ಭಾರತದಲ್ಲಿ ಕೊರೊನಾ ವೈರಸ್ ಮಿತಿಮೀರಿ ಹಬ್ಬುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಯಾವುದೇ ವೈದ್ಯಕೀಯ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಆಕ್ಸಿಜನ್ ಸಿಲಿಂಡರ್ಗಳಿಗಾಗಿ ರೋಗಿಗಳು ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಅಮೆರಿಕದ ಗಾಯಕ, ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಅವರು ಭಾರತಕ್ಕಾಗಿ ಮಿಡಿಯುತ್ತಿದ್ದಾರೆ. ಭಾರತದಲ್ಲಿನ ಕೊವಿಡ್ ಸೋಂಕಿತರಿಗೆ ಸಹಾಯ ಮಾಡಲು ಅವರು ಮುಂದೆ ಬಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆ ಆಗುವ ಮೂಲಕ ನಿಕ್ ಜೋನಸ್ ಭಾರತದ ಅಳಿಯನಾದರು. ಅಮೆರಿಕದಲ್ಲಿ ನೆಲೆಸಿದ್ದರೂ ಕೂಡ ಅವರು ಪ್ರಿಯಾಂಕಾ ಜೊತೆ ಸೇರಿ ಭಾರತೀಯ ಸಂಸ್ಕೃತಿಯನ್ನು ಪಾಲಿಸುತ್ತಿದ್ದಾರೆ. ಅವರು ಭಾರತದ ಪ್ರಮುಖ ಹಬ್ಬಗಳನ್ನು ಆಚರಿಸುತ್ತಾರೆ. ಹಾಗಂತ ಭಾರತದ ಬಗೆಗಿನ ಅವರ ಪ್ರೀತಿ ಕೇವಲ ಹಬ್ಬ ಮಾಡುವುದಕ್ಕಷ್ಟೇ ಸೀಮಿತ ಆಗಿಲ್ಲ. ಸದ್ಯ ದೇಶದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಈ ವೇಳೆ ಭಾರತಕ್ಕಾಗಿ ದೇಣಿಗೆ ಸಂಗ್ರಹ ಮಾಡಲು ನಿಕ್ ಜೋನಸ್ ಮುಂದಾಗಿದ್ದಾರೆ.
ಭಾರತಕ್ಕೆ ವ್ಯಾಕ್ಸಿನ್ ಕಳಿಸಿಕೊಡಿ ಎಂದು ಅಮೆರಿಕಕ್ಕೆ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮನವಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಅವರೀಗ ಪತಿ ನಿಕ್ ಜೋನಸ್ ಜೊತೆ ಸೇರಿ ದೇಣಿಗೆ ಸಂಗ್ರಹಕ್ಕೆ ಕರೆ ನೀಡಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಿ ಎಂದು ಅವರು ಕೋರಿದ್ದಾರೆ.
‘ಕಳೆದ ತಿಂಗಳಿನಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾಗಿರುವುದನ್ನು ನಾವು ನೋಡಿದ್ದೇವೆ. ಭಾರತದಲ್ಲಿ ಪರಿಸ್ಥಿತಿ ಕೈ ಮೀರಿದೆ. ಸೋಂಕಿತರ ಸಂಖ್ಯೆ ನೋಡಿದರೆ ಶಾಕಿಂಗ್ ಆಗಿದೆ. ಇದನ್ನು ಈಗಲೇ ತಡೆಯಬೇಕಿದೆ. ಪ್ರತಿಯೊಬ್ಬರೂ ಸುರಕ್ಷಿತವಾಗುವವರೆಗೆ ಇಲ್ಲಿ ಯಾರೂ ಸೇಫ್ ಅಲ್ಲ’ ಎಂದು ಕೊವಿಡ್ನ ಗಂಭೀರತೆಯನ್ನು ಅರ್ಥ ಮಾಡಿಸಲು ಈ ದಂಪತಿ ಪ್ರಯತ್ನಿಸಿದ್ದಾರೆ.
‘ಗೀವ್ ಇಂಡಿಯಾ’ ಪ್ಲಾಟ್ಫಾರ್ಮ್ ಮೂಲಕ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಮಾತಿನಿಂದ ಪ್ರೇರಣೆಗೊಂಡು ಅನೇಕರು ಹಣ ನೀಡುತ್ತಿದ್ದಾರೆ. ಅಭಿಯಾನ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ರೂ. ದೇಣಿಗೆ ಸಂಗ್ರಹ ಆಗಿದೆ.
ಇದನ್ನೂ ಓದಿ: Priyanka Chopra: ಅಮೆರಿಕದಲ್ಲಿ ತಾವು ಸೇಫ್ ಆಗಿದ್ರೂ ಭಾರತಕ್ಕಾಗಿ ಕಷ್ಟಪಡುತ್ತಿರುವ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ನನ್ನ ಅವಕಾಶ ಕಿತ್ತುಕೊಂಡರು; ಮೀರಾ ಚೋಪ್ರಾ ಗಂಭೀರ ಆರೋಪ