‘ಕೆಜಿಎಫ್: ಚಾಪ್ಟರ್ 1’ ಚಿತ್ರದಿಂದ ಭಾರಿ ಜನಪ್ರಿಯತೆ ಪಡೆದ ಪ್ರಶಾಂತ್ ನೀಲ್ (Prashanth Neel), ಬಳಿಕ ಪರಭಾಷೆಯಲ್ಲೂ ಬಹುಬೇಡಿಕೆಯ ನಿರ್ದೇಶಕರಾದರು. ಯಶ್ ಜೊತೆ ಮಾಡುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನವೇ ಅವರು ‘ಸಲಾರ್’ (Salaar) ಚಿತ್ರವನ್ನು ಕೈಗೆತ್ತಿಕೊಂಡರು. ಪ್ರಭಾಸ್ (Prabhas) ನಾಯಕತ್ವದ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ಗಳು ಹೈಪ್ ಸೃಷ್ಟಿ ಮಾಡಿವೆ. ದೊಡ್ಡ ಕ್ಯಾನ್ವಾಸ್ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈಗ ‘ಸಲಾರ್’ ಬಗ್ಗೆ ಎರಡು ಹೊಸ ಗುಸುಗುಸು ಕೇಳಿಬರುತ್ತಿದೆ.
ಮೂಲಗಳ ಪ್ರಕಾರ, ‘ಸಲಾರ್’ ಚಿತ್ರದಲ್ಲಿ ಎರಡು ಪ್ರಮುಖ ಬೆಳವಣಿಗೆಗಳು ಆಗವೆ. ಈ ಚಿತ್ರದ ಕಥೆಗೆ ಒಂದು ಫ್ಲ್ಯಾಶ್ಬ್ಯಾಕ್ ದೃಶ್ಯವನ್ನು ಸೇರಿಸಲು ಪ್ರಶಾಂತ್ ನೀಲ್ ಪ್ಲ್ಯಾನ್ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಮೊದಲಿನ ಸ್ಕ್ರಿಪ್ಟ್ನಲ್ಲಿ ಈ ದೃಶ್ಯ ಇರಲೇ ಇಲ್ಲ. ಈಗ ಹೊಸದಾಗಿ ಫ್ಲ್ಯಾಶ್ಬ್ಯಾಕ್ ಸೇರಿಸಲಾಗುತ್ತಿದ್ದು, ಅದರಲ್ಲಿ ಬಾಲಿವುಡ್ನ ಹಿರಿಯ ನಟರೊಬ್ಬರು ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.
‘ಸಲಾರ್’ ಬಗ್ಗೆ ಕೇಳಿಬರುತ್ತಿರುವ ಇನ್ನೊಂದು ಗಾಸಿಪ್ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ಸಂಬಂಧಿಸಿದ್ದು. ‘ಸಲಾರ್’ನಲ್ಲಿ ಒಂದು ಐಟಂ ಸಾಂಗ್ ಇರಲಿದ್ದು, ಅದಕ್ಕೆ ಶ್ರೀನಿಧಿ ಶೆಟ್ಟಿ ಹೆಜ್ಜೆ ಹಾಕಿದರೆ ಸೂಕ್ತ ಎಂಬ ಆಲೋಚನೆ ಪ್ರಶಾಂತ್ ನೀಲ್ ಮನದಲ್ಲಿ ಮೂಡಿದೆ. ಆದರೆ ಅದರ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಘೋಷಣೆ ಆಗಿಬೇಕಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬಾಹುಬಲಿ ಸರಣಿ ಸಿನಿಮಾಕ್ಕಾಗಿ ಹೆಚ್ಚು ಸಮಯ ತೆಗೆದುಕೊಂಡಿದ್ದ ಪ್ರಭಾಸ್ ಅವರು ಈಗ ವೇಗವಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸಾಹೋ ನಂತರ ಅವರು ಬ್ಯಾಕ್ ಟು ಬ್ಯಾಕ್ ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ‘ರಾಧೆ ಶ್ಯಾಮ್’, ‘ಸಲಾರ್’, ‘ಆದಿಪುರುಷ್’ ಮುಂತಾದ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತ ಪ್ರಶಾಂತ್ ನೀಲ್ ಕೂಡ ಬ್ಯುಸಿ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಕೆಲಸಗಳು ಲಾಕ್ಡೌನ್ ಕಾರಣದಿಂದ ತಡವಾಗಿವೆ. ಹಾಗಾಗಿ ಬಿಡುಗಡೆ ದಿನಾಂಕ ಕೂಡ ಮುಂದೆ ಹೋಗಿದೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರಬೇಕು ಎಂದು ಅವರು ಶ್ರಮಿಸುತ್ತಿದ್ದಾರೆ. ಶೀಘ್ರದಲ್ಲೇ ‘ಕೆಜಿಎಫ್ 2’ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ:
ಪ್ರಶಾಂತ್ ನೀಲ್ ಕಡೆಯಿಂದ ‘ಕೆಜಿಎಫ್ 2’ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಪಡೆಯಲಿರುವ ವಿಶೇಷ ಅಭಿಮಾನಿ
Prabhas: ‘ಸಲಾರ್’ ಜೊತೆ ಕೇಳಿಬಂತು ಜ್ಯೋತಿಕಾ ಹೆಸರು; ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತು ಏನು?