ಏಕರೂಪ ಸಿನಿಮಾ ಟಿಕೆಟ್ ದರ, 10 ವರ್ಷ ಪ್ರಯತ್ನದ ಫಲ: ಸಾರಾ ಗೋವಿಂದು
Sa Ra Govindu: ಕರ್ನಾಟಕ ರಾಜ್ಯ ಸರ್ಕಾರ ಏಕರೂಪ ಸಿನಿಮಾ ಟಿಕೆಟ್ ದರ ಪಾಲಿಸುವಂತೆ ಆದೇಶ ಮಾಡಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಯಾವುದೇ ಚಿತ್ರಮಂದಿರಗಳ ಟಿಕೆಟ್ ದರ 200 ರೂಪಾಯಿ ದಾಟುವಂತೆ ಇಲ್ಲ. ಈ ಬಗ್ಗೆ ಫಿಲಂ ಚೇಂಬರ್ನಲ್ಲಿ ಇಂದು (ಜುಲೈ 17) ಸುದ್ದಿಗೋಷ್ಠಿ ನಡೆಸಲಾಯ್ತು. ಸುದ್ದಿಗೋಷ್ಠಿಯಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು, ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿದ್ದಾರೆ.

ಸಿನಿಮಾ (Cinema) ಟಿಕೆಟ್ ದರಗಳನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಾ ಗೋವಿಂದು, ‘ಇದು ಹತ್ತು ವರ್ಷದ ಸತತ ಹೋರಾಟಕ್ಕೆ ಸಿಕ್ಕ ಜಯ’ ಎಂದಿದ್ದಾರೆ. ಸಿನಿಮಾ ಟಿಕೆಟ್ ದರಗಳಲ್ಲಿ ಏಕರೂಪತೆ ಇರಬೇಕು, ದರಗಳನ್ನು ಇಳಿಸಬೇಕು ಎಂದು 2015 ರಿಂದಲೂ ಬೇಡಿಕೆ ಇಡುತ್ತಲೇ ಬರುತ್ತಿದ್ದೆವು. ಹಲವು ಬಾರಿ ಚರ್ಚೆಗಳು, ಸಭೆಗಳು ನಡೆದಿದ್ದವು. ಆದೇಶ ಜಾರಿ ಆಗಿ ಬಳಿಕ ರದ್ದಾಗಿದ್ದೂ ಇದೆ’ ಎಂದಿದ್ದಾರೆ ಸಾರಾ ಗೋವಿಂದು.
2015 ರಿಂದಲೂ ನಾವು ಸರ್ಕಾರದ ಮೇಲೆ ಒತ್ತಡ ತರುತ್ತಲೇ ಇದ್ದೆವು. 2016 ರಲ್ಲಿ ನಾನು ಫಿಲಂ ಚೇಂಬರ್ ಅಧ್ಯಕ್ಷನಾಗಿದ್ದಾಗ ರಾಜೇಂದ್ರ ಸಿಂಗ್ ಬಾಬು ಹಾಗೂ ಜಯಮಾಲಾ ಅವರೊಟ್ಟಿಗೆ ಹೋಗಿ ಸಿನಿಮಾ ಟಿಕೆಟ್ ದರ ಕಡಿಮೆ ಮಾಡಬೇಕೆಂದು ಕ್ಯಾಬಿನೆಟ್ ನಲ್ಲಿ ಮನವಿ ಮಾಡಿದ್ದೆವು. ಆಗ ವಾರ್ತಾ ಇಲಾಖೆ ಮಂತ್ರಿಗಳು ಸಭೆ ಕರೆದು ಚರ್ಚೆ ಮಾಡಿದ್ದರು. ಪರ ಭಾಷೆ ಇಂದ 96 ಕೋಟಿ ರೂಪಾಯಿ, ಕನ್ನಡದಿಂದ 36 ಕೋಟಿ ಟ್ಯಾಕ್ಸ್ ಬಂದಿದೆ ಅಂದಿದ್ದರು. ಆಗ ಸಿದ್ದರಾಮಯ್ಯ ಮೊದಲು ಕನ್ನಡ ಆಮೇಲೆ ಪರಭಾಷೆ, ಟ್ಯಾಕ್ಸ್ ನಮ್ಮ ಆದ್ಯತೆ ಅಲ್ಲ ಎಂದು ಸ್ಪಷ್ಟಪಡಿಸಿದ್ದರು’ ಎಂದು ನೆನಪು ಮಾಡಿಕೊಂಡರು ಸಾರಾ ಗೋವಿಂದು.
2017 ರಲ್ಲಿ ವಾರ್ತ ಇಲಾಖೆ ದರ ಪರೀಕ್ಷರಣೆ ಆದೇಶ ಹೊರಡಿಸಿತ್ತು, ಆಗ ಮಲ್ಟಿಪ್ಲೆಕ್ಸ್ ನವರು ನ್ಯಾಯಾಲಯಕ್ಕೆ ಹೋಗಿ ಆದೇಶಕ್ಕೆ ತಡೆ ತಂದರು. 2018ರಲ್ಲಿ ಕುಮಾರಸ್ವಾಮಿ ಕೂಡ ಆದೇಶ ಹೊರಡಿಸಿದ್ದರು. ಅದರ ವಿರುದ್ಧವೂ ಮಲ್ಟಿಪ್ಲೆಕ್ಸ್ನವರು ಕೋರ್ಟ್ ಗೆ ತಡೆ ತಂದರು. ಈ ಬಾರಿ ಬಜೆಟ್ ಅಲ್ಲಿ ಘೋಷಣೆ ಮಾಡಬೇಕು ಅಂತ ಮನವಿ ಮಾಡಿಕೊಂಡಿದ್ದೆವು. ಅದರಂತೆ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಿ ಆದೇಶ ಮಾಡಿದ್ದಾರೆ. ಕಾನೂನಾತ್ಮಕವಾಗಿ ಜಾರಿಗೊಳಿಸಿರೋ ಕಾರಣ ಇನ್ನು 15 ದಿನದಲ್ಲಿ ಜಾರಿ ಆಗುವ ವಿಶ್ವಾಸ ಇದೆ’ ಎಂದಿದ್ದಾರೆ ಸಾರಾ ಗೋವಿಂದು.
ಇದನ್ನೂ ಓದಿ:ಏಕರೂಪ ಸಿನಿಮಾ ಟಿಕೆಟ್ ದರಕ್ಕೆ ಬಿಗ್ ಬಜೆಟ್ ಸಿನಿಮಾ ತಂಡಗಳ ಆಕ್ಷೇಪ?
ಗೋಲ್ಡ್ ಕ್ಲಾಸ್ ವೀಕೆಂಡ್ ನಲ್ಲಿ 3 ಸಾವಿರ ಟಿಕೆಟ್ ಇರುತ್ತೆ ಇದು ಬಹಳ ದುಬಾರಿ. ಮಲ್ಟಿಪ್ಲೆಕ್ಸ್ ನವರನ್ನು ಸಂಪರ್ಕಿಸಿ ಮನವಿ ಮಾಡುತ್ತೇವೆ. ರಾಜ್ಯ ಸರ್ಕಾರದ ಆದೇಶವನ್ನು ತಪ್ಪದೇ ಪಾಲನಿ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಸಾರ್ವಜನಿಕರಿಗೂ ಮನವಿ ಮಾಡ್ತೀನಿ ದುಬಾರಿಯನ್ನ ಖಂಡಿಸ್ಬೇಕು ಅಂತ, ನಿಮ್ಮ ರಾಜ್ಯದಲ್ಲಿ ಟಿಕೆಟ್ ದರ ಕಡಿಮೆ ಯಾರಿಗೆ ತಾನೆ ಖುಷಿ ಆಗಲ್ಲ’ ಎಂದಿದ್ದಾರೆ ಸಾರಾ ಗೋವಿಂದು.
ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಏಕರೂಪ ಟಿಕೆಟ್ ದರ ಆದೇಶ ಹೊರಡಿಸಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸ್ತೀನಿ, 15 ದಿನದಲ್ಲಿ ಆದೇಶ ಜಾರಿ ಆಗಲಿದೆ. ಯಾರು ಸಹ ವಿರೋಧ ಮಾಡದೇ ಇರೋ ರೀತಿ ಅಧಿವೇಶನದಲ್ಲಿ ಜಾರಿ ಗೊಳಿಸಿದ್ದಾರೆ. ನಮ್ಮ ಇಡೀ ಚಿತ್ರರಂಗದ ಖುಷಿಯಾಗಿದೆ, ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿರೋರಿಗೆ ಸ್ವಲ್ಪ ಬೇಜಾರಿದೆ ಆದರೆ ಅವರಿಗೆ ಶೀಘ್ರವೇ ಗೊತ್ತಾಗಲಿದೆ, ಕಡಿಮೆ ಟಿಕೆಟ್ ದರ ಇರುವುದರಿಂದ ಹೆಚ್ಚಿನ ಜನ ಸಿನಿಮಾ ನೋಡುತ್ತಾರೆ ಎಂಬುದು’ ಎಂದಿದ್ದಾರೆ.
ಮಲ್ಟಿಪ್ಲೆಕ್ಸ್ಗಳನ್ನು ಸೇರಿಸಿ ರಾಜ್ಯದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಬೆಲೆ 200 ರೂಪಾಯಿ ಮೀರದಂತೆ ಏಕರೂಪ ಟಿಕೆಟ್ ದರ ಪಾಲಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಬಜೆಟ್ನಲ್ಲಿಯೇ ಸಿದ್ದರಾಮಯ್ಯ ಅವರು ಇದನ್ನು ಘೋಷಣೆ ಮಾಡಿದ್ದರು. ಈಗ ಗೆಜೆಟ್ ಆದೇಶ ಹೊರಡಿಸಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




