ಒಂದು ಕೈಯಲ್ಲಿ ಕೊಡಲಿ, ಇನ್ನೊಂದು ಕೈಯಲ್ಲಿ ಗನ್; ಫಹಾದ್ ಫಾಸಿಲ್ ಜನ್ಮದಿನಕ್ಕೆ ‘ಪುಷ್ಪ 2’ ಪೋಸ್ಟರ್
ಪ್ಯಾನ್ ಇಂಡಿಯಾ ಸ್ಟಾರ್ ಫಹಾದ್ ಫಾಸಿಲ್ ಅವರಿಗೆ ಈಗ 42 ವರ್ಷ ವಯಸ್ಸು. ಆ.8ರಂದು ಅವರಿಗೆ ಜನ್ಮದಿನದ ಸಂಭ್ರಮ. ಈ ಪ್ರಯುಕ್ತ ‘ಪುಷ್ಪ 2’, ‘ವೆಟ್ಟಯ್ಯನ್’ ಮುಂತಾದ ಸಿನಿಮಾ ತಂಡಗಳಿಂದ ಬರ್ತ್ಡೇ ಪೋಸ್ಟರ್ ಅನಾವರಣ ಆಗಿದೆ. ‘ಪುಷ್ಪ 2’ ಚಿತ್ರದಲ್ಲಿ ಬನ್ವರ್ ಸಿಂಗ್ ಶೆಕಾವತ್ ಎಂಬ ಪಾತ್ರವನ್ನು ಫಹಾದ್ ಫಾಸಿಲ್ ಮಾಡುತ್ತಿದ್ದಾರೆ.
ಖ್ಯಾತ ಮಲಯಾಳಂ ನಟ ಫಹಾದ್ ಫಾಸಿಲ್ ಅವರು ಇಂದು (ಆಗಸ್ಟ್ 8) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿರುವ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಫಹಾದ್ ಫಾಸಿಲ್ಗೆ ಬರ್ತ್ಡೇ ವಿಶ್ ತಿಳಿಸಲು ಅನೇಕ ಚಿತ್ರತಂಡಗಳು ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಿವೆ. ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾ ಟೀಮ್ ಕೂಡ ಫಹಾದ್ ಫಾಸಿಲ್ ಅವರ ಪೋಸ್ಟರ್ ಅನಾವರಣ ಮಾಡಿದೆ. ಇದರಲ್ಲಿ ಫಹಾದ್ ಅವರ ಲುಕ್ ಸೂಪರ್ ಆಗಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಲು ಈ ಪೋಸ್ಟರ್ ಸಹಕಾರಿ ಆಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಶೂಟಿಂಗ್ ವಿಳಂಬವಾದ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಡಿಸೆಂಬರ್ 6ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬನ್ವರ್ ಸಿಂಗ್ ಶೆಕಾವತ್ ಎಂಬುದು ಆ ಪಾತ್ರದ ಹೆಸರು. ಹುಟ್ಟುಹಬ್ಬದ ಪ್ರಯುಕ್ತ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಗನ್, ಕೊಡಲಿ ಹಿಡಿದು ಫಹಾದ್ ಪಾಸಿಲ್ ಪೋಸ್ ನೀಡಿದ್ದಾರೆ.
View this post on Instagram
‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಬಿಗ್ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿರುವ ‘ಪುಷ್ಪ 2’ ಸಿನಿಮಾಗೆ ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್ ವೇಳೆಗೆ ಈ ಚಿತ್ರದ ಶೂಟಿಂಗ್ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ರಾವ್ ರಮೇಶ್, ಪ್ರಕಾಶ್ ರಾಜ್, ಜಗಪತಿ ಬಾಬು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
View this post on Instagram
ಫಹಾದ್ ಫಾಸಿಲ್ ನಟನೆಯ ‘ಆವೇಷಂ’ ಸಿನಿಮಾ ಈ ವರ್ಷ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತು. ಈಗ ಅವರ ಕೈತುಂಬ ಆಫರ್ಗಳು ಇವೆ. ತಮಿಳಿನ ಬಹುನಿರೀಕ್ಷಿತ ‘ವೆಟ್ಟಯ್ಯನ್’ ಸಿನಿಮಾದಲ್ಲಿ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ರಜನಿಕಾಂತ್, ಅಮಿತಾಭ್ ಬಚ್ಚನ್ ಅವರು ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಅವರಿಬ್ಬರ ಜೊತೆ ಫಹಾದ್ ಫಾಸಿಲ್ ನಿಂತಿರುವ ಫೋಟೋವನ್ನು ‘ವೆಟ್ಟಯ್ಯನ್’ ಚಿತ್ರತಂಡ ಹಂಚಿಕೊಂಡಿದೆ. ಫಹಾದ್ ಫಾಸಿಲ್ ಅವರ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.