ನಿರ್ದೇಶಕ ಕಮ್ ನಿರ್ಮಾಪಕ ಪುರಿ ಜಗನ್ನಾಥ್ (Puri Jagannadh) ಅವರು ಈಗ ಹತಾಶರಾಗಿದ್ದಾರೆ. ಅವರು ಭಾರಿ ನಿರೀಕ್ಷೆ ಇಟ್ಟುಕೊಂಡು ಮಾಡಿದ್ದ ‘ಲೈಗರ್’ (Liger) ಸಿನಿಮಾ ಹೀನಾಯವಾಗಿ ಸೋತಿತು. ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಅವರಂತಹ ಸ್ಟಾರ್ ಕಲಾವಿದರು ಇದ್ದರೂ ಕೂಡ ಆ ಸಿನಿಮಾ ಹಿಟ್ ಆಗಲಿಲ್ಲ. ಈಗ ಪುರಿ ಜಗನ್ನಾಥ್ ಅವರಿಗೆ ಹೊಸ ತಲೆ ಬಿಸಿ ಶುರುವಾಗಿದೆ. ತಮ್ಮ ಹಣವನ್ನು ವಾಸಪ್ ನೀಡಿ ಎಂದು ಅನೇಕ ವಿತರಕರು ಬೆನ್ನುಬಿದ್ದಿದ್ದಾರೆ. ಪದೇ ಪದೇ ಫೋನ್ ಮಾಡಿ ಟಾರ್ಚರ್ ನೀಡುತ್ತಿರುವ ವಿತರಕರು ಮತ್ತು ಪ್ರದರ್ಶಕರಿಗೆ ಪುರಿ ಜಗನ್ನಾಥ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರ ಆಡಿಯೋ ಕ್ಲಿಪ್ ವೈರಲ್ ಆಗಿದೆ. ‘ಇವರೆಲ್ಲ ಬಾಕ್ಸ್ ಆಫೀಸ್ (Box Office Collection) ವಿಚಾರದಲ್ಲಿ ಸುಳ್ಳು ಲೆಕ್ಕ ಕೊಡ್ತಾರೆ’ ಎಂದು ಅವರು ಆರೋಪಿಸಿದ್ದಾರೆ.
ಚಿತ್ರರಂಗದಲ್ಲಿ ಪುರಿ ಜಗನ್ನಾಥ್ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ‘ಲೈಗರ್’ ಸಿನಿಮಾದ ಸೋಲಿನಿಂದ ಅವರಿಗೆ ಸಖತ್ ಹಿನ್ನಡೆ ಆಗಿದೆ. ಅದನ್ನೇ ನೆಪವಾಗಿ ಇಟ್ಟುಕೊಂಡು ಅನೇಕ ವಿತರಕರು ಹಣ ವಾಪಸ್ ನೀಡಬೇಕು ಎಂದು ಹಠ ಹಿಡಿದಿದ್ದಾರೆ. ಅಲ್ಲದೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಕೂಡ. ಇದರಿಂದ ಬೇಸರಗೊಂಡಿರುವ ಪುರಿ ಜಗನ್ನಾಥ್ ಅವರು ಕಳಿಸಿರುವ ವಾಯ್ಸ್ ನೋಟ್ ಲೀಕ್ ಆಗಿದೆ.
ಪುರಿ ಜಗನ್ನಾಥ್ ಅವರ ಇಮೇಜ್ ಹಾಳು ಮಾಡುವ ಉದ್ದೇಶದಿಂದ ಯಾರೋ ಇದನ್ನು ಲೀಕ್ ಮಾಡಿದ್ದಾರೆ. ಆದ್ರೆ ಈ ಆಡಿಯೋ ಕ್ಲಿಪ್ ಕೇಳಿಸಿಕೊಂಡ ಬಳಿಕ ನೆಟ್ಟಿಗರು ಪುರಿ ಜಗನ್ನಾಥ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ‘ನನಗೆ ನೀವು ಬ್ಲಾಕ್ ಮೇಲ್ ಮಾಡುತ್ತೀರಾ? ನಾನು ಯಾರಿಗೂ ಹಣ ವಾಪಸ್ ನೀಡಬೇಕು ಎಂಬುದಿಲ್ಲ. ಆದರೂ ಕೂಡ ನೈತಿಕತೆಯ ದೃಷ್ಟಿಯಿಂದ ನಾನು ವಾಪಸ್ ಕೊಡುತ್ತಿದ್ದೇನೆ. ಹೀಗೆಲ್ಲ ಬೆದರಿಕೆ ಹಾಕಿದರೆ ಖಂಡಿತವಾಗಿಯೂ ಹಣ ವಾಪಸ್ ಕೊಡಲ್ಲ’ ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.
‘ಪ್ರಾಮಾಣಿಕತೆ ಇಲ್ಲದ ವಿತರಕರ ಜೊತೆ ವ್ಯವಹಾರ ಮಾಡಿ ನನಗೆ ಸಾಕಾಗಿದೆ. ಇವರೆಲ್ಲ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಮೋಸ ಮಾಡ್ತಾರೆ. ಲೈಗರ್ ಚಿತ್ರವನ್ನು ಉತ್ತರ ಭಾರತದಲ್ಲಿ ವಿತರಣೆ ಮಾಡಿದ ಅನಿಲ್ ಥಡಾನಿ ಅವರು ನಮಗೆ ಸರಿಯಾದ ಲೆಕ್ಕ ನೀಡ್ತಾರೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಅದು ಹೆಚ್ಚಾಗಿತ್ತು. ಅದಕ್ಕಾಗಿಯೇ ನಾನು ಅವರ ಜೊತೆ ಕುಳಿತು ಮಾತನಾಡಲು ಇಷ್ಟಪಡುತ್ತೇನೆ. ಆದರೆ ಇಲ್ಲಿನ ನಮ್ಮ ವಿತರಕರನ್ನು ನೋಡಿದರೆ ನನಗೆ ಅಸಹ್ಯ ಆಗುತ್ತದೆ’ ಎಂದು ಪುರಿ ಜಗನ್ನಾಥ್ ಹೇಳಿರುವುದು ಚರ್ಚೆಗೆ ಕಾರಣ ಆಗಿದೆ.
ಈ ಕುರಿತು ರಾಮ್ ಗೋಪಾಲ್ ವರ್ಮಾ ಸೇರಿದಂತೆ ಟಾಲಿವುಡ್ನ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಪುರಿ ಜಗನ್ನಾಥ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ವಿತರಕರ ವಾಟ್ಸಪ್ ಗ್ರೂಪ್ಗಳಲ್ಲಿ ಪುರಿ ಜಗನ್ನಾಥ್ ವಿರುದ್ಧ ಹರಿದಾಡುತ್ತಿರುವ ಮೆಸೇಜ್ನ ಸ್ಕ್ರೀನ್ ಶಾಟ್ ಅನ್ನು ರಾಮ್ ಗೋಪಾಲ್ ವರ್ಮಾ ಬಹಿರಂಗಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:22 am, Tue, 25 October 22