
ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ಬಿಡುಗಡೆ ಆಗಿ ವಾರವಷ್ಟೆ ಆಗಿದೆ. ಆದಿಪುರುಷ್ ಮೇಲೆ ಸಿನಿ ಪ್ರಿಯರಿಗೆ ಭಾರಿ ನಿರೀಕ್ಷೆಗಳಿದ್ದವು ಆದರೆ ಅವೆಲ್ಲವೂ ಸಿನಿಮಾದ ಜೊತೆಗೆ ಠುಸ್ಸ್ ಆಗಿದೆ. ಬಿಡುಗಡೆ ದಿನದಿಂದಲೂ ಋಣಾತ್ಮಕ ವಿಮರ್ಶೆಗಳು ಆದಿಪುರುಷ್ ಬಗ್ಗೆ ಕೇಳಿ ಬಂದಿದ್ದು ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಸಹ ಮೊದಲ ಮೂರು ದಿನಗಳ ಬಳಿಕ ಧಾರುಣವಾಗಿ ಕುಸಿದಿದೆ. ಹಾಗಿದ್ದರೂ ಸಹ ಪ್ರಭಾಸ್ ಮೇಲಿನ ನಿರೀಕ್ಷೆ ಕಡಿಮೆ ಆಗಿಲ್ಲ. ಇನ್ನೂ ಚಿತ್ರೀಕರಣದ ಹಂತದಲ್ಲಿರುವ ಪ್ರಭಾಸ್ರ ಸಿನಿಮಾ ಒಂದರ ಮೇಲೆ ತೆಲುಗು ಚಿತ್ರರಂಗ (Tollywood) ಭಾರಿ ನಿರೀಕ್ಷೆ ಇರಿಸಿಕೊಂಡಿದ್ದು ನಿರ್ಮಾಪಕರೊಬ್ಬರು ಸಿನಿಮಾದ ಕಲೆಕ್ಷನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ ‘ಪ್ರಾಜೆಕ್ಟ್ ಕೆ’ ಎಂದು ಸದ್ಯಕ್ಕೆ ಕರೆಯಲಾಗುತ್ತಿರುವ ಹೊಸ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಈ ಸಿನಿಮಾದ ಬಗ್ಗೆ ತೆಲುಗು ಚಿತ್ರರಂಗ ಭಾರಿ ದೊಡ್ಡ ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಈ ಸಿನಿಮಾದ ಬಗ್ಗೆ ಮಾತನಾಡಿರುವ ತೆಲುಗಿನ ಹಿರಿಯ ನಿರ್ಮಾಪಕ ಹಾಗೂ ನಿರ್ದೇಶಕ ತಮ್ಮಾರೆಡ್ಡಿ, ”ಪ್ರಭಾಸ್ರ ಪ್ರಾಜೆಕ್ಟ್ ಕೆ ಸಿನಿಮಾ ಬಿಡುಗಡೆ ಆದ ಮೊದಲ ದಿನವೇ 500 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ” ಎಂದಿದ್ದಾರೆ.
”ನಾಗ್ ಅಶ್ವಿನ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಅಂಥಹಾ ದೊಡ್ಡ ನಟರಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್ ಸಹ ಸೇರಿಕೊಂಡಿದ್ದಾರೆ. ಅವರು ಸಿನಿಮಾವನ್ನು ಸರಿಯಾಗಿ ಪ್ರೊಜೆಕ್ಟ್ ಮಾಡಿದರೆಂದರೆ ಆ ಸಿನಿಮಾ ದಾಖಲೆಗಳನ್ನು ಬರೆಯಲಿದೆ. ಮೊದಲ ದಿನವೇ 500-600 ಕೋಟಿ ಕಲೆಕ್ಷನ್ ಮಾಡಲಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಲಿದೆ. ಏಕೆಂದರೆ ನಾನು ಆ ಸಿನಿಮಾದ ಸೆಟ್ಗೆ ಹೋಗಿದ್ದೇನೆ, ಅವರ ಅದ್ಭುತ ಲೋಕ ನೋಡಿದ್ದೇನೆ ಹಾಗಾಗಿ ಈ ಮಾತು ಹೇಳುತ್ತಿದ್ದೇನೆ” ಎಂದಿದ್ದಾರೆ ತಮ್ಮಾರೆಡ್ಡಿ.
”ಅವರು ಸಿನಿಮಾವನ್ನು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಿದರೆಂದರೆ ಸಿನಿಮಾ ದಾಖಲೆಗಳನ್ನು ಬರೆಯಲಿದೆ. ವಿಶ್ವಮಟ್ಟದಲ್ಲಿ ಭಾರಿ ಸದ್ದು ಮಾಡಲಿದೆ. ಆ ಸಿನಿಮಾ ಪಕ್ಕಾ ದೊಡ್ಡ ಹಿಟ್ ಆಗಲಿದೆ ಎಂಬ ನಂಬಿಕೆ ನನಗೆ ಇದೆ. ಏಕೆಂದರೆ ಅಂಥಹಾ ದೊಡ್ಡ ನಟರು ಆ ಸಿನಿಮಾದಲ್ಲಿದ್ದಾರೆ. ಆದಿಪುರುಷ್ ಸಿನಿಮಾ ಓಪನಿಂಗ್ ಕಲೆಕ್ಷನ್ 140 ಕೋಟಿ, ಪ್ರಭಾಸ್ಗೆ ಇರುವ ಮಾರುಕಟ್ಟೆ ಅದು. ಕತೆ ಚೆನ್ನಾಗಿದ್ದರೆ ಸಾಕು ಪ್ರಾಜೆಕ್ಟ್ ಕೆ ಸಾವಿರಾರು ಕೋಟಿಯನ್ನು ಒಂದೆರಡು ದಿನಗಳಲ್ಲಿ ಗಳಿಸಿಬಿಡುತ್ತದೆ. ಒಂದು ದಿನ ಬರುತ್ತದೆ ತೆಲುಗು ಜನರು ವಿಶ್ವದೆಲ್ಲೆಡೆ ಕಾಲರ್ ಎತ್ತಿಕೊಂಡು ಹೆಮ್ಮೆಯಿಂದ ಓಡಾಡುತ್ತಾರೆ ಅದಕ್ಕೆ ನಮ್ಮ ಸಿನಿಮಾಗಳು ಕಾರಣವಾಗುತ್ತವೆ. ಪ್ರಾಜೆಕ್ಟ್ ಕೆ ಸಿನಿಮಾ ಒಂದೊಮ್ಮೆ ಸರಿಯಾಗಿ ಬಿಡುಗಡೆ ಆಗಲಿಲ್ಲವೆಂದರೆ ರಾಜಮೌಳಿ-ಮಹೇಶ್ ಬಾಬು ಸಿನಿಮಾ ದೊಡ್ಡ ಹಿಟ್ ಹೊಡೆಯಲಿದೆ. ಆ ಸಿನಿಮಾ ಸುಲಭವಾಗಿ 1000 ಕೋಟಿ ಕಲೆಕ್ಷನ್ ಮಾಡಲಿದೆ” ಎಂದಿದ್ದಾರೆ ತಮ್ಮಾರೆಡ್ಡಿ.
ಪ್ರಾಜೆಕ್ಟ್ ಕೆ ಸಿನಿಮಾ ಬೃಹತ್ ಬಜೆಟ್ನಲ್ಲಿ ಚಿತ್ರಿತವಾಗುತ್ತಿದೆ. ಈ ಸಿನಿಮಾದ ಬಜೆಟ್ 500 ಕೋಟಿ ಎನ್ನಲಾಗುತ್ತಿದ್ದು, ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಬಾಲಿವುಡ್ ಟಾಪ್ ತಾರೆಯರಾದ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಇದ್ದಾರೆ. ಇತ್ತೀಚೆಗಷ್ಟೆ ಸಿನಿಮಾಕ್ಕೆ ಕಮಲ್ ಹಾಸನ್ ಸಹ ಸೇರಿಕೊಂಡಿದ್ದು ಕಮಲ್ ಅವರದ್ದು ವಿಲನ್ ಪಾತ್ರ ಎನ್ನಲಾಗುತ್ತಿದೆ. ಸಿನಿಮಾದ ಕತೆ ಬಹಳ ಭಿನ್ನವಾಗಿದ್ದು, ಈ ಸಿನಿಮಾವು ಭವಿಷ್ಯದ ಪ್ರಪಂಚ ಹಾಗೂ ಭೂತ ಕಾಲದ ಪ್ರಪಂಚದ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾಕ್ಕಾಗಿ ಹಲವು ವಿಶೇಷ ವಾಹನಗಳನ್ನು ಚಿತ್ರತಂಡ ಸಿದ್ಧಪಡಿಸಿದೆ. ಇದಕ್ಕೆ ಮಹಿಂದ್ರಾ ಸಂಸ್ಥೆಯ ನೆರವನ್ನು ಸಹ ನಿರ್ದೇಶಕ ನಾಗ್ ಅಶ್ವಿನ್ ತೆಗೆದುಕೊಂಡಿದ್ದಾರೆ.
ಬಾಹುಬಲಿ 2 ಬಳಿಕ ಬಿಡುಗಡೆ ಆದ ಪ್ರಭಾಸ್ರ ಮೂರೂ ಸಿನಿಮಾಗಳು ಸಹ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿವೆ. ಹಾಗಿದ್ದರೂ ಸಹ ಮೂರೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಲೆಕ್ಷನ್ ಮಾಡಿವೆ. ಸತತ ಮೂರು ಸಿನಿಮಾಗಳು ನಿರೀಕ್ಷೆ ಹುಸಿಗೊಳಿಸಿದ್ದರೂ ಪ್ರಭಾಸ್ ಕ್ರೇಜ್ ಕಡಿಮೆ ಆಗಿಲ್ಲ. ಅಂದಹಾಗೆ ಪ್ರಾಜೆಕ್ಟ್ ಕೆ ಗೆ ಮೊದಲು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೂ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಮುಂದಿನ ವಾರ ಬಿಡುಗಡೆ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ