‘ಕಾಂತಾರ: ಚಾಪ್ಟರ್ 1’ ಎದುರು ಸ್ಪರ್ಧೆಗೆ ಇಳಿದ ಬಾಲಿವುಡ್ ಸಿನಿಮಾಗಳು
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ. ಆದರೆ ಆ ಸಿನಿಮಾದ ಎದುರು ಬಾಲಿವುಡ್ ಸ್ಟಾರ್ ಹೀರೋಗಳ ಸಿನಿಮಾಗಳು ಪೈಪೋಟಿಗೆ ಇಳಿಯುತ್ತಿವೆ. ಒಂದೇ ದಿನ ಈ ಎಲ್ಲ ಚಿತ್ರಗಳು ಬಿಡುಗಡೆ ಆದರೆ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಉಂಟಾಗಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

2022ರಲ್ಲಿ ಬಿಡುಗಡೆ ಆದ ‘ಕಾಂತಾರ’ (Kantara) ಸಿನಿಮಾ ದೇಶಾದ್ಯಂತ ಸದ್ದು ಮಾಡಿತ್ತು. ಆ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಪ್ರೀಕ್ವೆಲ್ ಮಾಡಲು ನಿರ್ಧರಿಸಲಾಯಿತು. ಪ್ರೀಕ್ವೆಲ್ಗೆ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಎಂದು ಶೀರ್ಷಿಕೆ ಇಟ್ಟಿದ್ದು, ಈ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಮೇಲೆ ಜನರಿಗೆ ಅಪಾರ ನಿರೀಕ್ಷೆ ಇದೆ. ಸಾಮಾನ್ಯವಾಗಿ ಇಂಥ ಹೈವೋಲ್ಟೇಟ್ ಸಿನಿಮಾದ ಎದುರು ಸ್ಪರ್ಧೆಗೆ ಇಳಿಯಲು ಬೇರೆ ಸಿನಿಮಾಗಳು ಹಿಂಜರಿಯುತ್ತವೆ. ಆದರೆ ಬಾಲಿವುಡ್ (Bollywood) ಮಂದಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಭಯಪಡುವಂತೆ ಕಾಣುತ್ತಿಲ್ಲ. ಅಕ್ಟೋಬರ್ 2ರಂದೇ ತೆರೆಕಾಣಲು ಕೆಲವು ಸಿನಿಮಾಗಳು ಸಜ್ಜಾಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹಾಗಾಗಿ ಎಲ್ಲ ಭಾಷೆಯಲ್ಲಿ ಭರ್ಜರಿ ಪೈಪೋಟಿ ಇರಲಿದೆ. ಹಿಂದಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಎದುರು ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾ ಬಿಡುಗಡೆ ಆಗಲಿದೆ.
‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾದಲ್ಲಿ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಶಶಾಂಕ್ ಖೈತಾನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಕ್ಟೋಬರ್ 2ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ‘ಕಾಂತಾರ: ಚಾಪ್ಟರ್ 1’ ಚಿತ್ರದ ಜೊತೆ ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗಲಿದೆ.
Sunny Sanskari ki shaayari – ‘Yeh aansoon hain mere, samundar ka jal nahin… Yeh aansoon hai mere, samundar ka jal nahin… Baarish ka kya bharosa, aaj hai…kal nahi!!!’😎#SunnySanskariKiTulsiKumari in cinemas, 2nd October 2025! pic.twitter.com/FOId7OSfPx
— Dharma Productions (@DharmaMovies) July 14, 2025
ಕರಣ್ ಜೋಹರ್ ಅವರು ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು. ವರುಣ್ ಧವನ್, ಜಾನ್ವಿ ಕಪೂರ್ ಅವರ ಪಾತ್ರಗಳನ್ನು ಪರಿಚಯಿಸುವ ಪೋಸ್ಟರ್ಗಳು ಅನಾವರಣ ಆಗಿವೆ. ಅದರಲ್ಲಿ ಬಿಡುಗಡೆ ದಿನಾಂಕ ಅಕ್ಟೋಬರ್ 2 ಎಂಬುದನ್ನು ಖಚಿತಪಡಿಸಲಾಗಿದೆ.
ಇದನ್ನೂ ಓದಿ: ಕಾಂತಾರ ಚಿತ್ರತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಮಾತ್ರವಲ್ಲದೇ ‘ಜಾಲಿ ಎಲ್ಎಲ್ಬಿ 3’ ಸಿನಿಮಾ ಕೂಡ ಅಕ್ಟೋಬರ್ 2ರಂದು ತೆರೆಕಾಣಲಿದೆ. ಆ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ರಜೆ ಇರುವುದರಿಂದ ಆ ದಿನಾಂಕದ ಮೇಲೆ ಸಿನಿಮಾ ತಂಡಗಳು ಕಣ್ಣಿಟ್ಟಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








