ಹೊಂಬಾಳೆ ಜೊತೆಗೆ 3 ಸಿನಿಮಾಕ್ಕೆ ಒಪ್ಪಂದ: ಕಾರಣ ತಿಳಿಸಿದ ಪ್ರಭಾಸ್
Prabhas with Hombale: ಪ್ರಭಾಸ್ ಜೊತೆಗೆ ಸಿನಿಮಾ ಮಾಡಲು ದೊಡ್ಡ-ದೊಡ್ಡ ನಿರ್ಮಾಪಕರು ಚೆಕ್ ಬುಕ್ ಹಿಡಿದುಕೊಂಡು ಸಾಲುಗಟ್ಟಿ ನಿಂತಿದ್ದಾರೆ. ಆದರೆ ಪ್ರಭಾಸ್ ಯಾರಿಗೂ ಸಹ ಅಷ್ಟು ಸುಲಭಕ್ಕೆ ಡೇಟ್ಸ್ ನೀಡುವುದಿಲ್ಲ. ತೆಲುಗಿನ ಹಳೆಯ ನಿರ್ಮಾಪಕರಿಗೇ ಸೊಪ್ಪು ಹಾಕದ ನಟ ಪ್ರಭಾಸ್, ಕರ್ನಾಟಕದ ನಿರ್ಮಾಣ ಸಂಸ್ಥೆ ಹೊಂಬಾಳೆ ಜೊತೆಗೆ ಮೂರು ಸಿನಿಮಾಗಳಿಗೆ ಒಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದೇಕೆಂದು ಅವರೇ ಹೇಳಿದ್ದಾರೆ.

ನಟ ಪ್ರಭಾಸ್ (Prabhas) ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ಸಿನಿಮಾ ನಿರ್ಮಾಪಕರು ಕಾತರರಾಗಿ ಕಾಯುತ್ತಿದ್ದಾರೆ. ಪ್ರಭಾಸ್ ಕೇಳಿದಷ್ಟು ಹಣವನ್ನು ಸಂಭಾವನೆಯಾಗಿ ಕೊಡಲು ಬಾಲಿವುಡ್ ನಿರ್ಮಾಪಕರೇ ಸಾಲುಗಟ್ಟಿದ್ದಾರೆ. ಆದರೆ ಪ್ರಭಾಸ್ ಸಿಕ್ಕ ಸಿಕ್ಕವರಿಗೆಲ್ಲ ಡೇಟ್ಸ್ ಕೊಡುವುದಿಲ್ಲ. ಪ್ರಭಾಸ್ಗೆ ಸಿನಿಮಾದ ಕತೆ, ತಮ್ಮ ಪಾತ್ರದ ಜೊತೆಗೆ ಯಾವ ಬ್ಯಾನರ್ಗಾಗಿ ಕೆಲಸ ಮಾಡುತ್ತಿದ್ದೀನಿ ಎಂಬುದು ಸಹ ಅಷ್ಟೆ ಮುಖ್ಯ. ಅಳೆದು ತೂಗಿ ನಿರ್ಮಾಪಕರನ್ನು ಆಯ್ಕೆ ಮಾಡುವ ಪ್ರಭಾಸ್, ಹೊಂಬಾಳೆ ಜೊತೆಗೆ ಒಂದೇ ಬಾರಿಗೆ ಮೂರು ಸಿನಿಮಾಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ!
ಹೌದು, ನಟ ಪ್ರಭಾಸ್, ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆಯೊಟ್ಟಿಗೆ ಬರೋಬ್ಬರಿ ಮೂರು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಅದೂ ಸಿನಿಮಾದ ಕತೆ, ನಿರ್ದೇಶಕ ಯಾವುದರ ಬಗ್ಗೆಯೂ ಯೋಚನೆ ಮಾಡದೆ ಒಂದೇ ಬಾರಿಗೆ ಮೂರು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಮೂರು ಸಿನಿಮಾ ಮುಂದಿನ ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಬಿಡುಗಡೆ ಆಗಲಿದೆ. ತಾವು ಏಕೆ ಹೊಂಬಾಳೆ ಜೊತೆಗೆ ಮೂರು ಸಿನಿಮಾ ಒಟ್ಟಿಗೆ ಸಹಿ ಮಾಡಿದೆ ಎಂದು ಸ್ವತಃ ಪ್ರಭಾಸ್ ಹೇಳಿಕೊಂಡಿದ್ದಾರೆ.
ಪ್ರಭಾಸ್ ಹೊಂಬಾಳೆ ಜೊತೆಗೆ ಒಟ್ಟಿಗೆ ಮೂರು ಸಿನಿಮಾ ಸಹಿ ಮಾಡಲು ನಿರ್ಮಾಪಕ ವಿಜಯ್ ಕಿರಗಂದೂರು ಅವರೇ ಕಾರಣ ಅಂತೆ. ‘ವಿಜಯ್ ಕಿರಗಂದೂರು, ತಮ್ಮ ಸಿನಿಮಾಕ್ಕೆ ಕೆಲಸ ಮಾಡುವ ಜನರನ್ನು ನೋಡಿಕೊಳ್ಳುವ ರೀತಿ, ಕೇರ್ ಮಾಡುವ ರೀತಿಗೆ ನಾನು ಮಾರು ಹೋದೆ. ಅವರೂ ಸಹ ನನ್ನಂತೆಯೇ. ತಮ್ಮ ಬಾಲ್ಯದ ಗೆಳೆಯರನ್ನು ಸದಾ ಹತ್ತಿರ ಇಟ್ಟುಕೊಂಡಿರುತ್ತಾರೆ. ಹೆಚ್ಚಿನ ಸಮಯ ಮನೆಯಲ್ಲೇ ಇರುತ್ತಾರೆ. ಹೊರಗೆ ಹೋಗುವುದು ಇಷ್ಟಪಡುವುದಿಲ್ಲ’ ಎಂದಿದ್ದಾರೆ ಪ್ರಭಾಸ್.
ಇದನ್ನೂ ಓದಿ:ಶೂಟಿಂಗ್ ಬಿಟ್ಟು ಸಿನಿಮಾ ನೋಡಲು ಹೋದ ಪ್ರಭಾಸ್, ಪ್ರಶಾಂತ್ ನೀಲ್; ಯಾವುದು ಆ ಚಿತ್ರ?
ಇದೆಲ್ಲದರ ಜೊತೆಗೆ ವಿಜಯ್ ಕಿರಗಂದೂರು ಬಹಳ ಸರಳವಾದ ವ್ಯಕ್ತಿ, ವಿನಯವಂತ ವ್ಯಕ್ತಿ, ಅತಿಯಾಸೆ ಇಲ್ಲದ ವ್ಯಕ್ತಿ, ‘ಸಲಾರ್’ ಸಿನಿಮಾದ ಬಳಿಕ ವಿಜಯ್ ಕಿರಗಂದೂರು ನಮ್ಮ ಕುಟುಂಬದವರಂತೆ ಆಗಿಬಿಟ್ಟಿದ್ದಾರೆ. ಅವರಿಗೂ ನನಗೂ ಇರುವ ಸಾಮ್ಯತೆಗಳಿಂದಾಗಿ ನಮ್ಮಿಬ್ಬರ ನಡುವೆ ಕನೆಕ್ಷನ್ ನ್ಯಾಚುರಲ್ ಆಗಿ ಆಯಿತು. ಇದೇ ಕಾರಣಕ್ಕೆ ಅವರೊಟ್ಟಿಗೆ ನಾನು ಒಟ್ಟಿಗೆ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದೇನೆ’ ಎಂದಿದ್ದಾರೆ ಪ್ರಭಾಸ್.
ಹೊಂಬಾಳೆ ಫಿಲಮ್ಸ್ ನಿರ್ಮಾಣದ ‘ಸಲಾರ್’ ಸಿನಿಮಾನಲ್ಲಿ ಪ್ರಭಾಸ್ ನಟಿಸಿದ್ದಾರೆ. ಅದರ ಬಳಿಕ ಒಟ್ಟಿಗೆ ಮೂರು ಸಿನಿಮಾಕ್ಕೆ ಸಹಿ ಮಾಡಿದ್ದು ಅದರಲ್ಲಿ ಒಂದು ‘ಸಲಾರ್ 2’. ಈ ಸಿನಿಮಾದ ಬಳಿಕ ಇನ್ನೂ ಎರಡು ಸಿನಿಮಾಗಳನ್ನು ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನದ ಒಂದು ಸಿನಿಮಾನಲ್ಲಿ ಪ್ರಭಾಸ್ ನಟಿಸಲಿದ್ದು, ಆ ಸಿನಿಮಾವನ್ನು ಹೊಂಬಾಳೆ ನಿರ್ಮಿಸುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




