‘ಪುಷ್ಪ 2’ ಸಿನಿಮಾ ಫ್ಲಾಪ್ ಆದರೂ ‘ಕೆಜಿಎಫ್ 2’ ದಾಖಲೆ ಮುರಿಯುತ್ತೆ: ನಿರ್ಮಾಪಕ

‘ಪುಷ್ಪ 2’ ಸಿನಿಮಾ ಒಂದು ವೇಳೆ ಚೆನ್ನಾಗಿಲ್ಲವೆಂದು ಬಾಕ್ಸ್ ಆಫೀಸ್​ನಲ್ಲಿ ಮುಗ್ಗರಿಸಿದರೂ ಸಹ ‘ಕೆಜಿಎಫ್ 2’ ಸಿನಿಮಾಗಿಂತಲೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಪಕ ಹೇಳಿದ್ದಾರೆ.

‘ಪುಷ್ಪ 2’ ಸಿನಿಮಾ ಫ್ಲಾಪ್ ಆದರೂ ‘ಕೆಜಿಎಫ್ 2’ ದಾಖಲೆ ಮುರಿಯುತ್ತೆ: ನಿರ್ಮಾಪಕ
Follow us
ಮಂಜುನಾಥ ಸಿ.
|

Updated on:Jul 17, 2024 | 3:57 PM

‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆದಾಗ ಅದು ಸೃಷ್ಟಿಸಿದ್ದ ದಾಖಲೆ, ಬಾಕ್ಸ್ ಆಫೀಸ್ ಅನ್ನು ಕಬ್ಜ ಮಾಡಿದ ರೀತಿಯಿಂದ ಕನ್ನಡ ಮಾತ್ರವಲ್ಲದೆ ಹಲವು ಚಿತ್ರರಂಗಗಳು ಮತ್ತೆ ಚಿಗುರಿ ನಿಂತವು. ಆ ರೀತಿಯ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ‘ಕೆಜಿಎಫ್ 2’ ಮಾಡಿತ್ತು. ‘ಕೆಜಿಎಫ್ 2’ ಸಿನಿಮಾ ಹಣ ಗಳಿಸಿದ ರೀತಿ ನೋಡಿ ಇನ್ಯಾವುದೇ ಸಿನಿಮಾಗಳು ಈ ದಾಖಲೆಯನ್ನು ಅಳಿಸಲಾಗುವುದಿಲ್ಲ ಎಂದೇ ಎಣಿಸಲಾಗಿತ್ತು. ಆದರೆ ಅದಾದ ಬಳಿಕ ಬಂದ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳು ‘ಕೆಜಿಎಫ್ 2’ ದಾಖಲೆಯನ್ನು ಮುರಿದವಾದರೂ ‘ಕೆಜಿಎಫ್ 2’ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ಉಳಿದುಕೊಂಡಿದೆ. ಆದರೆ ಈಗ ಸಿನಿಮಾಗಳು ಹಣ ಮಾಡುವುದು ಅದೆಷ್ಟು ಸುಲಭವಾಗಿದೆಯೆಂದರೆ ಜನಪ್ರಿಯ ನಿರ್ಮಾಪಕರೊಬ್ಬರು ಹೇಳಿರುವಂತೆ ‘ಪುಷ್ಪ 2’ ಸಿನಿಮಾ ಫ್ಲಾಪ್ ಆದರೂ ಅದು ‘ಕೆಜಿಎಫ್ 2’ ಗಳಿಕೆಯನ್ನು ಹಿಂದಿಕ್ಕಲಿದೆಯಂತೆ!

ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿರುವ ಬಹು ಕೋಟಿ ಬಜೆಟ್​ನ ಪ್ಯಾನ್ ಇಂಡಿಯಾ ಸಿನಿಮಾ ‘ಕನಗುವ’ಗೆ ಬಂಡವಾಳ ಹೂಡಿರುವ ನಿರ್ಮಾಪಕ ಕೆಇ ಜ್ಞಾನವೇಲು ರಾಜ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಪುಷ್ಪ 2’ ಸಿನಿಮಾ ತಂಡದ ಮಾರುಕಟ್ಟೆ ಕೌಶಲ ಮತ್ತು ಆ ಸಿನಿಮಾಕ್ಕೆ ಇರುವ ಡಿಮ್ಯಾಂಡ್ ಹೇಗಿದೆಯೆಂದರೆ ಆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಫ್ಲಾಪ್ ಆದರೂ ಸಹ ‘ಕೆಜಿಎಫ್ 2’ ಸಿನಿಮಾದ ದಾಖಲೆಯನ್ನು ಮುರಿದು ಹಾಕಲಿದೆ ಎಂದಿದ್ದಾರೆ. ಅದಕ್ಕೆ ಕೆಲವು ಲೆಕ್ಕಾಚಾರವನ್ನು ಸಾಕ್ಷಿಯಾಗಿ ನೀಡಿದ್ದಾರೆ.

‘ಪುಷ್ಪ 2’ ಸಿನಿಮಾದ ಚಿತ್ರಮಂದಿರಯೇತರ (ನಾನ್ ಥಿಯಾಟ್ರಿಕಲ್) ಬ್ಯುಸಿನೆಸ್ ಅದೂ ಕೇವಲ ಹಿಂದಿ ಬೆಲ್ಟ್​ಗೆ ಮಾತ್ರವೇ ಸುಮಾರು 250 ಕೋಟಿಯನ್ನು ದಾಟಿದೆ. ‘ಪುಷ್ಪ 2’ ಸಿನಿಮಾದ ಹಿಂದಿ ಒಟಿಟಿ, ಹಿಂದಿ ಸ್ಯಾಟಲೈಟ್ ಹಾಗೂ ಹಿಂದಿ ಆಡಿಯೋ ಹಕ್ಕುಗಳನ್ನು 250 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಅವರ (ಪುಷ್ಪ ಚಿತ್ರತಂಡ) ಪ್ರಕಾರ, ಸಿನಿಮಾ ಚೆನ್ನಾಗಿ ಓಡಲಿಲ್ಲವೆಂದರೂ ಅವರು ‘ಕೆಜಿಎಫ್ 2’ ಕಲೆಕ್ಷನ್ ದಾಖಲೆಯನ್ನು ಮುರಿಯಲಿದ್ದಾರೆ’ ಎಂದಿದ್ದಾರೆ ಜ್ಞಾನವೇಲು.

ಇದನ್ನೂ ಓದಿ:ಡಿಸೆಂಬರ್​ನಲ್ಲೂ ರಿಲೀಸ್ ಆಗಲ್ಲ ‘ಪುಷ್ಪ 2’ ಸಿನಿಮಾ? ಆಗಿದೆ ಪ್ರಮುಖ ಬೆಳವಣಿಗೆ

‘ಒಂದೊಮ್ಮೆ ‘ಪುಷ್ಪ 2’ ಸಿನಿಮಾ ಚೆನ್ನಾಗಿದ್ದು ಬಾಕ್ಸ್ ಆಫೀಸ್​ನಲ್ಲಿ ಗೆದ್ದು ಬಿಟ್ಟರೆ ಈಗಿರುವ ಎಲ್ಲ ಕಲೆಕ್ಷನ್ ದಾಖಲೆಗಳನ್ನೂ ಅದು ಪುಡಿಗಟ್ಟಲಿದೆ’ ಎಂದಿದ್ದಾರೆ ಜ್ಞಾನವೇಲು. ಅದು ನಿಜವೂ ಹೌದು, ಜ್ಞಾನವೇಲು ಹೇಳಿರುವಂತೆ ‘ಪುಷ್ಪ 2’ ಸಿನಿಮಾಕ್ಕೆ ಸುಮಾರು 200 ಕೋಟಿಯ ವರೆಗೂ ಬಜೆಟ್ ಹಾಕಿರಬಹುದಂತೆ ಆ ಹಣವನ್ನು ಅವರು ಈಗಾಗಲೇ ರಿಕವರಿ ಮಾಡಿದ್ದಾಗಿದೆ. ಹಿಂದಿ ನಾನ್ ಥಿಯೇಟ್ರಿಕಲ್ ಮಾರಾಟವಾಗಿರುವ ಮೊತ್ತದ ದುಪ್ಪಟ್ಟು ಮೊತ್ತಕ್ಕೆ ದಕ್ಷಿಣ ಭಾರತದ ನಾನ್ ಥಿಯಾಟ್ರಿಕಲ್ ರೈಟ್ಸ್ ಮಾರಾಟ ಆಗಲಿದೆ. ಇನ್ನು ಸಿನಿಮಾ ಬಿಡುಗಡೆ ಬಳಿಕ ಸಿನಿಮಾ ಹೇಗಿದ್ದರೂ ಸಹ ಮೊದಲ ಮೂರು ದಿನದಲ್ಲಿ ಕನಿಷ್ಟ 150 ಕೋಟಿ ಕಲೆಕ್ಷನ್ ಖಾಯಂ ಅದೂ ಭಾರತದಲ್ಲಿ ಮಾತ್ರ.

‘ಪುಷ್ಪ 2’ ಚಿತ್ರತಂಡ ಈಗಾಗಲೇ ಪ್ರಚಾರ ಹಾಗೂ ಬಿಡುಗಡೆ ಬಗ್ಗೆ ನೀಲಿ ನಕ್ಷೆಯನ್ನು ತಯಾರಿಸಿಯೇ ಕೂತಿದೆ. ಈ ಹಿಂದೆಲ್ಲ ದುಬೈ, ಯುಎಸ್, ಯುಕೆಗಳಲ್ಲಿ ಮಾತ್ರವೇ ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ‘ಪುಷ್ಪ 2’ ಸಿನಿಮಾವನ್ನು ರಷ್ಯಾ, ಜಪಾನ್, ಜರ್ಮನಿಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಈಗಾಗಲೇ ಯೋಜನೆ ರೂಪಿಸಿಕೊಂಡಿವೆ. ಹಾಗಾಗಿ ಭಾರತದಲ್ಲಿ ಮೊದಲ ದಿನ ಎಷ್ಟು ಕಲೆಕ್ಷನ್ ಆಗಲಿದೆಯೋ ಅದೇ ಮೊತ್ತದ ಅಥವಾ ಅದಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ವಿದೇಶದಿಂದ ಆಗುವ ಸಾಧ್ಯತೆ ಇದೆ. ಒಟ್ಟಾರೆ ‘ಪುಷ್ಪ 2’ ಸಿನಿಮಾ ಭಾರಿ ದಾಖಲೆಯನ್ನಂತೂ ನಿರ್ಮಿಸಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Wed, 17 July 24