ದುನಿಯಾ ವಿಜಿ ತೆಲುಗು ಸಿನಿಮಾ ಕಾದಿದೆ ಸಂಕಷ್ಟ?

Duniya Vijay: ನಟ ದುನಿಯಾ ವಿಜಯ್ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ‘ವೀರ ನರಸಿಂಹ ರೆಡ್ಡಿ’ ಸಿನಿಮಾನಲ್ಲಿ ನಟಿಸಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಬಹಳ ಪ್ರಮುಖವಾದ ಸಿನಿಮಾ ಒಂದರಲ್ಲಿ ಇದೀಗ ದುನಿಯಾ ವಿಜಿ ನಟಿಸುತ್ತಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಆದರೆ ಈ ಸಿನಿಮಾಕ್ಕೆ ಸಂಕಷ್ಟ ಎದುರಾಗುವ ಸಂಭವ ಗೋಚರವಾಗುತ್ತಿದೆ.

ದುನಿಯಾ ವಿಜಿ ತೆಲುಗು ಸಿನಿಮಾ ಕಾದಿದೆ ಸಂಕಷ್ಟ?
Duniya Viji

Updated on: Mar 25, 2026 | 12:04 PM

ದುನಿಯಾ ವಿಜಿ (Duniya Viji) ಈಗ ಕೇವಲ ಕನ್ನಡ ನಟರು ಮಾತ್ರವೇ ಅಲ್ಲ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ನಟಿಸುತ್ತಾ ಪ್ಯಾನ್ ಇಂಡಿಯಾ ನಟರಾಗುವತ್ತ ದಾಪುಗಾಲು ಹಾಕಿದ್ದಾರೆ. ಈಗಾಗಲೇ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ‘ವೀರ ನರಸಿಂಹ ರೆಡ್ಡಿ’ ಸಿನಿಮಾನಲ್ಲಿ ನಟಿಸಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಬಹಳ ಪ್ರಮುಖವಾದ ಸಿನಿಮಾ ಒಂದರಲ್ಲಿ ಇದೀಗ ದುನಿಯಾ ವಿಜಿ ನಟಿಸುತ್ತಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಆದರೆ ಈ ಸಿನಿಮಾಕ್ಕೆ ಸಂಕಷ್ಟ ಎದುರಾಗುವ ಸಂಭವ ಗೋಚರವಾಗುತ್ತಿದೆ.

ಒಂದು ಕಾಲದಲ್ಲಿ ತೆಲುಗಿನ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ ‘ಸ್ಮಂ ಡಾಗ್: 33 ಕಾಲೊನಿ’ ಸಿನಿಮಾನಲ್ಲಿ ದುನಿಯಾ ವಿಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ವಿಜಯ್ ಸೇತುಪತಿ ನಾಯಕ. ಆದರೆ ದುನಿಯಾ ವಿಜಿ ಸಹ ಅಷ್ಟೇ ಪ್ರಮುಖವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಆದರೆ ಇದೀಗ ಸಿನಿಮಾಕ್ಕೆ ಸಂಕಷ್ಟ ಎದುರಾಗುವ ಸ್ಪಷ್ಟ ಲಕ್ಷಣ ಕಾಣಿಸಿಕೊಂಡಿದೆ.

ಪುರಿ ಜಗನ್ನಾಥ್ ಅವರು ಕೆಲ ವರ್ಷಗಳ ಹಿಂದೆ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ನಟಿಸಿದ್ದ ‘ಲೈಗರ್’ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಟ್ಟರ್ ಫ್ಲಾಪ್ ಆಯ್ತು. ಸಿನಿಮಾವನ್ನು ಸ್ವತಃ ಪುರಿ ಅವರೇ ಸಹ ನಿರ್ಮಾಣ ಮಾಡಿದ್ದರು, ಭಾರಿ ದೊಡ್ಡ ಮೊತ್ತವನ್ನು ಕಳೆದುಕೊಂಡರು. ಆ ಸಮಯದಲ್ಲಿ ಹಲವು ಸಿನಿಮಾ ವಿತರಕರು ತಮ್ಮ ಹಣ ವಾಪಸ್ಸು ಮಾಡುವಂತೆ ಪುರಿ ಅವರ ಬಳಿ ಜಗಳ ಮಾಡಿದ್ದರು, ಕೆಲವರು ನಿರ್ಮಾಪಕರ ಸಂಘಗಳಿಗೆ ದೂರು ಸಹ ದಾಖಲಾಗಿತ್ತು. ಆದರೆ ಈಗ ಪುರಿ ಅವರ ಹೊಸ ಸಿನಿಮಾ ಬಿಡುಗಡೆ ಸಮಯದಲ್ಲಿ ಅವರೆಲ್ಲ ಮತ್ತೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ

ಪುರಿ ಜಗನ್ನಾಥ್ ನಿರ್ದೇಶಿಸಿ, ಮಹೇಶ್ ಬಾಬು ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ‘ಪೋಕಿರಿ’ಯ ರೀ ರಿಲೀಸ್ ಘೋಷಣೆ ಆಗಿತ್ತು. ಆದರೆ ಆ ಸಿನಿಮಾದ ನಿರ್ದೇಶಕ ಪುರಿ ಅವರಾಗಿರುವ ಕಾರಣ ಹಲವು ವಿತರಕರು ಆ ಸಿನಿಮಾವನ್ನು ವಿತರಣೆ ಮಾಡುವುದಿಲ್ಲ ಎಂದರು. ಕೊನೆಗೆ ‘ಪೋಕಿರಿ’ ಬದಲಿಗೆ ಮಹೇಶ್ ಬಾಬು ಅವರ ‘ಅತಿಥಿ’ ಸಿನಿಮಾವನ್ನು ಮರು ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಯ್ತು. ಪುರಿ ಜಗನ್ನಾಥ್ ಅವರ ‘ಲೈಗರ್’ ಸಿನಿಮಾದ ಲೆಕ್ಕ ತೀರುವವರೆಗೆ ಅವರ ಸಿನಿಮಾಗಳನ್ನು ವಿತರಣೆ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದಾಗಿ ಅವರ ಮುಂದಿನ ಸಿನಿಮಾಗಳಿಗೆ ಭಾರಿ ಹೊಡೆತ ಬೀಳುವುದು ಖಾತ್ರಿ ಆಗಿದೆ.

‘ಸ್ಲಂ ಡಾಗ್: 33 ಕಾಲೊನಿ’ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ ವಿತರಕರನ್ನು ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡುವುದು ಭಾರಿ ಕಷ್ಟವೇ ಆಗಲಿದೆ ಪುರಿ ಅವರಿಗೆ. ಸಿನಿಮಾನಲ್ಲಿ ದುನಿಯಾ ವಿಜಯ್ ಅವರಿಗೆ ಬಹಳ ಭಿನ್ನವಾದ ಪಾತ್ರವನ್ನು ಪುರಿ ಅವರು ನೀಡಿದ್ದರು. ಆದರೆ ಈಗ ಸಿನಿಮಾದ ಬಿಡುಗಡೆಯೇ ಇಕ್ಕಟ್ಟಿಗೆ ಸಿಲುಕುವಂತೆ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us