‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್​

|

Updated on: Jul 15, 2024 | 10:30 PM

ಗುಣಮಟ್ಟ ಚೆನ್ನಾಗಿ ಇರುತ್ತದೆ ಎಂಬ ಕಾರಣಕ್ಕೆ ಪ್ರೇಕ್ಷಕರು ಮಲ್ಟಿಪ್ಲೆಕ್ಸ್​ಗೆ ಹೋಗುತ್ತಾರೆ. ಆದರೆ ಹೈದರಾಬಾದ್​ನ ಪಿವಿಆರ್​ ಒಳಗೆ ಮಳೆ ಸುರಿದಿದೆ! ‘ಕಲ್ಕಿ 2898 ಎಡಿ’ ಸಿನಿಮಾ ಪ್ರದರ್ಶನ ಆಗುವಾಗಲೇ ಮಲ್ಟಿಪ್ಲೆಕ್ಸ್​ ಒಳಗೆ ಮಳೆ ನೀರು ಬೀಳಲು ಆರಂಭಿಸಿದೆ. ಇದರಿಂದ ಪ್ರೇಕ್ಷಕರಿಗೆ ಕಿರಿಕಿರಿ ಆಗಿದೆ. ಅಲ್ಲದೇ, ಶಾರ್ಟ್​ ಸರ್ಕ್ಯೂಟ್​ ಆಗಬಹುದು ಎಂಬ ಆತಂಕ ಕಾಡಿದೆ.

‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್​
ಪಿವಿಆರ್​ ಒಳಗೆ ಸುರಿದ ಮಳೆ ನೀರು
Follow us on

ಹಲವು ಕಡೆಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಅಚ್ಚರಿ ಏನೆಂದರೆ, ಹೈದರಾಬಾದ್​ನಲ್ಲಿ ಚಿತ್ರಮಂದಿರದ ಒಳಗೆ ಮಳೆ ನೀರು ಸುರಿದಿದೆ. ಅದು ಕೂಡ ಮಲ್ಟಿಪ್ಲೆಕ್ಸ್​ನಲ್ಲಿ! ಪ್ರಭಾಸ್​ ನಟನೆ ‘ಕಲ್ಕಿ 2898 ಎಡಿ’ ಸಿನಿಮಾ ಎಲ್ಲ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್​ನ ಪಿವಿಆರ್​ ಮಲ್ಟಿಪ್ಲೆಕ್ಸ್​ನಲ್ಲಿ ಈ ಸಿನಿಮಾವನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಶಾಕ್​ ಆಗಿದೆ. ಅದಕ್ಕೆ ಕಾರಣ ಆಗಿದ್ದು ಮಳೆ ನೀರು. ಹೌದು, ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೇ ಛಾವಣಿಯಿಂದ ಮಳೆ ನೀರು ಸುರಿದಿದೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಸಿನಿಮಾ ಹಾಲ್​ ಒಳಗೆ ಮಳೆ ನೀರು ಬೀಳಲು ಆರಂಭಿಸಿದ ನಂತರವೂ ಪಿವಿಆರ್​ನವರು ‘ಕಲ್ಕಿ 2898 ಎಡಿ’ ಸಿನಿಮಾದ ಪ್ರದರ್ಶನವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಪ್ರೇಕ್ಷಕರಿಗೆ ಸಖತ್​ ಕಿರಿಕಿರಿ ಆಗಿದೆ. ಈ ಬಗ್ಗೆ ಮ್ಯಾನೇಜ್​ಮೆಂಟ್ ಬಳಿ ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಆಗ ಅವರಿಂದ ಉಡಾಫೆಯ ಉತ್ತರ ಬಂದಿದೆ. ಬೇಕಿದ್ದರೆ ಪೊಲೀಸರಿಗೆ ದೂರು ನೀಡಿ ಎಂದು ಪಿವಿಆರ್​ನವರು ಹೇಳಿದ್ದನ್ನು ಕೇಳಿ ಪ್ರೇಕ್ಷಕರು ಗರಂ ಆಗಿದ್ದಾರೆ.

ಇದನ್ನೂ ಓದಿ: ಅಶ್ಲೀಲತೆ, ರಕ್ತಪಾತ ಇಲ್ಲದೇ ಸಾವಿರ ಕೋಟಿ ರೂ. ಗಳಿಕೆ: ‘ಅನಿಮಲ್​’ ಚಿತ್ರಕ್ಕೆ ತಿವಿದ ‘ಕಲ್ಕಿ 2898 ಎಡಿ’ ನಿರ್ದೇಶಕ

ಏಕಪರದೆ ಚಿತ್ರಮಂದಿರಗಳಿಗೆ ಹೋಲಿಸಿದರೆ ಪಿವಿಆರ್​ ರೀತಿಯ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಟಿಕೆಟ್​ ದರ ದುಬಾರಿ ಆಗಿರುತ್ತದೆ. ಅಲ್ಲದೇ ತಿಂಡಿ-ತಿನಿಸು ಹಾಗೂ ಪಾನಿಯಗಳ ಬೆಲೆ ಕೂಡ ಹೆಚ್ಚಿರುತ್ತದೆ. ಪಾರ್ಕಿಂಗ್​ಗೂ ಅಧಿಕ ಹಣ ತೆರಬೇಕು. ಇಷ್ಟೆಲ್ಲ ಹಣ ನೀಡಿದ ನಂತರವೂ ಮಳೆ ನೀರು ಸೋರುವ ರೀತಿಯಲ್ಲಿ ಮಲ್ಟಿಪ್ಲೆಕ್ಸ್​ ಚಾವಣಿ ಇರುವುದು ಕಂಡು ಪ್ರೇಕ್ಷಕರಿಗೆ ಸಖತ್​ ಕೋಪ ಬಂದಿದೆ.

ಮಲ್ಟಿಪ್ಲೆಕ್ಸ್​ ಒಳಗೆ ನೂರಾರು ಬಗೆಯ ವಿದ್ಯುತ್​ ವೈರ್​ ಇರುತ್ತವೆ. ಅನೇಕ ಎಲೆಕ್ಟ್ರಾನಿಕ್​ ಉಪಕರಣಗಳು ಕಾರ್ಯನಿರ್ವಹಿಸುತ್ತ ಇರುತ್ತವೆ. ಇಂಥ ಸಂದರ್ಭದಲ್ಲಿ ಮಳೆ ನೀರು ಸೋರಿಕೆ ಆದರೆ ಶಾರ್ಟ್​ ಸರ್ಕ್ಯೂಟ್​ ಆಗುವ ಸಂಭವ ಹೆಚ್ಚಿರುತ್ತದೆ. ಆ ಕಾರಣದಿಂದ, ‘ಕಲ್ಕಿ 2898 ಎಡಿ’ ಸಿನಿಮಾ ಪ್ರದರ್ಶನದ ವೇಳೆ ಮಳೆ ನೀರು ಸುರಿದಾಗ ಪ್ರೇಕ್ಷಕರಿಗೆ ಆತಂಕ ಆಗಿದೆ. ಮಲ್ಟಿಪ್ಲೆಕ್ಸ್​ನವರ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.