AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರ ಪ್ರಶಸ್ತಿ ತಂದು ಗಣಪತಿ ಪಾದಕ್ಕೆ ಅರ್ಪಿಸಿದ ನಟ ಕಾರ್ತಿಕ್ ಆರ್ಯನ್

ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿ ಮಂಟಪಕ್ಕೆ ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್ ಅವರು ಭೇಟಿ ನೀಡಿದ್ದಾರೆ. ಈ ವೇಳೆ ತಾವು ಪಡೆದ ರಾಷ್ಟ್ರ ಪ್ರಶಸ್ತಿಯನ್ನು ಅವರು ದೇವರ ಪಾದಕ್ಕೆ ಅರ್ಪಿಸಿದ್ದಾರೆ. ಈ ಸಂದರ್ಭದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ರಾಷ್ಟ್ರ ಪ್ರಶಸ್ತಿ ತಂದು ಗಣಪತಿ ಪಾದಕ್ಕೆ ಅರ್ಪಿಸಿದ ನಟ ಕಾರ್ತಿಕ್ ಆರ್ಯನ್
Kartik Aaryan Image Credit source: Instagram/kartikaaryan
ಮದನ್​ ಕುಮಾರ್​
|

Updated on: Sep 23, 2026 | 9:51 PM

Share

ಬಾಲಿವುಡ್‌ನ ಯಶಸ್ವಿ ನಟ ಕಾರ್ತಿಕ್ ಆರ್ಯನ್ ಅವರು ವೃತ್ತಿಜೀವನದ ಅತಿದೊಡ್ಡ ಮೈಲಿಗಲ್ಲನ್ನು ಸಾಧಿಸಿದ್ದಾರೆ. ‘ಚಂದೂ ಚಾಂಪಿಯನ್’ ಸಿನಿಮಾದ ಅತ್ಯುತ್ತಮ ನಟನೆಯಗಾಗಿ ಮಂಗಳವಾರ (ಸೆಪ್ಟೆಂಬರ್ 22) ತಮ್ಮ ಮೊದಲ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದ ಅವರು, ಮರುದಿನವೇ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜ ಗಣಪತಿ ಮಂಟಪಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮಗೆ ಸಿಕ್ಕ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿಯನ್ನು ಅವರು ದೇವರ ಪಾದಕ್ಕೆ ಅರ್ಪಿಸಿದ್ದಾರೆ.

ಬುಧವಾರ (ಸೆ.23) ಸಾಂಪ್ರದಾಯಿಕ ಕುರ್ತಾ ಧರಿಸಿ ಲಾಲ್‌ಬಾಗ್‌ಚಾ ರಾಜ ರಾಜನ ದರ್ಶನಕ್ಕೆ ಆಗಮಿಸಿದ ಕಾರ್ತಿಕ್ ಆರ್ಯನ್, ತಮ್ಮೊಂದಿಗೆ ತಮಗೆ ಲಭಿಸಿದ ರಾಷ್ಟ್ರ ಪ್ರಶಸ್ತಿಯನ್ನೂ ತಂದಿದ್ದರು. ಗಣೇಶನಿಗೆ ಶಿರಬಾಗಿಸಿ ನಮಸ್ಕರಿಸಿದ ನಂತರ, ತಮ್ಮ ಪ್ರಶಸ್ತಿಯನ್ನು ಗಣೇಶನ ಪಾದಗಳ ಬಳಿಯಿಟ್ಟು ಆಶೀರ್ವಾದ ಪಡೆದರು. ಈ ಭಾವನಾತ್ಮಕ ಕ್ಷಣದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಮೊದಲ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಅವರ ಜೀವನಾಧಾರಿತ ‘ಚಂದೂ ಚಾಂಪಿಯನ್’ ಚಿತ್ರದಲ್ಲಿನ ನಟನೆಗಾಗಿ ಕಾರ್ತಿಕ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ‘ಬ್ರಹ್ಮಯುಗಂ’ ಚಿತ್ರದ ನಟನೆಗಾಗಿ ಪ್ರಶಸ್ತಿ ಪಡೆದ ಮಲಯಾಳಂ ಹಿರಿಯ ನಟ ಮಮ್ಮುಟ್ಟಿ ಅವರೊಂದಿಗೆ ಕಾರ್ತಿಕ್ ಈ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಈ ಕ್ರೀಡಾ ಆಧಾರಿತ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಗಳಿಕೆ ಸಿಗದಿದ್ದರೂ, ಕಾರ್ತಿಕ್ ನಟನೆಗೆ ಚಿತ್ರರಂಗದ ಪ್ರಮುಖರು ಹಾಗೂ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಪ್ರಶಸ್ತಿ ಸ್ವೀಕರಿಸುವ ಕ್ಷಣದ ವಿಡಿಯೋ ಹಂಚಿಕೊಂಡ ಕಾರ್ತಿಕ್ ಆರ್ಯನ್, ‘ನಟನಾಗುವ ಕನಸು ಕಂಡಾಗ ಜನ ನಗುತ್ತಿದ್ದ ವಾತಾವರಣದಿಂದ ಬಂದ ಗ್ವಾಲಿಯರ್‌ನ ಆ ಹುಡುಗನನ್ನು ಈಗ ಮುಗುಳುನಗುವಿನಿಂದ ನೆನಪಿಸಿಕೊಳ್ಳುತ್ತಿದ್ದೇನೆ. ಪ್ರತಿಯೊಬ್ಬ ನಟನ ಕನಸಾದ ರಾಷ್ಟ್ರ ಪ್ರಶಸ್ತಿ ‘ಚಂದೂ ಅಲ್ಲ, ಚಾಂಪಿಯನ್ ನಾನು’ ಎಂಬ ಸಾಲಿಗೆ ಅರ್ಥ ತಂದಿದೆ. ಮುರಳಿಕಾಂತ್ ಪೇಟ್ಕರ್ ಸರ್ ಅವರ ಪಾತ್ರವನ್ನು ನನಗೆ ನೀಡಿದ ನಿರ್ದೇಶಕ ಕಬೀರ್ ಹಾಗೂ ಸಾಜಿದ್ ಅವರಿಗೆ ಧನ್ಯವಾದಗಳು. ಈ ಪ್ರಯಾಣ ಅತ್ಯಂತ ಕಷ್ಟಕರವಾಗಿತ್ತು. ಆದರೆ ಫಲಿತಾಂಶ ರಸಮಲೈಗಿಂತಲೂ ಸಿಹಿಯಾಗಿದೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ

ಕಾರ್ತಿಕ್ ಆರ್ಯನ್ ಅವರು ಮುಂಬರುವ ‘ನಾಗ್‌ಜಿಲ್ಲಾ’ ಎಂಬ ಫ್ಯಾಂಟಸಿ ಕಾಮಿಡಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೃಗ್‌ದೀಪ್ ಸಿಂಗ್ ಲಂಬಾ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿಕ್ ಇಚ್ಛಾಧಾರಿ ನಾಗನ ಪಾತ್ರ ಮಾಡುತ್ತಿದ್ದು, ‘ಧರ್ಮ ಪ್ರೊಡಕ್ಷನ್ಸ್’ ಮತ್ತು ‘ಮಹಾವೀರ್ ಜೈನ್ ಫಿಲ್ಮ್ಸ್’ ಜಂಟಿಯಾಗಿ ನಿರ್ಮಿಸುತ್ತಿವೆ. ಈ ಸಿನಿಮಾ 2027ರ ಫೆಬ್ರವರಿ 12ರಂದು ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More