ಪೃಥ್ವಿರಾಜ್ ಸುಕುಮಾರನ್ (prithviraj sukumaran) ಮಲಯಾಳಂ (Malayalam) ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ, ಸಿನಿಮಾ ವಿತರಕ ಹಾಗೂ ನಿರ್ಮಾಪಕ ಸಹ. ಕನ್ನಡದ ಕೆಜಿಎಫ್ 2, ಕಾಂತಾರ ಸಿನಿಮಾಗಳನ್ನು ಕೇರಳ ರಾಜ್ಯದಲ್ಲಿ ವಿತರಣೆ ಮಾಡಿದ್ದು ಪೃಥ್ವಿರಾಜ್ ಸುಕುಮಾರನ್ ಅವರೇ. ಪ್ರತಿಭಾವಂತ ನಟ, ನಿರ್ದೇಶಕರೂ ಆಗಿರುವ ಪೃಥ್ವಿರಾಜ್ ವಿರುದ್ಧ ಯೂಟ್ಯೂಬ್ ಚಾನೆಲ್ ಒಂದು ಜಾರಿ ನಿರ್ದೇಶನಾಲಯ (ಇಡಿ)ಗೆ 25 ಕೋಟಿ ಹಣ ಜುಲ್ಮಾನೆ ಕಟ್ಟಿರುವುದಾಗಿಯೂ ಹಾಗೂ ಪ್ರೊಪಾಗಾಂಡಾ (ಅರ್ಧ ಸತ್ಯ ಅಥವಾ ದುರುದ್ದೇಶಪೂರಿತ) ಸಿನಿಮಾಗಳನ್ನು ಮಾಡುತ್ತಿರುವುದಾಗಿ ಆರೋಪ ಹೊರಿಸಿತ್ತು. ಈ ಬಗ್ಗೆ ಪೃಥ್ವಿರಾಜ್ ಸುಕುಮಾರನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಪೃಥ್ವಿರಾಜ್ ಸುಕುಮಾರನ್, ”ಮರುನಾದನ್ ಮಲಯಾಲಿ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ನನ್ನ ವಿರುದ್ಧ ಸುಳ್ಳು ಹಾಗೂ ಅಪಮಾನಕರ ಸುದ್ದಿಗಳನ್ನು ಪ್ರಕಟಿಸಿರುವುದು ನನ್ನ ಗಮನಕ್ಕೆ ಬಂದಿದೆ. ಜಾರಿ ನಿರ್ದೇಶನಲಾಯಕ್ಕೆ ನಾನು 25 ಕೋಟಿ ಜುಲ್ಮಾನೆ ಕಟ್ಟಿರುವುದಾಗಿ ಹಾಗೂ ಪ್ರೊಪಾಗಾಂಡಾ (ಅರ್ಧ ಸತ್ಯ ಅಥವಾ ದುರುದ್ದೇಶಪೂರಿತ) ಸಿನಿಮಾಗಳನ್ನು ಮಾಡುತ್ತಿರುವುದಾಗಿ ಹೇಳಲಾಗಿದೆ. ಈ ಆರೋಪಗಳಲ್ಲಿ ಯಾವುದೇ ಸತ್ಯಗಳಲಿಲ್ಲ. ಈ ಆರೋಪಗಳು ದುರುದ್ದೇಶಪೂರ್ವಕವಾಗಿದ್ದು ಮಾನಹಾನಿಕಾರಕವಾಗಿವೆ” ಎಂದಿದ್ದಾರೆ.
ಮುಂದುವರೆದು, ”ಈ ಮಾನಹಾನಿಕರ ಆರೋಪಗಳನ್ನು ಮಾಡಿರುವವರ ವಿರುದ್ಧ ನಾನು ಕಾನೂನು ಕ್ರಮಕೈಗೊಳ್ಳುತ್ತಿದ್ದೇನೆ. ಈ ಮೂಲಕ ಎಲ್ಲ ಮಾಧ್ಯಮಗಳಲ್ಲಿ ಮಾಡುವ ಮನವಿಯೆಂದರೆ, ಯಾವುದೇ ಆರೋಪಗಳನ್ನು ಮಾಡುವ ಮುನ್ನ ಸತ್ಯವನ್ನು ಸ್ಪಷ್ಟಪಸಿಕೊಳ್ಳಿ. ಆಧಾರ ರಹಿತ ಆರೋಪಗಳು ಬೇಡ” ಎಂದಿದ್ದಾರೆ.
”ನಾನು ಸಾಮಾನ್ಯವಾಗಿ ಇಂಥಹುಗಳನ್ನು ನಿರ್ಲಕ್ಷಿಸುತ್ತೇನೆ. ಏಕೆಂದರೆ “ನೈತಿಕ ಪತ್ರಿಕೋದ್ಯಮ” ದಂತಹ ಪದಗಳು ಈಗಿನ ಕಾಲಘಟ್ಟದಲ್ಲಿ ಬಹುಬೇಗ ನಶಿಸಿಹೋಗುತ್ತಿವೆ. ಆದರೆ ‘ಸುದ್ದಿ’ ಹೆಸರಿನಲ್ಲಿ ಸಂಪೂರ್ಣ ಸುಳ್ಳುಗಳನ್ನು ಪ್ರಚಾರ ಮಾಡುವುದಕ್ಕೂ ಒಂದು ಮಿತಿಯಿದೆ. ಆದರೆ ಈಗ ನಾನು ಆರಂಭ ಮಾಡಿರುವ ಈ ಹೋರಾಟವನ್ನು ಅಂತ್ಯದ ವರೆಗೆ ತೆಗೆದುಕೊಂಡು ಹೋಗುತ್ತೇನೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಆರೋಪಗಳನ್ನು ಸಲ್ಲಿಸಲಿದ್ದೇನೆ” ಎಂದಿರುವ ಪೃಥ್ವಿರಾಜನ್, ನಾನು ನಿಜವಾಗಿಯೂ ದಂಡ ಪಾವತಿಸಿರಬಹುದೇನೋ ಎಂದು ಇನ್ನೂ ಯಾರಾದರೂ ಅಂದುಕೊಂಡಿದ್ದರೆ ಅಂಥಹವರಿಗೆ ಸ್ಪಷ್ಟಪಡಿಸುತ್ತಿದ್ದೇನೆ ನಾನು ಯಾವುದೇ ದಂಡ ಪಾವತಿಸಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಮಲಯಾಳಂ ಚಿತ್ರರಂಗದ ಮೇಲೆ ನಿಗಾ: ಚಿತ್ರೀಕರಣ ಸೆಟ್ನಲ್ಲಿ ಮಾರುವೇಷದಲ್ಲಿ ಪೊಲೀಸರು
ಪೃಥ್ವಿರಾಜ್ ಸುಕುಮಾರನ್, ಮಲಯಾಳಂನಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಪೃಥ್ವಿರಾಜ್, ಹಿಂದಿಯ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಪ್ರಭಾಸ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಂಬಾಳೆ ನಿರ್ಮಾಣದ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಸಿನಿಮಾಕ್ಕೆ ಟೈಸನ್ ಎಂದು ಹೆಸರಿಟ್ಟಿದ್ದಾರೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನಟಿಸುತ್ತಿರುವ ಬಡೇ ಮಿಯಾ ಚೋಟೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಮಲಯಾಳಂನ ಆಡುಜೀವಿತಂ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾದ ಟ್ರೈಲರ್ ಬಹುವಾಗಿ ಗಮನ ಸೆಳೆದಿದೆ. ಇದರ ಜೊತೆಗೆ ವಿಲಾಯತ್ ಬುದ್ಧ ಹಾಗೂ ಬಾರೊಜ್ ಹೆಸರಿನ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ