ಜಿ ಹಾಗೂ ಸಿನಿಮಾ ಮೇಲಿನ ಪ್ರೀತಿಯ ಬಗ್ಗೆಯೂ ಕೊಂಡಾಡಿದರು. ಸಿನಿಮಾದಲ್ಲಿ ಪ್ರಭಾಸ್ ಮಾತ್ರವಲ್ಲದೆ ಹಲವು ಸ್ಟಾರ್ ನಟ-ನಟಿಯರಿದ್ದಾರೆ. ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸೇರಿದಂತೆ ಇನ್ನೂ ಕೆಲವು ಸ್ಟಾರ್ ನಟರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ಸಂಗೀತವನ್ನು ಸಂತೋಷ್ ನಾರಾಯಣ್ ನೀಡಿದ್ದಾರೆ. ಸಿನಿಮಾ ಜೂನ್ 27 ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ