‘ಗದಾಧಾರಿ ಹನುಮಾನ್’ ಟೀಸರ್ ಬಿಡುಗಡೆ; ಕನ್ನಡದ ಜೊತೆ ತೆಲುಗಿನಲ್ಲೂ ಬರಲಿದೆ ಸಿನಿಮಾ
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ‘ಗದಾಧಾರಿ ಹನುಮಾನ್’ ಸಿನಿಮಾದ ಟೀಸರ್ ಲಾಂಚ್ ಮಾಡಲಾಯಿತು. ಕನ್ನಡ ಚಿತ್ರರಂಗದ ಅನೇಕ ಗಣ್ಯರು ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರವಿ ಕಿರಣ್, ಹರ್ಷಿತಾ, ರಮೇಶ್ ಪಂಡಿತ್ ಮುಂತಾದವರು ‘ಗದಾಧಾರಿ ಹನುಮಾನ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಫ್ಯಾಂಟಸಿ, ಥ್ರಿಲ್ಲರ್ ಕಥೆ ಇರುವ ಸಿನಿಮಾಗಳ ಮೇಲೆ ಜನರು ಯಾವಾಗಲೂ ಆಸಕ್ತಿ ತೋರಿಸುತ್ತಾರೆ. ಈಗ ಅಂಥದ್ದೇ ಕಹಾನಿ ಇರುವ ‘ಗದಾಧಾರಿ ಹನುಮಾನ್’ (Gadadhari Hanuman) ಸಿನಿಮಾ ಸಿದ್ಧವಾಗಿದೆ. ವಿಶೇಷ ಏನೆಂದರೆ, ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಿದೆ. ಇತ್ತೀಚೆಗೆ ‘ಗದಾಧಾರಿ ಹನುಮಾನ್’ ಸಿನಿಮಾದ ಟೀಸರ್ (Gadadhari Hanuman Teaser) ಬಿಡುಗಡೆ ಆಯಿತು. ಟೀಸರ್ ಮೂಲಕ ಸಿನಿಮಾದ ಝಲಕ್ ತೋರಿಸಲಾಗಿದೆ. ‘ತಾರಕಾಸುರ’ ಖ್ಯಾತಿಯ ರವಿ ಕಿರಣ್ (ವೈಭವ್) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ.
ಟೀಸರ್ ಬಿಡುಗಡೆ ಬಳಿಕ ‘ಗದಾದಾರಿ ಹನುಮಾನ್’ ಚಿತ್ರತಂಡದವರ ಸುದ್ದಿಗೋಷ್ಠಿ ನಡೆಸಿದರು. ಸಿನಿಮಾದಲ್ಲಿ ಗ್ರಾಫಿಕ್ಸ್, ಸೌಂಡ್ ಎಫೆಕ್ಟ್, ಮೇಕಿಂಗ್ ಯಾವ ರೀತಿ ಇದೆ ಎಂಬುದು ಟೀಸರ್ ಮೂಲಕ ಗೊತ್ತಾಗಿದೆ. ಟೀಸರ್ ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ‘ವಿರಾಬ್ ಸ್ಟುಡಿಯೋಸ್’ ಮೂಲಕ ಬಸವರಾಜ್ ಹುರಕಡ್ಲಿ ಹಾಗೂ ರೇಣುಕ ಪ್ರಸಾದ್ ಕೆ.ಆರ್. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

Gadadhari Hanuman Teaser Release Event
‘ಗದಾದಾರಿ ಹನುಮಾನ್’ ಸಿನಿಮಾಗೆ ರೋಹಿತ್ ಕೊಲ್ಲಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಆ್ಯಕ್ಷನ್, ಹಾರರ್, ಥ್ರಿಲ್ಲರ್ ಕಹಾನಿ ಇದೆ ಎಂದು ಚಿತ್ರತಂಡ ಹೇಳಿದೆ. ದೈವತ್ವ ಮತ್ತು ರಾಕ್ಷಸತ್ವದ ಕಹಾನಿ ಇದೆ ಎಂದು ಮಾಹಿತಿ ನೀಡಲಾಗಿದೆ. ಈ ಸಿನಿಮಾದಲ್ಲಿ ರವಿ ಕಿರಣ್ ಅವರಿಗೆ ನಾಯಕಿಯಾಗಿ ಹೊಸ ನಟಿ ಹರ್ಷಿತಾ ಅವರು ಅಭಿನಯಿಸಿದ್ದಾರೆ.
‘ಗದಾಧಾರಿ ಹನುಮಾನ್’ ಸಿನಿಮಾದ ಟೀಸರ್:
ಕಲ್ಯಾಣ್ ಕೃಷ್ಣ, ನಾಗೇಶ್ ಮಯ್ಯ, ರಮೇಶ್ ಪಂಡಿತ್, ಸುನಂದಾ ಕಲಬುರಗಿ, ಅರ್ಜುನ್, ಭೀಷ್ಮ, ಶಿವಪ್ಪ, ಲೋಕೇಶ್ ಮಂತಾದವರು ‘ಗದಾಧಾರಿ ಹನುಮಾನ್’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಜ್ಯೂಡಾ ಸ್ಯಾಂಡಿ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅರುಣ್ ಗೌಡ ಅವರು ಛಾಯಾಗ್ರಣ ಮಾಡಿದ್ದಾರೆ. ಸಿ.ಎನ್ ಕಿಶೋರ್ ಅವರ ಸಂಕಲನ, ಟೈಗರ್ ಶಿವು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಎದುರು ಸ್ಪರ್ಧೆಗೆ ಇಳಿದ ಬಾಲಿವುಡ್ ಸಿನಿಮಾಗಳು
ಇದು ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾದ ಸಿನಿಮಾ ಆದರೂ ಕೂಡ ಬಹುತೇಕ ಕರ್ನಾಟಕದಲ್ಲೇ ಶೂಟಿಂಗ್ ಮಾಡಲಾಗಿದೆ. ಬೆಂಗಳೂರು, ಗಂಗಾವತಿ, ಹಂಪಿ, ಕಿತ್ತೂರು, ಅಂಜನಾದ್ರಿ, ಹೊನ್ನಾಪುರ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲೇ ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




