Rashmika Mandanna: ಜಪಾನ್​ನಲ್ಲೂ ಸೃಷ್ಟಿಯಾಗಿದೆ ರಶ್ಮಿಕಾ ಮಂದಣ್ಣ ಅಭಿಮಾನಿ ಬಳಗ

ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಗಳು ಇದ್ದಾರೆ. ಜಪಾನ್​ನಲ್ಲಿನ ಅಭಿಮಾನಿಗಳ ಪ್ರೀತಿಗೆ ರಶ್ಮಿಕಾ ಮಂದಣ್ಣ ಫಿದಾ ಆಗಿದ್ದಾರೆ. ಈ ಬಗ್ಗೆ ಅವರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಜಪಾನ್​ಗೆ ತೆರಳಿದ್ದ ರಶ್ಮಿಕಾ ಮಂದಣ್ಣ ಅವರು ಅಲ್ಲಿನ ಅನುಭವದ ಬಗ್ಗೆ ಪೋಸ್ಟ್ ಮಾಡಿದ್ದಾರೆ.

Rashmika Mandanna: ಜಪಾನ್​ನಲ್ಲೂ ಸೃಷ್ಟಿಯಾಗಿದೆ ರಶ್ಮಿಕಾ ಮಂದಣ್ಣ ಅಭಿಮಾನಿ ಬಳಗ
ರಶ್ಮಿಕಾ ಮಂದಣ್ಣ

Updated on: Mar 03, 2024 | 10:06 PM

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಕೇವಲ ಕನ್ನಡದ ನಟಿಯಾಗಿ ಉಳಿದುಕೊಂಡಿಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅವರಿಗೆ ಬೇಡಿಕೆ ಇದೆ. ಅಷ್ಟೇ ಅಲ್ಲದೇ ವಿದೇಶದಲ್ಲೂ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರನ್ನು ಜಪಾನ್​ಗೆ ಆಹ್ವಾನಿಸಲಾಗಿತ್ತು. ಅಲ್ಲಿನ ಪ್ರಶಸ್ತಿ ಪದಾನ ಕಾರ್ಯಕ್ರಮಕ್ಕೆ ಅತಿಥಿಯಾಗಿ ರಶ್ಮಿಕಾ ಮಂದಣ್ಣ ತೆರಳಿದ್ದರು. ಜಪಾನ್ (Japan)​ ದೇಶದ ಅಭಿಮಾನಿಗಳು ತೋರಿಸಿದ ಪ್ರೀತಿಗೆ ಅವರು ಫಿದಾ ಆಗಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮತ್ತೆ ಮತ್ತೆ ಜಪಾನ್​ಗೆ ಬರುವುದಾಗಿ ಅವರು ತಿಳಿಸಿದ್ದಾರೆ.

‘ಜಪಾನ್​ಗೆ ಹೋಗಬೇಕು ಎಂಬ ಆಸೆ ನನಗೆ ಬಹಳ ವರ್ಷಗಳಿಂದ ಇತ್ತು. ಒಬ್ಬಳೆ ಅಲ್ಲಿನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳಿ, ಪ್ರಶಸ್ತಿ ನೀಡುತ್ತೇನೆ ಎಂದು ಯಾವತ್ತೂ ಊಹಿಸಿರಲಿಲ್ಲ. ಕಡೆಗೂ ಜಪಾನ್​ಗೆ ಹೋಗಬೇಕು ಎಂಬ ಕನಸು ನನಸಾಗಿದೆ. ಇಲ್ಲಿನ ಜನರಿಂದ ಹೃತ್ಪೂರ್ವಕ ಸ್ವಾಗತ ಹಾಗೂ ಬಹಳ ಪ್ರೀತಿ ಸಿಕ್ಕಿದೆ. ಎಲ್ಲರನ್ನೂ ಭೇಟಿ ಆಗಿದ್ದೇನೆ. ಆಹಾರ, ವಾತಾವರಣ, ಜನರ ಪ್ರೀತಿ ಎಲ್ಲವೂ ಚೆನ್ನಾಗಿತ್ತು’ ಎಂದು ರಶ್ಮಿಕಾ ಮಂದಣ್ಣ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ರಶ್ಮಿಕಾ ಮಂದಣ್ಣ ಗಂಡ ವಿಜಯ್​ ದೇವರಕೊಂಡ ರೀತಿ ಇರಬೇಕು’: ನಿಜ ಎಂದ ನಟಿ

‘ಧನ್ಯವಾದಗಳು ಜಪಾನ್​. ನಿಜಕ್ಕೂ ನಿಮ್ಮನ್ನು ಪ್ರೀತಿಸುತ್ತೇನೆ. ನೀವೆಲ್ಲರೂ ಬಹಳ ಸ್ಪೆಷಲ್​. ಪ್ರತಿ ವರ್ಷ ನಾನು ಇಲ್ಲಿಗೆ ಬರುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಜಪಾನ್​ನಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡ ಈ ಫೋಟೋಗಳು ವೈರಲ್​ ಆಗಿವೆ. ಕೆಲವೇ ಗಂಟೆಗಳಲ್ಲಿ 13 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. 6 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ.

ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ ಪೋಸ್ಟ್​:

ರಶ್ಮಿಕಾ ಮಂದಣ್ಣ ಅವರು ಈಗ ‘ಪುಷ್ಪ 2’, ‘ರೇನ್​ಬೋ’, ‘ದಿ ಗರ್ಲ್​ಫ್ರೆಂಡ್​’ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಪುಷ್ಪ 2’ ಸಿನಿಮಾದ ಕೆಲಸಗಳು ಭರದಿಂದ ಸಾಗಿವೆ. ಈ ಸಿನಿಮಾದಲ್ಲಿ ಅವರು ಅಲ್ಲು ಅರ್ಜುನ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆಗಸ್ಟ್​ 15ರಂದು ‘ಪುಷ್ಪ 2’ ಬಿಡುಗಡೆ ಆಗಲಿದೆ. ಏಕಕಾಲಕ್ಕೆ ಜಪಾನ್​ನಲ್ಲೂ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಆ ಬಗ್ಗೆ ಮಾತುಕಥೆ ನಡೆಯುತ್ತಿದೆ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. ಸುಕುಮಾರ್​ ಅವರು ‘ಪುಷ್ಪ 2’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್​ ಕೂಡ ವಿದೇಶದಲ್ಲಿ ಈ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಬರ್ಲಿನ್​ಗೆ ತೆರಳಿ ಪ್ರಚಾರ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us