AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಷ್ಪ 2 ಆಡಿಯೋ, ಸ್ಯಾಟಲೈಟ್ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ: ಖರೀದಿಸಿದ್ದು ಬಾಲಿವುಡ್​ನ ದೊಡ್ಡ ಕುಳ

Pushpa 2: ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾದ ಆಡಿಯೋ ಹಾಗೂ ಹಿಂದಿ ಆವೃತ್ತಿಯ ಸ್ಯಾಟಲೈಟ್ ಹಕ್ಕನ್ನು ಬಾಲಿವುಡ್​ನ ದೊಡ್ಡ ನಿರ್ಮಾಪಕರೊಬ್ಬರು ಭಾರಿ ಮೊತ್ತ ಕೊಟ್ಟು ಖರೀದಿಸಿದ್ದಾರೆ.

ಪುಷ್ಪ 2 ಆಡಿಯೋ, ಸ್ಯಾಟಲೈಟ್ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ: ಖರೀದಿಸಿದ್ದು ಬಾಲಿವುಡ್​ನ ದೊಡ್ಡ ಕುಳ
ಪುಷ್ಪ 2
ಮಂಜುನಾಥ ಸಿ.
|

Updated on: May 11, 2023 | 7:07 PM

Share

2023 ರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ (Pan India) ಸಿನಿಮಾಗಳಲ್ಲಿ ಪುಷ್ಪ 2 ಒಂದು. 2021ರ ಅಂತ್ಯದಲ್ಲಿ ಬಿಡುಗಡೆ ಆಗಿದ್ದ ಪುಷ್ಪ ಸಿನಿಮಾ ಕೋವಿಡ್ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಮುನ್ನುಡಿ ಬರೆದ ಸಿನಿಮಾ ಎನ್ನಬಹುದು. ಪುಷ್ಪ (Pushpa) ಸಿನಿಮಾವು ಹಿಂದಿ ಪ್ರದೇಶದಲ್ಲಿ ಮಾಡಿದ ಅತ್ಯದ್ಭುತ ಬ್ಯುಸಿನೆಸ್​ನಿಂದಾಗಿಯೇ ಅದರ ಬಳಿಕ ಬಂದ ಹಲವು ಸಿನಿಮಾಗಳು ಹಿಂದಿ ಡಬ್​ಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಹಿಂದಿ ಭಾಷಿಕ ಪ್ರದೇಶದಲ್ಲಿ ಸಿನಿಮಾ ವಿತರಣೆಯ ಬಗ್ಗೆ ವಿಶೇಷ ಕಾಳಜಿವಹಿಸಿದವು. ಇದೀಗ ಪುಷ್ಪ 2 (Pushpa 2) ಸಿನಿಮಾ ಬಹುತೇಕ ರೆಡಿಯಾಗಿದ್ದು, ಸಿನಿಮಾದ ಡಿಜಿಟಲ್, ಆಡಿಯೋ, ಸ್ಯಾಟಲೈಟ್ ಹಕ್ಕುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

2021ರಲ್ಲಿ ಬಿಡುಗಡೆ ಆಗಿದ್ದ ಪುಷ್ಪ ಸಿನಿಮಾದ ಎಲ್ಲ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಶ್ರೀವಲ್ಲಿ, ಊ ಅಂಟಾವ ಹಾಡುಗಳಂತೂ ದೊಡ್ಡ ಕ್ರೇಜ್ ಹುಟ್ಟಿಸಿದ್ದವು. ಇದೇ ಕಾರಣಕ್ಕೆ ಈಗ ಸಿನಿಮಾದ ಆಡಿಯೋ ಹಕ್ಕುಗಳಿಗೆ ಆಡಿಯೋ ಸಂಸ್ಥೆಗಳ ನಡುವೆ ದೊಡ್ಡ ಪೈಪೋಟಿಯೇ ಏರ್ಪಟ್ಟಿತ್ತು. ಕೊನೆಗೆ ಪುಷ್ಪ 2 ಸಿನಿಮಾದ ಆಡಿಯೋ ಹಕ್ಕುಗಳು ಬಾಲಿವುಡ್​ನ ದೊಡ್ಡ ಆಡಿಯೋ ಸಂಸ್ಥೆ ಟಿ ಸೀರೀಸ್ ಪಾಲಾಗಿದೆ. ಬಾಲಿವುಡ್​ನ ಬಡಾ ನಿರ್ಮಾಪಕರಲ್ಲಿ ಒಬ್ಬರಾಗಿರುವ ಭೂಷಣ್ ಕುಮಾರ್ ಟಿ ಸೀರೀಸ್ ಒಡೆಯರಾಗಿದ್ದು, ಪುಷ್ಪ 2 ಸಿನಿಮಾದ ಎಲ್ಲ ಭಾಷೆಯ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ. ವಿದೇಶಿ ಭಾಷೆಗಳ ಆಡಿಯೋ ಹಕ್ಕುಗಳು ಸಹ ಟಿ-ಸೀರೀಸ್ ಪಾಲಾಗಿವೆ.

ಆಡಿಯೋ ಹಕ್ಕುಗಳು ಮಾತ್ರವೇ ಅಲ್ಲದೆ ಸಿನಿಮಾದ ಹಿಂದಿ ಡಬ್ಬಿಂಗ್ ಸ್ಯಾಟಲೈಟ್ ಹಕ್ಕನ್ನು ಸಹ ಭೂಷಣ್ ಕುಮಾರ್ ಖರೀದಿ ಮಾಡಿದ್ದಾರೆ. ಪುಷ್ಪ 2 ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಬೇರೆ ಬೇರೆ ಭಾಷೆಗಳಿಗೆ ಬೇರೆ-ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದ್ದು, ಹಿಂದಿ ಆವೃತ್ತಿಯ ಸ್ಯಾಟಲೈಟ್ ಹಕ್ಕು ಭೂಷಣ್ ಕುಮಾರ್ ಪಾಲಾಗಿದೆ. ಆಡಿಯೋ ಹಾಗೂ ಹಿಂದಿ ಸ್ಯಾಟಲೈಟ್ ಹಕ್ಕು ಎರಡಕ್ಕೂ ಸುಮಾರು 60 ಕೋಟಿ ಹಣವನ್ನು ಭೂಷಣ್ ಕುಮಾರ್ ನೀಡಿದ್ದಾರಂತೆ.

ಈ ಹಿಂದೆ ಪುಷ್ಪ ಸಿನಿಮಾದ ಹಿಂದಿ ಸ್ಯಾಟಲೈಟ್ ಹಕ್ಕನ್ನು ಚಿತ್ರೀಕರಣದ ಹಂತದಲ್ಲಿಯೇ ತೀರ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು. ಆದರೆ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಮಾಡುವ ನಿರ್ಧಾರ ಮಾಡಿದ ಬಳಿಕ ಹಿಂದಿ ಸ್ಯಾಟಲೈಟ್ ಹಕ್ಕು ಹೊಂದಿರುವ ವ್ಯಕ್ತಿಗೆ ಇನ್ನೂ ಹೆಚ್ಚಿನ ಮೊತ್ತ ನೀಡಿ ಪುನಃ ಅದನ್ನು ನಟಿ ರವೀನಾ ಟಂಡನ್ ಪತಿ ಅನಿಲ್ ತಂಡಾನಿಗೆ ನೀಡಲಾಯಿತು. ಸಿನಿಮಾವು ಹಿಂದಿ ಭಾಷಿಕ ಪ್ರದೇಶದಲ್ಲಿ ಭಾರಿ ದೊಡ್ಡ ಹಿಟ್ ಎನಿಸಿಕೊಂಡಿತು. ಇದೀಗ ಪುಷ್ಪ 2 ಸಿನಿಮಾದ ಹಿಂದಿ ಆವೃತ್ತಿ ವಿತರಣೆಗೂ ಭಾರಿ ಡಿಮ್ಯಾಂಡ್ ಇದ್ದು, ಕರಣ್ ಜೋಹರ್ ಹಾಗೂ ಅನಿಲ್ ತಂಡಾನಿ ಇಬ್ಬರಲ್ಲಿ ಒಬ್ಬರು ವಿತರಣೆ ಹಕ್ಕು ಪಡೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:Niharika Konidela: ‘ಪುಷ್ಪ 2’ ಚಿತ್ರದಲ್ಲಿ ನಿಹಾರಿಕಾ ಕೊನಿಡೆಲಾ? ಡಿವೋರ್ಸ್​ ಗುಮಾನಿ ಬೆನ್ನಲ್ಲೇ ಮತ್ತೊಂದು ಗುಸುಗುಸು

ಪುಷ್ಪ 2 ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಎದುರು ಫಹಾದ್ ಫಾಸಿಲ್ ವಿಲನ್ ಆಗಿ ನಟಿಸುತ್ತಿದ್ದಾರೆ. ಫಹಾದ್ ಜೊತೆಗೆ ಇನ್ನೂ ಕೆಲವು ದೊಡ್ಡ ನಟರು ಇರಲಿದ್ದಾರೆ ಎನ್ನಲಾಗುತ್ತಿದೆ. ನಿಹಾರಿಕಾ ಕೊನಿಡೇಲ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ