
ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಅರವಿಂದ್ ಇನ್ನೂ ಹಲವರು ನಟಿಸಿ, ಗುರುದತ ಗಾಣಿಗಾ ನಿರ್ದೇಶನ ಮಾಡಿರುವ ‘ಕರಾವಳಿ’ ಸಿನಿಮಾ ಇಂದು (ಜುಲೈ 24) ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಕಳೆದ ಕೆಲ ದಿನಗಳಿಂದಲೂ ಸಿನಿಮಾದ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲಾಗುತ್ತಿದ್ದು, ಸಿನಿಮಾ ನೋಡಿದ ಮಂದಿ ಮೆಚ್ಚಿಕೊಂಡಿದ್ದಾರೆ. ಎಲ್ಲೆಡೆ ಪ್ರೀಮಿಯರ್ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ ಸಿನಿಮಾ ಬಿಡುಗಡೆಗೆ ಮುಂಚೆ, ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಗುರುದತ್ ಗಾಣಿಗಾ ನಡುವೆ ಭಿನ್ನಾಭಿಪ್ರಾಯ ಮೂಡಿ, ಪ್ರಜ್ವಲ್ ಅವರು ಸಿನಿಮಾದ ಪ್ರಚಾರಕ್ಕೆ ಬರಲಿಲ್ಲ, ಪ್ರಜ್ವಲ್ ಅವರಿಂದ ಪಾತ್ರಕ್ಕೆ ಡಬ್ ಸಹ ಮಾಡಿಸಿಲ್ಲ. ಇಷ್ಟು ದಿನ ಬಹುತೇಕ ಮೌನವಾಗಿದ್ದ ಪ್ರಜ್ವಲ್ ಅವರು ಇದೀಗ ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ಹಾಗೂ ಹಿಂದೆ ನಡೆದ ವಿವಾದಗಳ ಬಗ್ಗೆ ಮಾತನಾಡಿದ್ದಾರೆ.
‘ಕರಾವಳಿ’ ಸಿನಿಮಾನಲ್ಲಿ ತಮಗೆ ಡಬ್ಬಿಂಗ್ ಮಾಡಲು ಅವಕಾಶ ಸಿಗದೆ ಇರುವುದು ಬಹಳ ನೋವಿದೆ ಎಂದ ಪ್ರಜ್ವಲ್, ‘ಯಾವುದೇ ನಟನ ಒಪ್ಪಿಗೆ ಇಲ್ಲದೆ ಅವರ ಪಾತ್ರಕ್ಕೆ ಮತ್ತೊಬ್ಬರಿಂದ ಧ್ವನಿ ನೀಡಿಸುವಂತಿಲ್ಲ. ಅದು ನಟನ ಹಕ್ಕಿನ ಉಲ್ಲಂಘನೆ. ನಟನಿಂದ ಎನ್ಓಸಿ ಪಡೆದ ಬಳಿಕವೇ ಬೇರೆಯವರಿಂದ ಡಬ್ಬಿಂಗ್ ಮಾಡಿಸಬಹುದು. ನನ್ನ ಸುತ್ತಲೂ ಇದ್ದ ಕೆಲವರು, ನೀವು ಸಿನಿಮಾದ ಮೇಲೆ ದಾವೆ ಹೂಡಿ, ಬಿಡುಗಡೆ ತಡೆಯಿರಿ, ರಿಲೀಸ್ ಆಗದಂತೆ ಸ್ಟೇ ತನ್ನಿ’ ಎಂದರು. ಆದರೆ ನನಗೆ ಅದು ಇಷ್ಟವಿಲ್ಲ’ ಎಂದಿದ್ದಾರೆ.
‘ಆ ಸಿನಿಮಾಕ್ಕಾಗಿ ನನ್ನನ್ನೂ ಸೇರಿದಂತೆ ಹಲವಾರು ತಂತ್ರಜ್ಞರು, ನಟ-ನಟಿಯರು ವರ್ಷಗಳ ಗಟ್ಟಲೆ ಕೆಲಸ ಮಾಡಿದ್ದಾರೆ. ಆದರೆ ಈಗ ನನ್ನೊಬ್ಬನಿಗೆ ಅನ್ಯಾಯ ಆಗಿದೆ ಎಂದು ನಾನು ಸಿನಿಮಾದ ವಿರುದ್ಧ ಸ್ಟೇ ತರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ನಾನು ಆ ಕೆಲಸಕ್ಕೆ ಕೈ ಹಾಕಲಿಲ. ನಮ್ಮ-ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಬಹುದು ಆದರೆ ನಮ್ಮೆಲ್ಲರಿಗಿಂತಲೂ ಸಿನಿಮಾ ದೊಡ್ಡದು, ಆ ಕಾರಣಕ್ಕಾಗಿಯೇ ನಾನು ಅವಕಾಶ ಇದ್ದರೂ ಸಹ ಸಿನಿಮಾದ ವಿರುದ್ಧ ಸ್ಟೇ ತರುವ ಕಾರ್ಯ ಮಾಡಲಿಲ್ಲ’ ಎಂದಿದ್ದಾರೆ ಪ್ರಜ್ವಲ್.
ಇದನ್ನೂ ಓದಿ:ರಾಜ್ ಬಿ. ಶೆಟ್ಟಿ ಮೇಲೆ ಅಸಮಾಧಾನವೇ? ಪ್ರಜ್ವಲ್ ದೇವರಾಜ್ ಉತ್ತರ ಏನು?
ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡೇ ನಾನು ‘ಕರಾವಳಿ’ ಸಿನಿಮಾ ಒಪ್ಪಿಕೊಂಡಿದ್ದು, ಸಾಕಷ್ಟು ನಿರೀಕ್ಷೆಗಳು, ಉತ್ಸಾಹ ಎಲ್ಲವೂ ಇತ್ತು. ಆ ಸಿನಿಮಾ ಕನ್ನಡ ಚಿತ್ರರಂಗದ ಶ್ರೇಣಿಯನ್ನು ಹೆಚ್ಚಿಸುತ್ತದೆ ಎಂದು ನಂಬಿ ನಾವೆಲ್ಲರೂ ಕೆಲಸ ಮಾಡಿದ್ದೆವು. ನಾನು ಸ್ವತಃ ಸಿನಿಮಾಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದೇನೆ. ಈಗ ಜನ ನೋಡಿ ಮೆಚ್ಚಿಕೊಳ್ಳುತ್ತಿರುವುದು ಬಹಳ ಸಂತೋಷ ತಂದಿದೆ. ಆದರೆ ನಾನು ಪರಿಪೂರ್ಣವಾಗಿ ಸಿನಿಮಾದ ಭಾಗ ಆಗದೇ ಇರುವ ಬಗ್ಗೆ ಖಂಡಿತ ಬೇಸರ ಇದೆ. ಆದರೆ ನಾವು ಮನುಷ್ಯರ ಭಿನ್ನಭಿಪ್ರಾಯಗಳು ಕ್ಷಣಿಕ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ ಪ್ರಜ್ವಲ್.
ಸಂಭಾವನೆ ವಿಚಾರ ಹಾಗೂ ಇನ್ನಿತರೆಗಳಲ್ಲಿ ಭಿನ್ನಾಭಿಪ್ರಾಯ ಮೂಡಿದ ಕಾರಣ, ಪ್ರಜ್ವಲ್ ಅವರಿಂದ ಅವರ ಪಾತ್ರಕ್ಕೆ ಡಬ್ ಮಾಡಿಸದೆ ಬೇರೊಬ್ಬ ನಟನಿಂದ ಡಬ್ಬಿಂಗ್ ಅನ್ನು ನಿರ್ದೇಶಕ ಗುರುದತ್ ಗಾಣಿಗಾ ಮಾಡಿಸಿದ್ದಾರೆ. ಇದನ್ನು ಪ್ರಜ್ವಲ್ ದೇವರಾಜ್ ಅಭಿಮಾನಿಗಳು ‘ಕರಾವಳಿ’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಪ್ರಶ್ನೆ ಸಹ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:38 am, Fri, 24 July 26