ಪುಷ್ಪ ರಾಜ್ ಪಾತ್ರಕ್ಕೆ ನಿಜವಾದ ಸ್ಮಗ್ಲರ್ ಸ್ಫೂರ್ತಿ; ಇಂಟರೆಸ್ಟಿಂಗ್ ವಿಷಯ ಹೇಳಿದ ಸುಕುಮಾರ್

|

Updated on: Apr 03, 2025 | 6:47 PM

ನಟ ಅಲ್ಲು ಅರ್ಜುನ್ ಅವರು ಪುಷ್ಪ ರಾಜ್ ಪಾತ್ರಕ್ಕೆ ಜೀವ ತುಂಬಿದರು. ಅದು ಒಬ್ಬ ನಿಜವಾದ ಸ್ಮಗ್ಲರ್​ನ ಹೆಸರು ಎಂದು ಸುಕುಮಾರ್ ಹೇಳಿದ್ದಾರೆ. ಆ ಸ್ಮಗರ್​ನನ್ನು ಸುಕುಮಾರ್​ ಅವರು ಭೇಟಿ ಆಗಿದ್ದರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸುಕುಮಾರ್ ಅವರು ಈ ವಿಷಯ ತಿಳಿಸಿದ್ದಾರೆ.

ಪುಷ್ಪ ರಾಜ್ ಪಾತ್ರಕ್ಕೆ ನಿಜವಾದ ಸ್ಮಗ್ಲರ್ ಸ್ಫೂರ್ತಿ; ಇಂಟರೆಸ್ಟಿಂಗ್ ವಿಷಯ ಹೇಳಿದ ಸುಕುಮಾರ್
Allu Arjun, Sukumar
Follow us on

‘ಪುಷ್ಪ’ ಮತ್ತು ‘ಪುಷ್ಪ 2’ (Pushpa 2) ಸಿನಿಮಾಗಳು ಮಾಡಿದ ಮೋಡಿ ಸಣ್ಣದಲ್ಲ. ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಈ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿತು. ನಿರ್ದೇಶಕ ಸುಕುಮಾರ್​ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದರು. ರಕ್ತಚಂದನದ ಸ್ಮಗ್ಲಿಂಗ್ ಬಗ್ಗೆ ‘ಪುಷ್ಪ 2’ ಸಿನಿಮಾದ ಕಥೆ ಇದೆ. ಅಷ್ಟಕ್ಕೂ ಈ ಸಿನಿಮಾದ ಕಥಾನಾಯಕನ ಪಾತ್ರ ಹುಟ್ಟಿದ್ದು ಹೇಗೆ ಎಂಬುದನ್ನು ನಿರ್ದೇಶಕ ಸುಕುಮಾರ್ (Sukumar) ಅವರು ಈಗ ತಿಳಿಸಿದ್ದಾರೆ. ಆ ಪಾತ್ರಕ್ಕೆ ಒಬ್ಬ ನಿಜವಾದ ಸ್ಮಗ್ಲರ್ ಕಾರಣ ಎಂದು ಅವರು ಹೇಳಿದ್ದಾರೆ.

ನಿರ್ದೇಶಕ ಸುಕುಮಾರ್ ಅವರು ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ‘ಪುಷ್ಪ 2’ ಸಿನಿಮಾದ ತೆರೆ ಹಿಂದಿನ ವಿಷಯಗಳ ಬಗ್ಗೆ ಮಾತನಾಡಿದರು. ‘ದಕ್ಷಿಣ ಭಾರತದಲ್ಲಿ ದಶಕಗಳ ಕಾಲ ರಕ್ತ ಚಂದನದ ಕಳ್ಳ ಸಾಗಾಣಿಕೆ ಮಿತಿಮೀರಿತ್ತು. ಆ ಬಗ್ಗೆ ನಾನು ಸಾಕ್ಷ್ಯಚಿತ್ರ ಮಾಡಬೇಕು ಎಂದು ನಿರ್ಧರಿಸಿದ್ದೆ. ಅದಕ್ಕಾಗಿ ಅಧ್ಯಯನ ನಡೆಸುತ್ತಿದಾಗ ಅನೇಕ ಸ್ಮಗ್ಲರ್​ಗಳನ್ನು ನಾನು ಭೇಟಿಯಾಗಿದ್ದೆ’ ಎಂದು ನಿರ್ದೇಶಕ ಸುಕುಮಾರ್ ತಿಳಿಸಿದ್ದಾರೆ.

‘ನಾನು ಭೇಟಿ ಮಾಡಿದ ಸ್ಮಗ್ಲರ್​ಗಳಲ್ಲಿ ಒಬ್ಬನ ಹೆಸರು ಪುಷ್ಪ ರಾಜ್ ಆಗಿತ್ತು. ಎಲ್ಲರೂ ಅವನನ್ನು ಪುಷ್ಪ ಎಂದು ಕರೆಯುತ್ತಿದ್ದರು. ಆ ಹೆಸರು ನನಗೆ ಇಂಟರೆಸ್ಟಿಂಗ್ ಎನಿಸಿತು. ಹಾಗಾಗಿ ಅಲ್ಲು ಅರ್ಜುನ್ ಅವರ ಪಾತ್ರಕ್ಕೆ ಪುಷ್ಪ ರಾಜ್ ಎಂದು ಹೆಸರು ಇಡಲು ನಿರ್ಧರಿಸಿದೆ’ ಎಂದಿದ್ದಾರೆ ಸುಕುಮಾರ್. ಡಿಫರೆಂಟ್ ಗೆಟಪ್ ಇರುವ ಆ ಪಾತ್ರವನ್ನು ಅಲ್ಲು ಅರ್ಜುನ್ ಅವರು ಉತ್ತಮವಾಗಿ ನಿಭಾಯಿಸಿದರು. ‘ಪುಷ್ಪ’ ಚಿತ್ರದಲ್ಲಿನ ನಟನೆಗೆ ಅವರು ರಾಷ್ಟ್ರ ಪ್ರಶಸ್ತಿ ಪಡೆದರು.

ಇದನ್ನೂ ಓದಿ: ‘ಪುಷ್ಪ 3’ನಲ್ಲಿ ಅಲ್ಲು ಅರ್ಜುನ್ ಜೊತೆ ಇನ್ನಿಬ್ಬರು ಸ್ಟಾರ್ ಹೀರೋಗಳು

‘ಪುಷ್ಪ 3’ ಕೂಡ ಬರಲಿದೆ ಎಂದು ಈಗಾಗಲೇ ಹೇಳಲಾಗಿದೆ. ಆದರ ಆ ಪ್ರಾಜೆಕ್ಟ್ ಸೆಟ್ಟೇರಲು ಸಾಕಷ್ಟು ಸಮಯ ಹಿಡಿಯಲಿದೆ. ಸದ್ಯಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಯಾವುದು ಎಂಬುದು ಖಚಿತ ಆಗಿಲ್ಲ. ಆ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ‘ಪುಷ್ಪ 3’ ಭರ್ಜರಿ ಹಿಟ್ ಆಗಿದ್ದರಿಂದ ಮುಂದಿನ ಸಿನಿಮಾವನ್ನು ಅದಕ್ಕಿಂತಲೂ ಚೆನ್ನಾಗಿ ಮಾಡಬೇಕಾದ ಒತ್ತಡ ಸುಕುಮಾರ್ ಅವರ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:44 pm, Thu, 3 April 25