ಕಮಲ್ ಹಾಸನ್ ವಿರುದ್ಧ ವಂಚನೆ ಆರೋಪ, ದೂರು ನೀಡಿದ ನಿರ್ಮಾಪಕರು
ನಟ, ರಾಜಕಾರಣಿ ಕಮಲ್ ಹಾಸನ್ ವಿರುದ್ಧ ತಮಿಳಿನ ಇಬ್ಬರು ಸಿನಿಮಾ ನಿರ್ಮಾಪಕರು ವಂಚನೆ ಆರೋಪ ಮಾಡಿದ್ದಾರೆ. ನಿರ್ಮಾಪಕರ ಸಂಘಕ್ಕೆ ಕಮಲ್ ವಿರುದ್ಧ ದೂರು ನೀಡಿರುವ ನಿರ್ಮಾಪಕರು ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ನಟ, ನಿರ್ಮಾಪಕ, ರಾಜಕಾರಣಿ ಕಮಲ್ ಹಾಸನ್ (Kamal Haasan) ವಿರುದ್ಧ ನಿರ್ಮಾಪಕರೊಬ್ಬರು, ನಿರ್ಮಾಪಕರ ಸಂಘದಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಕಮಲ್ ಹಾಸನ್ ನಟಿಸಿ, ಕನ್ನಡದ ನಟ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದ ‘ಉತ್ತಮ ವಿಲನ್’ ಸಿನಿಮಾದ ನಿರ್ಮಾಪಕ ಲಿಂಗುಸ್ವಾಮಿ ಇದೀಗ ಕಮಲ್ ಹಾಸನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಲಿಂಗುಸ್ವಾಮಿ ಮಾತ್ರವೇ ಅಲ್ಲದೆ ಅವರೊಟ್ಟಿಗೆ ‘ಉತ್ತಮ ವಿಲನ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಸುಭಾಷ್ ಚಂದ್ರ ಭೋಸ್ ಸಹ ಕಮಲ್ ವಿರುದ್ಧ ವಂಚನೆ ಆರೋಪ ಮಾಡಿದ್ದು, ನಿರ್ಮಾಪಕ ಸಂಘವು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
2015 ರಲ್ಲಿ ಬಿಡುಗಡೆ ಆದ ಕಮಲ್ ಹಾಸನ್ ನಟನೆಯ ‘ಉತ್ತಮ ವಿಲನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿತ್ತು. ಆ ಸಿನಿಮಾವನ್ನು ಕನ್ನಡದ ನಟ, ಕಮಲ್ ಹಾಸನ್ ಆಪ್ತ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೋತ ಕಾರಣ, ಲಿಂಗುಸ್ವಾಮಿ ಹಾಗೂ ಸುಭಾಷ್ ಚಂದ್ರ ಭೋಸ್ ಅವರಿಗೆ ಭಾರಿ ನಷ್ಟವಾಗಿತ್ತು. ಸಿನಿಮಾದಿಂದ ಆದ ನಷ್ಟ ತುಂಬಿ ಕೊಡಲು ಅದೇ ನಿರ್ಮಾಪಕರುಗಳೊಟ್ಟಿಗೆ ಮತ್ತೊಂದು ಸಿನಿಮಾ ಮಾಡುವ ವಾಗ್ದಾನವನ್ನು ಕಮಲ್ ಹಾಸನ್ ಮಾಡಿದ್ದರು. ಆದರೆ ‘ಉತ್ತಮ ವಿಲನ್’ ಸಿನಿಮಾ ಬಿಡುಗಡೆ ಆಗಿ ಒಂಬತ್ತು ವರ್ಷವಾದರೂ ಕಮಲ್ ಹಾಸನ್ ತಮ್ಮೊಟ್ಟಿಗೆ ಸಿನಿಮಾ ಮಾಡಿಲ್ಲ, ತಮಗೆ ಡೇಟ್ಸ್ ನೀಡಿಲ್ಲವೆಂದು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದು, ತಮಿಳುನಾಡಿನ ಸಿನಿಮಾ ನಿರ್ಮಾಪಕರ ಸಂಘಕ್ಕೆ ಕಮಲ್ ವಿರುದ್ಧ ದೂರು ನೀಡಿ, ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹೇಗಿದೆ ಪೃಥ್ವಿರಾಜ್ ನಟನೆಯ ‘ಆಡುಜೀವಿತಂ’ ಸಿನಿಮಾ? ವಿಮರ್ಶೆ ತಿಳಿಸಿದ ಕಮಲ್ ಹಾಸನ್
‘ಉತ್ತಮ ವಿಲನ್’ ಸಿನಿಮಾದಿಂದ ತಮಗೆ ಸುಮಾರು 30 ಕೋಟಿ ರೂಪಾಯಿ ನಷ್ಟವಾಗಿತ್ತೆಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ಮತ್ತೊಂದು ಸಿನಿಮಾ ಮಾಡಿಕೊಡುವ ಮೂಲಕ ಆ ಹಣವನ್ನು ರಿಕವರ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆಗಿನಿಂದಲೂ ಕಮಲ್ ಹಾಸನ್ರ ಡೇಟ್ಸ್ಗಳಿಗಾಗಿ ಕೇಳುತ್ತಲೇ ಇದ್ದೀವಾದರೂ ಕಮಲ್ ಹಾಸನ್ ಈವರೆಗೆ ನಮಗೆ ಡೇಟ್ಸ್ ನೀಡಿಲ್ಲವೆಂದು ನಿರ್ಮಾಪಕರು ಆರೋಪ ಮಾಡಿದ್ದಾರೆ.
‘ಉತ್ತಮ ವಿಲನ್’ ಸಿನಿಮಾದ ಬಳಿಕ ಕಮಲ್ ಹಾಸನ್ ನಟಿಸಿರುವ ನಾಲ್ಕು ಸಿನಿಮಾಗಳಷ್ಟೆ ಬಿಡುಗಡೆ ಆಗಿವೆ. ಇದೀಗ ಕಮಲ್ ಹಾಸನ್ ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಣಿರತ್ನಂ ನಿರ್ದೇಶನ ಮಾಡಿರುವ ‘ಥಗ್ ಲೈಫ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ರಾಜಕಾರಣಿಯೂ ಆಗಿರುವ ಕಮಲ್ ಹಾಸನ್ ರಾಜಕಾರಣದಲ್ಲಿಯೂ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸಿನಿಮಾ ನಿರ್ಮಾಪಕರಾಗಿಯೂ ಕಮಲ್ ಹಾಸನ್ ಸಕ್ರಿಯವಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ