ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಸಲಾರ್ ಪಾರ್ಟ್ 1: ಸೀಸ್ಫೈರ್’ (Salaar Movie) ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ವರ್ಷ ರಿಲೀಸ್ ಆಗುತ್ತಿರುವ ಬಿಗ್ ಬಜೆಟ್ನ ಕೊನೆಯ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಕಾರಣಕ್ಕೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿದೆ. ಈ ಚಿತ್ರದ ಮೇಲೆ ಇರುವ ನಿರೀಕ್ಷೆ ಹೆಚ್ಚಿದೆ. ಸದ್ಯ ಈ ಚಿತ್ರದ ಪ್ರಚಾರದಲ್ಲಿ ಪ್ರಶಾಂತ್ ನೀಲ್ (Prashanth Neel) ಭಾಗಿ ಆಗಿದ್ದಾರೆ. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ. ಅವರು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಫ್ರೆಂಡ್ಶಿಪ್ ಆ್ಯಂಗಲ್ನಲ್ಲೇ ‘ಸಲಾರ್’ ಚಿತ್ರದ ಕಥೆ ಸಾಗುತ್ತದೆ. ಟ್ರೇಲರ್ ನೋಡಿದ ಬಹುತೇಕರಿಗೆ ಈ ವಿಚಾರ ಗೊತ್ತಾಗಿದೆ. ಅನೇಕರು ಇದನ್ನು ‘ಉಗ್ರಂ’ ಚಿತ್ರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ. ಸದ್ಯ ಚಿತ್ರದ ಕಥೆ ಏನು ಎಂಬುದನ್ನು ಸಂಕ್ಷಿಪ್ತವಾಗಿ ಪ್ರಶಾಂತ್ ನೀಲ್ ಅವರು ವಿವರಿಸಿದ್ದಾರೆ.
‘ಸಲಾರ್ ಮೊದಲ ಭಾಗ ಬೇರೆಯದೇ ಜಗತ್ತು. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಚಿತ್ರದಲ್ಲಿ ಬರುವ ಪಾತ್ರಗಳಿಗೆ ಗಟ್ಟಿತನ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿನಿಮಾದಲ್ಲಿ ಭಾವನಾತ್ಮಕ ಕಥೆ ಇದೆ. ಭಾವನೆ ಮತ್ತು ಸ್ನೇಹದ ಕಥೆಯ ಜೊತೆ ಆ್ಯಕ್ಷನ್ ಇರುವ ಸಿನಿಮಾ ಮಾಡಲು ಬಯಸಿದ್ದೆ. ಸಲಾರ್ ನನಗೆ ಆ ಅವಕಾಶವನ್ನು ನೀಡಿದೆ’ ಎಂದಿದ್ದಾರೆ ಪ್ರಶಾಂತ್ ನೀಲ್.
‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಫ್ರೆಂಡ್ಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮನುಷ್ಯರಿಗೆ ತಿಳಿದಿರುವ ಅತ್ಯಂತ ಹಿಂಸಾತ್ಮಕ ಪ್ರಪಂಚ ಸೃಷ್ಟಿಸಲು ನಾವು ಬಯಸಿದ್ದೆವು. ಸಲಾರ್‌ನಂತಹ ಸಿನಿಮಾಗಳಲ್ಲಿ ಪಾತ್ರಗಳು ಪ್ರೇಕ್ಷಕರ ಜೊತೆ ಕನೆಕ್ಟ್ ಆಗುವುದು ತುಂಬಾನೇ ಮುಖ್ಯ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಎರಡು ಪಾತ್ರಗಳ ಫ್ರೆಂಡ್ಶಿಪ್ನ ನೀವು ಇಲ್ಲಿ ನೋಡಬಹುದು. ಚಿತ್ರದಲ್ಲಿ ಬರುವ ಪ್ರತಿಯೊಂದು ಆ್ಯಕ್ಷನ್ ದೃಶ್ಯಕ್ಕೂ ಭಾವನೆಗಳ ಜೊತೆ ಸಂಬಂಧ ಇದೆ. ಆ್ಯಕ್ಷನ್ ಸೀಕ್ವೆನ್ಸ್ ಮತ್ತು ಭಾವನೆಗಳ ಮಿಶ್ರಣ ಮಾಡಲು ಪ್ರಯತ್ನಿಸಿದ್ದೇವೆ’ ಎಂದಿದ್ದಾರೆ ಪ್ರಶಾಂತ್ ನೀಲ್.
ಇದನ್ನೂ ಓದಿ: ‘ಕೆಜಿಎಫ್’, ‘ಸಲಾರ್’ ರೀತಿ ಎರಡು ಪಾರ್ಟ್ನಲ್ಲಿ ಬರಲಿದೆ ‘ಗೇಮ್ ಚೇಂಜರ್’ ಸಿನಿಮಾ?
‘ಸಲಾರ್’ ಸಿನಿಮಾದ ಅವಧಿ 2 ಗಂಟೆ 55 ನಿಮಿಷ ಇದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣ ಪತ್ರ ಸಿಕ್ಕಿದ್ದು, ಸಿನಿಮಾದಲ್ಲಿ ಭರ್ಜರಿ ವೈಲೆನ್ಸ್ ಇರುವ ಸಾಧ್ಯತೆ ಇದೆ. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಅವರು ‘ಸಲಾರ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 22ರಂದು ‘ಸಲಾರ್’ ರಿಲೀಸ್ ಆಗಲಿದೆ. ಡಿಸೆಂಬರ್ 21ರಂದು ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ರಿಲೀಸ್ ಆಗುತ್ತಿದೆ. ಎರಡೂ ಚಿತ್ರಗಳ ಮಧ್ಯೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಫೈಟ್ ಏರ್ಪಡುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.