ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde), ಕಳೆದ ಕೆಲವು ವರ್ಷಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದರು. ಸಾಲು-ಸಾಲು ಹಿಟ್ ಸಿನಿಮಾಗಳ ಭಾಗವಾಗಿದ್ದರು ಪೂಜಾ. ಆದರೆ ಇತ್ತೀಚೆಗೆ, ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಿಂದ ದೂರಾಗುತ್ತಿದ್ದಾರೆ. ಬಾಲಿವುಡ್ನಲ್ಲಿ ಪೂರ್ಣವಾಗಿ ನೆಲೆ ನಿಲ್ಲುವ ಯೋಚನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣವಾಗಿದ್ದು, ಪೂಜಾ ಹೆಗ್ಡೆ, ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರ ಖಾರಂ’ ಸಿನಿಮಾದಿಂದ ಹೊರನಡೆದಿದ್ದು. ಪೂಜಾ ಹೆಗ್ಡೆ, ‘ಗುಂಟೂರು ಖಾರಂ’ ಸಿನಿಮಾದಿಂದ ಹೊರಹೋದ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು, ಆದರೆ ನಿಜವಾದ ಕಾರಣ ಏನೆಂಬುದನ್ನು ನಿರ್ಮಾಪಕರೇ ಹೇಳಿದ್ದಾರೆ.
ಪೂಜಾ ಹೆಗ್ಡೆಗೂ ‘ಗುಂಟೂರು ಖಾರಂ’ ಸಿನಿಮಾ ತಂಡಕ್ಕೆ ಅಭಿಪ್ರಾಯ ಭೇದಗಳು ಬಂದ ಕಾರಣ ನಟಿ ಸಿನಿಮಾ ಬಿಟ್ಟು ಹೊರನಡೆದರು ಎನ್ನಲಾಗಿತ್ತು. ಅದರಲ್ಲಿಯೂ ‘ಗುಂಟೂರು ಖಾರಂ’ ಸಿನಿಮಾದ ಕತೆಯಲ್ಲಿ ನಟಿ ಶ್ರೀಲೀಲಾ ಪಾತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಪೂಜಾಗೆ ಇಷ್ಟವಾಗದ ಕಾರಣ ಪೂಜಾ ಹೊರ ನಡೆದಿದ್ದಾರೆ ಎನ್ನಲಾಗಿತ್ತು. ಸಿನಿಮಾದ ಶೂಟಿಂಗ್ ವಿಳಂಬವಾಗಿದ್ದೂ ಸಹ ಪೂಜಾ ಹೊರನಡೆಯಲು ಕಾರಣ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಪೂಜಾ, ಸಿನಿಮಾದಿಂದ ಹೊರನಡೆಯಲು ನಿಜವಾದ ಕಾರಣವನ್ನು ನಿರ್ಮಾಪಕರು ನೀಡಿದ್ದಾರೆ.
‘ಗುಂಟೂರು ಖಾರಂ’ ಸಿನಿಮಾವನ್ನು ಎಸ್ ರಾಧಾ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಸಿನಿಮಾದ ಪ್ರೊಡಕ್ಷನ್ ಅನ್ನು ನೋಡಿಕೊಳ್ಳುತ್ತಿರುವುದು ರಾಧಾ ಕೃಷ್ಣ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಸೋದರ ಸಂಬಂಧಿ, ನಿರ್ಮಾಪಕ ನಾಗ ವಂಶಿ. ಇತ್ತೀಚೆಗೆ ನಾಗ ವಂಶಿ ಸಂದರ್ಶನವೊಂದರಲ್ಲಿ ‘ಗುಂಟೂರು ಖಾರಂ’ ಸಿನಿಮಾ ಕುರಿತು ಮಾತನಾಡುತ್ತಾ, ಪೂಜಾ ಹೆಗ್ಡೆ ಏಕೆ ಸಿನಿಮಾದಿಂದ ಹೊರನಡೆದರು ಎಂಬ ಬಗ್ಗೆಯೂ ಮಾತನಾಡಿದ್ದಾರೆ.
‘ಪೂಜಾ ಹೆಗ್ಡೆಯನ್ನು ನಾವು ‘ಗುಂಟೂರು ಖಾರಂ’ ಸಿನಿಮಾದಿಂದ ತೆಗೆದಿಲ್ಲ. ಅಥವಾ ಅವರು ಬೇಕೆಂದೇ ಸಿನಿಮಾ ಬಿಟ್ಟು ಹೋಗಿಲ್ಲ. ಬದಲಿಗೆ ಅವರ ಡೇಟ್ಸ್ ಸಿನಿಮಾದ ಚಿತ್ರೀಕರಣಕ್ಕೆ ಹೊಂದಿಕೆ ಆಗಲಿಲ್ಲ. ಹಾಗಾಗಿ ಅವರನ್ನು ಬದಲಾಯಿಸಬೇಕಾಯ್ತು. ಪೂಜಾ ಹೆಗ್ಡೆ ನನ್ಮ ಕುಟುಂಬದ ಸದಸ್ಯೆ ಇದ್ದಂತೆ. ನಮ್ಮ ನಿರ್ಮಾಣ ಸಂಸ್ಥೆಯ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹಳ ಒಳ್ಳೆಯ ನಟಿ, ನಮಗೆಲ್ಲ ಬಹಳ ಆತ್ಮೀಯ. ಅವರನ್ನು ತೆಗೆಯುವ ಪ್ರಶ್ನೆಯೇ ಇಲ್ಲ. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರನ್ನು ರೀಪ್ಲೇಸ್ ಮಾಡಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ಖ್ಯಾತ ಕ್ರಿಕೆಟರ್ ಜೊತೆ ನಡೆಯುತ್ತಾ ನಟಿ ಪೂಜಾ ಹೆಗ್ಡೆ ಮದುವೆ?
ಪೂಜಾ ಹೆಗ್ಡೆ ಜಾಗಕ್ಕೆ ಶ್ರೀಲೀಲಾ ಅವರನ್ನು ಕರೆತರಲಾಗಿದೆ. ಅವರೊಬ್ಬ ಬಹಳ ಒಳ್ಳೆಯ ನಟಿ. ಸಾಲು-ಸಾಲು ತೆಲುಗು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಇನ್ನು ‘ಗುಂಟೂರು ಖಾರಂ’ ಸಿನಿಮಾದ ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿದು ಹೋಗಿದೆ. ಇಂಟ್ರೊಡಕ್ಷನ್ ಸೀನ್, ಫೈಟ್ ಸೀನ್ಗಳು, ಕ್ಲೈಮ್ಯಾಕ್ಸ್ ಸೀನ್, ಇಂಟರ್ವೆಲ್ ಸೀನ್, ಕೆಲವು ಹಾಡುಗಳು ಎಲ್ಲದರ ಚಿತ್ರೀಕರಣ ಈಗಾಗಲೇ ಮುಗಿದಿದೆ. ಕೆಲವು ಟಾಕಿ ಭಾಗ ಉಳಿದುಕೊಂಡಿದೆ. ಅದೆಲ್ಲ ಸಣ್ಣ-ಸಣ್ಣ ಸೀನ್ಗಳಷ್ಟೆ ಅದೂ ಸಹ ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತದೆ’ ಎಂದಿದ್ದಾರೆ.
ಮಹೇಶ್ ಬಾಬು ಅಂಥಹಾ ದೊಡ್ಡ ಸ್ಟಾರ್ ನಟರ ಸಿನಿಮಾವನ್ನು ಇಷ್ಟು ಬೇಗ ಹೇಗೆ ಮುಗಿಸಲು ಸಾಧ್ಯ ಎಂದು ಕೆಲವರು ಮಾತನಾಡುತ್ತಾರೆ. ಆದರೆ ನಾವು ಮೊದಲೇ ಎಲ್ಲವನ್ನೂ ಪ್ಲ್ಯಾನ್ ಮಾಡಿದ್ದೆವು. ನಮ್ಮ ಸಿನಿಮಾ ಇದೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದಿರುವ ವಂಶಿ, ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದಾರೆ.
ತಮಿಳಿನ ‘ಮುಗಮುಡಿ’ ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ನಟಿ ಪೂಜಾ ಹೆಗ್ಡೆ, ಹಲವಾರು ಸೂಪರ್ ಹಿಟ್ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯ ಕೆಲವು ಸಿನಿಮಾಗಳಲ್ಲಿಯೂ ಪೂಜಾ ನಟಿಸಿದ್ದಾರಾದರೂ ಈವರೆಗೆ ದೊಡ್ಡ ಗೆಲುವು ಹಿಂದಿಯಲ್ಲಿ ಪೂಜಾಗೆ ದೊರಕಿಲ್ಲ. ಮಂಗಳೂರು ಮೂಲದ ಈ ಚೆಲುವೆ ಸಲ್ಮಾನ್ ಖಾನ್ರ ‘ಕಿಸಿ ಕಿ ಭಾಯ್ ಕಿಸಿ ಕೀ ಜಾನ್’ ಸಿನಿಮಾ ಬಳಿಕ ಬೇರಾವುದೇ ಸಿನಿಮಾದಲ್ಲಿ ನಟಿಸಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ