‘ಆಡುಜೀವಿತಂ’ ಚಿತ್ರಕ್ಕಾಗಿ 31 ಕೆಜಿ ತೂಕ ಇಳಿಸಿಕೊಂಡಿದ್ದ ಪೃಥ್ವಿರಾಜ್; ಕೊವಿಡ್​ನಿಂದ ಪ್ರಯತ್ನವೆಲ್ಲ ವ್ಯರ್ಥವಾಯ್ತು

| Updated By: ರಾಜೇಶ್ ದುಗ್ಗುಮನೆ

Updated on: Mar 19, 2024 | 11:10 AM

ಬ್ಲೆಸ್ಸಿ ಅವರು ಮೊದಲು ಬಾರಿಗೆ ಪೃಥ್ವಿರಾಜ್ ಜೊತೆ ಈ ಚಿತ್ರದ ಬಗ್ಗೆ ಮಾತನಾಡಿದ್ದು 2009ರಲ್ಲಿ. ಇಬ್ಬರ ಮಧ್ಯೆ ಒಪ್ಪಂದ ಆಯಿತು. ಆ ಬಳಿಕ ಬ್ಲೆಸ್ಸಿ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿ ಆದರು. ಈ ಚಿತ್ರ ಸೆಟ್ಟೇರಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅಂದರೆ 2024ರಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.

‘ಆಡುಜೀವಿತಂ’ ಚಿತ್ರಕ್ಕಾಗಿ 31 ಕೆಜಿ ತೂಕ ಇಳಿಸಿಕೊಂಡಿದ್ದ ಪೃಥ್ವಿರಾಜ್; ಕೊವಿಡ್​ನಿಂದ ಪ್ರಯತ್ನವೆಲ್ಲ ವ್ಯರ್ಥವಾಯ್ತು
ಆಡುಜೀವಿತಂ
Follow us on

ಪೃಥ್ವಿರಾಜ್  ಸುಕುಮಾರನ್ (Prithviraj Sukumaran) ಅವರು ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕುತ್ತಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಜನರಿಗೆ ಇಷ್ಟ ಆಗುತ್ತಾರೆ. ಈಗ ಪೃಥ್ವಿರಾಜ್​ ನಟನೆಯ ಮಲಯಾಳಂ ಸಿನಿಮಾ ‘ಆಡುಜೀವಿತಂ’ ರಿಲೀಸ್ ಆಗುತ್ತಿದೆ. ಮಲಯಾಳಂ ಜೊತೆ ಕನ್ನಡ ಮೊದಲಾದ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ 18 ವರ್ಷ ಮುಡಿಪಟ್ಟಿದ್ದಾರೆ ಪೃಥ್ವಿರಾಜ್. ಈ ಸಿನಿಮಾ ಆರಂಭ ಆಗಿದ್ದು, ಸೆಟ್ಟೇರಿದ್ದು, ಎದುರಾದ ಚಾಲೆಂಜ್​ಗಳು ಹೀಗೆ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಫಿಲ್ಮ್ ಕಂಪ್ಯಾನಿಯನ್ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಪೃಥ್ವಿರಾಜ್ ಅವರು ಮಾತನಾಡಿದ್ದಾರೆ. ಈ ಚಿತ್ರವನ್ನು ಬ್ಲೆಸ್ಸಿ ನಿರ್ದೇಶನ ಮಾಡಿದ್ದಾರೆ. ಕೇರಳದ ನಜೀಬ್ ಹೆಸರಿನ ವ್ಯಕ್ತಿ ಕೆಲಸ ಹುಡುಕಿ ಕೇರಳದಿಂದ ಸೌದಿ ಅರೇಬಿಯಾಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಮೋಸ ಆಗುತ್ತದೆ. ಇದನ್ನು ಆಧರಿಸಿ ‘ಆಡುಜೀವಿತಂ’ ಪುಸ್ತಕ ಬರೆಯಲಾಗಿದೆ. ಇದೇ ಪುಸ್ತಕ ಆಧರಿಸಿ ಬ್ಲೆಸ್ಸಿ ಸಿನಿಮಾ ಮಾಡಿದ್ದಾರೆ.

ಬ್ಲೆಸ್ಸಿ ಅವರು ಮೊದಲು ಬಾರಿಗೆ ಪೃಥ್ವಿರಾಜ್ ಜೊತೆ ಈ ಚಿತ್ರದ ಬಗ್ಗೆ ಮಾತನಾಡಿದ್ದು 2009ರಲ್ಲಿ. ಇಬ್ಬರ ಮಧ್ಯೆ ಒಪ್ಪಂದ ಆಯಿತು. ಆ ಬಳಿಕ ಬ್ಲೆಸ್ಸಿ ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿ ಆದರು. ಈ ಚಿತ್ರ ಸೆಟ್ಟೇರಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅಂದರೆ 2024ರಲ್ಲಿ (ಮಾರ್ಚ್ 28) ಚಿತ್ರ ರಿಲೀಸ್ ಆಗುತ್ತಿದೆ.

‘ಈ ಸಿನಿಮಾದ ಮೊದಲ ಪೋರ್ಷನ್ ಶೂಟ್ ಮಾಡುವಾಗ ನಾನು 98 ಕೆಜಿ ಇದೆ. ಮೊದಲ ಡೆಸರ್ಟ್ ಶೂಟ್ ಮುಗಿಸಿದ ಬಳಿಕ ನಾನು 31 ಕೆಜಿ ದೇಹದ ತೂಕ ಇಳಿಸಿಕೊಂಡೆ. ಆಗ ನನ್ನ ದೇಹದ ತೂಕ 67 ಕೆಜಿ ಇತ್ತು. ನನ್ನ ನೋಡಿ ನಿರ್ದೇಶಕರಿಗೆ ಖುಷಿ ಆಯಿತು. ಚಿತ್ರ ತಂಡದ ಉಳಿದವರಿಗೆ ಶಾಕ್ ಆಯಿತು. 202ರಲ್ಲಿ ನಾವು ಜೋರ್ಡನ್​ನಲ್ಲಿ ಶೂಟ್ ಮಾಡಲು ಆರಂಭಿಸಿದೆವು’ ಎಂದಿದ್ದಾರೆ ಪೃಥ್ವಿರಾಜ್.

ಆ ಸಮಯಕ್ಕೆ ಸರಿಯಾಗಿ ಕೊವಿಡ್ ಬಂತು. ಶೂಟಿಂಗ್​ನ ಅವರು ನಿಲ್ಲಿಸಬೇಕಾಯಿತು. ಪೃಥ್ವಿರಾಜ್ ಹಾಕಿದ್ದ ಶ್ರಮವೆಲ್ಲ ವ್ಯರ್ಥವಾಯಿತು. ಭಾರತಕ್ಕೆ ಬರಲಾಗದೆ ಪೃಥ್ವಿರಾಜ್ ಹಾಗೂ ಟೀಂ ಜೋರ್ಡನ್​ನಲ್ಲೇ ಸಿಕ್ಕಿ ಬೀಳಬೇಕಾಯಿತು. ಮೂರು ತಿಂಗಳು ಯಾವುದೇ ಶೂಟ್ ಇಲ್ಲದೆ ಅವರು ಅಲ್ಲಿಯೇ ಇದ್ದರು. ‘ಒಂದೂವರೆ ವರ್ಷ ಸಿನಿಮಾ ಕೆಲಸ ನಿಂತು ಹೋಯಿತು. ಮತ್ತೆ ನಾನು ಎರಡನೇ ಬಾರಿಗೆ ಟ್ರಾನ್ಸ್​ಫಾರ್ಮೇಷನ್ ಮಾಡಿಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಬಂದ ಸಿನಿಮಾಗಳಲ್ಲಿ ನಾನು ಸಾಕಷ್ಟು ತೆಳ್ಳಗೆ ಇದ್ದೆ. 2023 ಸಿನಿಮಾ ಶೂಟ್ ಮುಗಿಯಿತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಆಡುಜೀವಿತಂ’ ಸಿನಿಮಾ ಟ್ರೇಲರ್​ನಲ್ಲಿ ಹೊಸ ಅವತಾರದಲ್ಲಿ ಮಿಂಚಿದ ಪೃಥ್ವಿರಾಜ್​ ಸುಕುಮಾರನ್

‘ನಾನು ಈ ಸಿನಿಮಾ ಜೊತೆ 16 ವರ್ಷ ಟ್ರಾವೆಲ್ ಮಾಡಿದ್ದೇನೆ. ಒಂದು ಶಾಟ್​ಗೆ ಒಂದು ದಿನ ಪ್ರಯತ್ನಿಸಿದ್ದೂ ಇದೆ. ನನಗೆ ಜೋರ್ಡನ್ ವಿಮಾನ ನಿಲ್ದಾಣದ ಸಿಬ್ಬಂದಿ ಸಾಕಷ್ಟು ಪರಿಚಯ ಆಗಿಬಿಟ್ಟಿದ್ದರು. ನಾನು ಅಲ್ಲಿ ಅಷ್ಟು ಸಮಯ ಕಳೆದಿದ್ದೇನೆ. ಬಡೇ ಮಿಯಾ ಚೋಟೆ ಮಿಯಾ ಸಿನಿಮಾದ ಶೂಟ್​ಗಾಗಿ ಮತ್ತೆ ಜೋರ್ಡನ್ ಹೋಗಬೇಕಿತ್ತು. ಆಗ ಅಲ್ಲಿನ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಂತೆ ಸಿಬ್ಬಂದಿ ನನ್ನ ಮಾತನಾಡಿಸಿದರು. ನನ್ನ ತಂಡದವರು ಅಚ್ಚರಿಪಟ್ಟರು’ ಎಂದಿದ್ದಾರೆ ಪೃಥ್ವಿರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ