ಅಶ್ಲೀಲತೆ, ರಕ್ತಪಾತ ಇಲ್ಲದೇ ಸಾವಿರ ಕೋಟಿ ರೂ. ಗಳಿಕೆ: ‘ಅನಿಮಲ್’ ಚಿತ್ರಕ್ಕೆ ತಿವಿದ ‘ಕಲ್ಕಿ 2898 ಎಡಿ’ ನಿರ್ದೇಶಕ
‘ಅನಿಮಲ್’ ಸಿನಿಮಾದಲ್ಲಿ ಅಶ್ಲೀಲತೆ, ರಕ್ತಪಾತ ಮುಂತಾದ ಅಂಶಗಳು ಇವೆ ಎಂದು ವಿಮರ್ಶಕರು ಟೀಕಿಸಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈಗ ‘ಕಲ್ಕಿ 2898 ಎಡಿ’ ಸಿನಿಮಾ ಯಾವುದೇ ಆಕ್ಷೇಪಾರ್ಹ ದೃಶ್ಯಗಳಿಲ್ಲದೇ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬುದು ವಿಶೇಷ.
ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾಗೆ ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಆಗಿದೆ. ಜಾಗತಿಕ ಮಟ್ಟದಲ್ಲಿ ಅಬ್ಬರಿಸಿದ ಈ ಸಿನಿಮಾ 1000 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಮಾಡಿದೆ. ಈ ಮಾಹಿತಿಯನ್ನು ಸ್ವತಃ ನಿರ್ಮಾಪಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರು ಹಂಚಿಕೊಂಡ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ‘ಅನಿಮಲ್’ ಚಿತ್ರಕ್ಕೆ ನಾಗ್ ಅಶ್ವಿನ್ ತಿವಿದಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ನಾಗ್ ಅಶ್ವಿನ್ ಪೋಸ್ಟ್ನಲ್ಲಿ ಇರುವುದು ಏನು ಎಂಬ ಬಗ್ಗೆ ಇಲ್ಲಿದೆ ವಿವರ..
ನಾಗ್ ಅಶ್ವಿನ್ ಅವರ 5 ವರ್ಷಗಳ ಪರಿಶ್ರಮದ ಫಲವಾಗಿ ‘ಕಲ್ಕಿ 2898 ಎಡಿ’ ಸೂಪರ್ ಹಿಟ್ ಆಗಿದೆ. ‘ವೈಜಯಂತಿ ಮೂವೀಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಗೆಲುವಿನ ಬಳಿಕ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಾಗ್ ಅಶ್ವಿನ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.
‘ಈ ಮೈಲಿಗಲ್ಲು ಮತ್ತು ಈ ಸಂಖ್ಯೆಯು ನಮ್ಮಂತಹ ತಂಡಕ್ಕೆ ನಿಜಕ್ಕೂ ದೊಡ್ಡದು. ಯಾವುದೇ ಅಶ್ಲೀಲತೆ, ರಕ್ತಪಾತ ಹಾಗೂ ಪ್ರಚೋದನಕಾರಿಯಾದ ದೃಶ್ಯಗಳು ಇಲ್ಲದೆಯೇ ಈ ಸಾಧನೆ ಮಾಡಿದ್ದೇವೆ ಎಂಬುದು ಗಮನಾರ್ಹ. ನಮ್ಮ ಬೆನ್ನ ಹಿಂದೆ ನಿಂತ ಪ್ರೇಕ್ಷಕರಿಗೆ ಮತ್ತು ಕಲಾವಿದರಿಗೆ ಧನ್ಯವಾದಗಳು’ ಎಂದು ನಾಗ್ ಅಶ್ವಿನ್ ಅವರು ಪೋಸ್ಟ್ ಮಾಡಿದ್ದರು. ಆದರೆ ನಂತರ ಅವರು ಈ ಪೋಸ್ಟ್ ಡಿಲೀಟ್ ಮಾಡಿದರು.
ಇದನ್ನೂ ಓದಿ: ನೀವಿಲ್ಲದೇ ನಾನು ಜೀರೋ: ‘ಕಲ್ಕಿ 2898 ಎಡಿ’ ಯಶಸ್ಸಿನ ಹಿಂದಿರುವ ವ್ಯಕ್ತಿಗಳಿಗೆ ಪ್ರಭಾಸ್ ಧನ್ಯವಾದ
ತೆಲುಗಿನ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಬಾಲಿವುಡ್ನಲ್ಲಿ ‘ಅನಿಮಲ್’ ಸಿನಿಮಾ ಮಾಡಿ ದೊಡ್ಡ ಯಶಸ್ಸು ಪಡೆದರು. ಆ ಚಿತ್ರದ ಕಲೆಕ್ಷನ್ ಕೂಡ 1000 ಕೋಟಿ ರೂಪಾಯಿ ಸನಿಹದಲ್ಲಿ ಇತ್ತು. ಆದರೆ ಆ ಸಿನಿಮಾದಲ್ಲಿ ಅಶ್ಲೀಲತೆ, ಅತಿಯಾದ ರಕ್ತಪಾತ, ಮಹಿಳೆಯರ ಅವಹೇಳನ ಹಾಗೂ ಪ್ರಚೋದನಕಾರಿ ದೃಶ್ಯಗಳು ಇದ್ದವು ಎಂಬ ಟೀಕೆ ವ್ಯಕ್ತವಾಗಿತ್ತು. ‘ಅನಿಮಲ್’ ಸಿನಿಮಾವನ್ನು ಉದ್ದೇಶಿಸಿಯೇ ನಾಗ್ ಅಶ್ವಿನ್ ಅವರು ಈ ಪೋಸ್ಟ್ ಮಾಡಿದ್ದರು ಎಂಬುದು ನೆಟ್ಟಿಗರ ಅಭಿಪ್ರಾಯ. ಸದ್ಯಕ್ಕೆ ಅವರ ಪೋಸ್ಟ್ ಡಿಲೀಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.