‘ಪುಷ್ಪ’ ಸಿನಿಮಾ (Pushpa Movie) ಡಿಸೆಂಬರ್ 17ರಂದು ತೆರೆಗೆ ಬಂದಿದೆ. ಈ ಚಿತ್ರದ ಎದುರು ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗದ ಕಾರಣ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಆದಾಗ್ಯೂ ಬಾಕ್ಸ್ ಆಫೀಸ್ ಕಲೆಕ್ಷನ್ (Pushpa Movie Box Office Collection)ಅಂದುಕೊಂಡ ಮಟ್ಟದಲ್ಲಿ ಆಗಿಲ್ಲ. ‘ಪುಷ್ಪ’ಕ್ಕೆ ಪೈರಸಿ ಕಾಟ ಅಂಟಿದ್ದು ಒಂದು ಕಡೆಯಾದರೆ, ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿಲ್ಲ. ಹೀಗಾಗಿ, ಸಿನಿಮಾ ಅಂದುಕೊಂಡ ಮಟ್ಟಿಗೆ ಕಲೆಕ್ಷನ್ ಮಾಡಿಲ್ಲ. ಹಾಗಾದರೆ, ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಪುಷ್ಪ’ ಆಂಧ್ರ ಪ್ರದೇಶದ ನಿಜಾಮ್ ಭಾಗದಲ್ಲಿ11.44 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಉಳಿದಂತೆ ಕೃಷ್ಣ ಭಾಗದಲ್ಲಿ ಒಂದು ಕೋಟಿ ರೂಪಾಯಿ, ಗುಂಟೂರು ಭಾಗದಲ್ಲಿ 2.28 ಕೋಟಿ ರೂಪಾಯಿ ಸೇರಿದಂತೆ ಒಟ್ಟೂ 24.90 ಕೋಟಿಯನ್ನು ಈ ಚಿತ್ರ ಕಲೆಕ್ಷನ್ ಮಾಡಿದೆ. ‘ಪುಷ್ಪ’ ಮೊದಲ ದಿನ 30-35 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಸಿನಿಪಂಡಿತರು ಅಂದಾಜಿಸಿದ್ದರು. ಆದರೆ, ಹಾಗಾಗಿಲ್ಲ. ತಮಿಳುನಾಡಿನಲ್ಲೂ ಚಿತ್ರದ ಕಲೆಕ್ಷನ್ ಇಳಿಕೆ ಆಗಿದೆ. ಮೊದಲ ದಿನ ಈ ಸಿನಿಮಾ 10 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ, ಚಿತ್ರ ಗಳಿಕೆ ಮಾಡಿದ್ದು ಕೇವಲ 4 ಕೋಟಿ ರೂಪಾಯಿ ಮಾತ್ರ.
‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಕ್ಕಾ ಹಳ್ಳಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಕ್ತ ಚಂದನದ ಕಳ್ಳ ಸಾಗಾಣಿಕೆಯ ಬಗ್ಗೆ ಹೇಳಲಾಗಿದೆ. ಅಲ್ಲು ಅರ್ಜುನ್ ಲುಕ್ ಬಗ್ಗೆ, ಸಿನಿಮಾ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಸಿನಿಮಾದ ಅವಧಿ ದೀರ್ಘ ಎನಿಸುತ್ತದೆ. ಸಿನಿಮಾ ಬಗ್ಗೆ ನೆಗೆಟಿವ್ ಮಾತನಾಡಿದವರೇ ಹೆಚ್ಚು. ಈ ಕಾರಣಕ್ಕೆ ಅನೇಕರು ಈ ಸಿನಿಮಾ ಟ್ರೋಲ್ ಮಾಡುತ್ತಿದ್ದಾರೆ.
ಈ ಮೊದಲು ‘ಪುಷ್ಪ’ ಬಗ್ಗೆ ಮಾತನಾಡಿದ್ದ ‘ಉಪ್ಪೇನಾ’ ನಿರ್ದೇಶಕ ಬುಚಿ ಬಾಬು, ‘ನಾನು ಸಿನಿಮಾದ ಮೊದಲ ಭಾಗವನ್ನು ವೀಕ್ಷಣೆ ಮಾಡಿದ್ದೇನೆ. ಈ ಚಿತ್ರ 10 ಕೆಜಿಎಫ್ಗೆ ಸಮ. ಸಿನಿಮಾದಲ್ಲಿ ಬರುವ ಪಾತ್ರಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿವೆ. ನಾನು ಇದನ್ನು ಅತಿಶಯೋಕ್ತಿಯಾಗಿ ಹೇಳುತ್ತಿಲ್ಲ. ಸಿನಿಮಾ ನೋಡಿದ ಮೇಲೆ ನಿಮಗೇ ತಿಳಿಯಲಿದೆ’ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕನ್ನಡಿಗರು ಹೇಳುತ್ತಿದ್ದಾರೆ.
ಇದನ್ನೂ ಓದಿ: