ಪ್ರಭಾಸ್ (Prabhas) ನಟನೆಯ ‘ರಾಧೆ ಶ್ಯಾಮ್’ (Radhe Shyam) ಸಿನಿಮಾ ಮಾರ್ಚ್ 11ರಂದು ತೆರೆಗೆ ಬರೋಕೆ ರೆಡಿ ಆಗಿದೆ. ಈ ಚಿತ್ರದ ಬಗ್ಗೆ ವೀಕ್ಷಕರಿಗೆ ಸಖತ್ ನಿರೀಕ್ಷೆ ಇದೆ. ಕೊವಿಡ್ ಮೂರನೇ ಅಲೆ ಕಾಣಿಸಿಕೊಳ್ಳದೆ ಇದ್ದಿದ್ದರೆ ಈಗಾಗಲೇ ಸಿನಿಮಾ ತೆರೆಗೆ ಅಪ್ಪಳಿಸಿರುತ್ತಿತ್ತು. ಆದರೆ, ಹಾಗಾಗಲಿಲ್ಲ. ಜನವರಿ 14ರಂದು ತೆರೆಗೆ ಬರಬೇಕಿದ್ದ ಸಿನಿಮಾದ ರಿಲೀಸ್ ದಿನಾಂಕ ವಿಳಂಬವಾಯಿತು. ಈಗ ಸಿನಿಮಾ ತಂಡ ಮಾರ್ಚ್ ತಿಂಗಳಲ್ಲಿ ಬರೋಕೆ ಡೇಟ್ ಲಾಕ್ ಮಾಡಿದೆ. ಸಿನಿಮಾದ ಟ್ರೇಲರ್ ನೋಡಿದ ವೀಕ್ಷಕರಿಗೆ ದೊಡ್ಡ ನಿರೀಕ್ಷೆ ಹುಟ್ಟಿದೆ. ಸಿನಿಮಾ ಗೆಲ್ಲಬಹುದು ಎನ್ನುವ ಅಭಿಪ್ರಾಯದಲ್ಲಿ ಪ್ರಭಾಸ್ ಅಭಿಮಾನಿಗಳಿದ್ದಾರೆ. ಈ ಮಧ್ಯೆ ಚಿತ್ರದ ಒಟಿಟಿ ರಿಲೀಸ್ ದಿನಾಂಕ ವಿಳಂಬವಾಗುವ ಸೂಚನೆ ಸಿಕ್ಕಿದೆ. ಇದಕ್ಕೆ ಕಾರಣವಾಗಿದ್ದು, ಚಿತ್ರದ ಸಂಗೀತ ನಿರ್ದೇಶಕ ಎಸ್. ಥಮನ್ (S. Thaman) ನೀಡಿದ ಹೇಳಿಕೆ.
ಒಟಿಟಿ ವ್ಯಾಪ್ತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅಮೇಜಾನ್ ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್ ಸೇರಿ ಅನೇಕ ಒಟಿಟಿ ಪ್ಲಾಟ್ಫಾರ್ಮ್ಗಳು ಸ್ಟಾರ್ ನಟರ ಚಿತ್ರಗಳನ್ನು ಖರೀದಿ ಮಾಡೋಕೆ ಹೆಚ್ಚು ಆಸಕ್ತಿ ತೋರಿಸುತ್ತಿವೆ. ಕೆಲ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಬೇಕು ಎನ್ನುವ ಉದ್ದೇಶದಿಂದ ಸಿದ್ಧಪಡಿಸಿರಲಾಗುತ್ತದೆ. ಹೀಗಾಗಿ, ನೇರವಾಗಿ ಒಟಿಟಿಗೆ ಕಾಲಿಡೋಕೆ ಚಿತ್ರತಂಡ ಇಷ್ಟಪಡುವುದಿಲ್ಲ. ಆದರೆ, ರಿಲೀಸ್ ಆದ ಕೆಲವೇ ವಾರಗಳಲ್ಲಿ ದೊಡ್ಡ ಚಿತ್ರಗಳು ಒಟಿಟಿಗೆ ಬಂದ ಉದಾಹರಣೆ ಸಾಕಷ್ಟಿದೆ. ಆದರೆ, ‘ರಾಧೆ ಶ್ಯಾಮ್’ ಚಿತ್ರ ಈ ರೀತಿ ಆಗೋದಿಲ್ಲ ಎನ್ನುವ ಸೂಚನೆಯನ್ನು ಥಮನ್ ಅವರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಥಮನ್, ‘ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರ ನಿಜಕ್ಕೂ ಅದ್ಭುತ ಚಿತ್ರ. ಈ ಸಿನಿಮಾ ಚಿತ್ರಮಂದಿರದಲ್ಲಿ ಸಾಕಷ್ಟು ದಿನಗಳ ಕಾಲ ಇರಲಿದೆ. ಈ ಸಿನಿಮಾವನ್ನು ತಡೆಯೋರು ಯಾರು ಇಲ್ಲ ಅನ್ನೋದು ನನ್ನ ಅಭಿಪ್ರಾಯ. ಈ ಚಿತ್ರ ನನ್ನನ್ನು ಬೇರೆಯದೇ ಲೋಕಕ್ಕೆ ಕರೆದೊಯ್ದಿತ್ತು’ ಎಂದಿದ್ದಾರೆ. ಈ ಮೂಲಕ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ ಎಂದಿದ್ದಾರೆ.
‘ಪ್ರೀತಿ ಇದ್ದರೆ, ಪ್ರೀತಿ ನಿಜವಾಗಿದ್ದರೆ, ‘ರಾಧೆ ಶ್ಯಾಮ್’ ನಿಜವಾಗಿಯೂ ಗೆಲ್ಲುವ ಚಿತ್ರವಾಗಲಿದೆ. ನಿರ್ದೇಶಕ ರಾಧಾಕೃಷ್ಣ ಚಿತ್ರವನ್ನು ನಿಜವಾಗಿಯೂ ಬೇರೊಂದು ಹಂತಕ್ಕೆ ಕರೆದೊಯ್ದಿದ್ದಾರೆ’ ಎಂದು ಥಮನ್ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಚಿತ್ರಕ್ಕೆ ರಾಧಾಕೃಷ್ಣ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘ರಾಧೆ ಶ್ಯಾಮ್’ ತೆರೆಕಾಣಲಿದೆ. ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಈ ಸಿನಿಮಾ ಪ್ರಭಾಸ್ ವೃತ್ತಿಜೀವನದ ಡಿಫರೆಂಟ್ ಚಿತ್ರ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಸಲಾರ್’ಗೂ ‘ಕೆಜಿಎಫ್’ ಫಾರ್ಮುಲಾ; ಎರಡು ಪಾರ್ಟ್ನಲ್ಲಿ ಬರಲಿದೆ ಪ್ರಭಾಸ್-ಪ್ರಶಾಂತ್ ನೀಲ್ ಸಿನಿಮಾ
ಹೊಸ ಬಿಡುಗಡೆ ದಿನಾಂಕ ಘೋಷಿಸಿದ ರಾಧೆ ಶ್ಯಾಮ್ ಚಿತ್ರ ತಂಡ; ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್