ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ‘ಶಾನುಭೋಗರ ಮಗಳು’; ರಾಗಿಣಿ ಪ್ರಜ್ವಲ್ ಮುಖ್ಯ ಪಾತ್ರ
ನಟಿ ರಾಗಿಣಿ ಪ್ರಜ್ವಲ್ ಅವರು ‘ಶಾನುಭೋಗರ ಮಗಳು’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಕಿಶೋರ್, ಪದ್ಮಾ ವಾಸಂತಿ, ರಮೇಶ್ ಭಟ್, ಶ್ರೀನಿವಾಸಮೂರ್ತಿ, ವಾಣಿಶ್ರೀ, ಸುಧಾ ಬೆಳವಾಡಿ, ನಿರಂಜನ್ ಶೆಟ್ಟಿ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಸದ್ಯದಲ್ಲೇ ತೆರೆಗೆ ಬರಲಿರುವ ಈ ಸಿನಿಮಾಗೆ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ.
ಮೊದಲೆಲ್ಲ ಕಾದಂಬರಿ ಆಧಾರಿತ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಅಂಥ ಪ್ರಯತ್ನ ಕಡಿಮೆ ಆಗಿದೆ. ಈಗ ಕನ್ನಡದಲ್ಲೊಂದು ಕಾದಂಬರಿ ಆಧಾರಿತ ಸಿನಿಮಾ ಮೂಡಿಬಂದಿದೆ. ‘ಶಾನುಭೋಗರ ಮಗಳು’ ಎಂಬುದು ಈ ಸಿನಿಮಾದ ಶೀರ್ಷಿಕೆ. ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರು ಬರೆದ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಇದರಲ್ಲಿ ನಟಿ ರಾಗಿಣಿ ಪ್ರಜ್ವಲ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸಿನಿಮಾತಂಡದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
ಇತ್ತೀಚೆಗೆ ‘ಶಾನುಭೋಗರ ಮಗಳು’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರು ‘ಯು/ಎ’ ಪ್ರಮಾಣ ಪತ್ರ ನೀಡಿದ್ದಾರೆ. ಅಲ್ಲದೇ, ಸಿನಿಮಾ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ರಾಗಿಣಿ ಪ್ರಜ್ವಲ್, ರಮೇಶ್ ಭಟ್, ನಿರಂಜನ್ ಶೆಟ್ಟಿ, ಶ್ರೀನಿವಾಸಮೂರ್ತಿ, ವಾಣಿಶ್ರೀ, ಸುಧಾ ಬೆಳವಾಡಿ, ಪದ್ಮಾ ವಾಸಂತಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
‘ಶಾನುಭೋಗರ ಮಗಳು’ ಸಿನಿಮಾದಲ್ಲಿ ಟಿಪ್ಪು ಸುಲ್ತಾನ್ ಪಾತ್ರವನ್ನು ಖ್ಯಾತ ನಟ ಕಿಶೋರ್ ಅವರು ನಿಭಾಯಿಸಿದ್ದಾರೆ ಎಂಬುದು ವಿಶೇಷ. ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ಶಾನುಭೋಗರ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು, ಚನ್ನಪಟ್ಟಣ, ಶ್ರೀರಂಗಪಟ್ಟಣ, ಚಿಕ್ಕಬಳ್ಳಾಪುರ ಮುಂತಾದೆಡೆ ಶೂಟಿಂಗ್ ಮಾಡಲಾಗಿದೆ.
ಇದನ್ನೂ ಓದಿ: ‘ಪರ್ವ’ ಕಾದಂಬರಿ ಆಧರಿಸಿ ವಿವೇಕ್ ಅಗ್ನಿಹೋತ್ರಿ ಸಿನಿಮಾ; ಟೈಟಲ್ ಲಾಂಚ್ ಮಾಡಿದ ಎಸ್.ಎಲ್. ಭೈರಪ್ಪ
ಸಿ.ಎಂ. ನಾರಾಯಣ್ ಅವರು ‘ಭುವನ್ ಫಿಲ್ಮ್ಸ್’ ಮೂಲಕ ‘ಶಾನುಭೋಗರ ಮಗಳು’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳು ಇವೆ ಎಂದು ಚಿತ್ರತಂಡ ಹೇಳಿದೆ. ಆ ಮೂಲಕ ಕುತೂಹಲ ಮೂಡಿಸಿದೆ. ಜೈ ಆನಂದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಬಿ.ಎಸ್. ಕೆಂಪರಾಜ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.
‘ಶಾನುಭೋಗರ ಮಗಳು’ ಸಿನಿಮಾಗೆ ಬಿ.ಎ. ಮಧು ಅವರು ಸಂಭಾಷಣೆ ಬರೆದಿದ್ದಾರೆ. ವಸಂತ ಕುಲಕರ್ಣಿ ಅವರ ಕಲಾ ನಿರ್ದೇಶನ, ಕರಣ್ ಮಯೂರ್ ಅವರ ನಿರ್ಮಾಣ ನಿರ್ವಹಣೆ, ರಮೇಶ್ ಕೃಷ್ಣನ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಎಸ್. ನಾಗರಾಜ್ ರಾವ್, ರಘು ಕಲ್ಪತರು ಅವರು ಸಹ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.