ಎಂ.ಡಿ. ಕೌಶಿಕ್ ನಿರ್ದೇಶನದಲ್ಲಿ ‘ಅಮ್ಮನ ಲಾಲಿ’; ಕಾದಂಬರಿ ಆಧಾರಿತ ಚಿತ್ರದಲ್ಲಿವೆ ವಿಶೇಷ ಹಾಡುಗಳು

‘ಅಮ್ಮನ ಲಾಲಿ’ ಚಿತ್ರಕ್ಕೆ ಕನ್ನಡಿಗರಾದ ಅಮೆರಿಕ ನಿವಾಸಿ ರವಿ ದತ್ತಾತ್ರೇಯ ಅವರು ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶನದ ಜೊತೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಎಂ.ಡಿ. ಕೌಶಿಕ್ ಅವರು ನಿಭಾಯಿಸುತ್ತಿದ್ದಾರೆ. ಹಿರಿಯ ನಟಿ ಭವ್ಯ ಅವರಿಗೆ ಈ ಸಿನಿಮಾದಲ್ಲಿ ಅಮ್ಮನ ಪಾತ್ರವಿದೆ. ಚಿತ್ರದ ಹಾಡುಗಳಲ್ಲಿ ಡಿವಿಜಿ, ಲಕ್ಷಿನಾರಾಯಣ ಭಟ್ಟ, ದೊಡ್ಡರಂಗೇಗೌಡ ಅವರ ಸಾಹಿತ್ಯ ಬಳಸಲಾಗಿದೆ.

ಎಂ.ಡಿ. ಕೌಶಿಕ್ ನಿರ್ದೇಶನದಲ್ಲಿ ‘ಅಮ್ಮನ ಲಾಲಿ’; ಕಾದಂಬರಿ ಆಧಾರಿತ ಚಿತ್ರದಲ್ಲಿವೆ ವಿಶೇಷ ಹಾಡುಗಳು
‘ಅಮ್ಮನ ಲಾಲಿ’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Mar 21, 2024 | 9:49 PM

ನಿರ್ದೇಶಕ ಎಂ.ಡಿ. ಕೌಶಿಕ್​ ಅವರು ‘ಅಮ್ಮನ ಲಾಲಿ’ (Ammana Lali) ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ (Sandalwood) ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿರುವ ಅವರು ಈ ಬಾರಿ ಸಾಹಿತ್ಯ ಕೃತಿಯನ್ನು ಆಧರಿಸಿ ಈ ಸಿನಿಮಾ ಮಾಡುತ್ತಿದ್ದಾರೆ. ಅಂದುಕೊಂಡ ಸಮಯದಲ್ಲಿ, ನಿಗದಿತ ಬಜೆಟ್​ನಲ್ಲಿ ಉತ್ತಮವಾದ ಸಿನಿಮಾಗಳನ್ನು ನೀಡುವ ಮೂಲಕ ಎಂ.ಡಿ. ಕೌಶಿಕ್​ (MD Kaushik) ಅವರು ಸ್ಯಾಂಡಲ್​ವುಡ್​ನಲ್ಲಿ ಹೆಸರು ಮಾಡಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಅಮ್ಮನ ಲಾಲಿ’ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ..

ಮೊದಲೇ ಹೇಳಿದಂತೆ ‘ಅಮ್ಮನ ಲಾಲಿ’ ಒಂದು ಕಾದಂಬರಿ ಆಧಾರಿತ ಸಿನಿಮಾ. ಗೀತಾ ಡಿ.ಎನ್. ಅವರು ಬರೆದ ಈ ಕಥೆಯಲ್ಲಿ ಇವತ್ತಿನ ಕಾಲಘಟ್ಟದ ವಿಷಯಗಳು ಇವೆ. ನಟನೂ ಆಗಿರುವ ಎಂ.ಡಿ. ಕೌಶಿಕ್​ ಅವರು ಈ ಸಿನಿಮಾದಲ್ಲಿ ನಟಿಸಿಲ್ಲ. ಕೇವಲ ತೆರೆಹಿಂದಿನ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣವೂ ಅವರದ್ದೇ. ‘ಎಮರಾಲ್ಡ್ ಕ್ರಿಯೇಶನ್ಸ್’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಅಮೆರಿಕ ನಿವಾಸಿ, ಆರ್ಥಿಕ ತಜ್ಞರೂ ಆಗಿರುವ ಕನ್ನಡಿಗ ರವಿ ದತ್ತಾತ್ರೇಯ ಅವರು ‘ಅಮ್ಮನ ಲಾಲಿ’ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದ ಲೇಖಕರ ಕವನಗಳ ಜೊತೆ ಕೆಲವು ಆಲ್ಬಂಗೆ ಸಂಗೀತ ಸಂಯೋಜಿಸಿದ ಅನುಭವ ಅವರಿಗೆ ಇದೆ. ಈಗ ಅವರು ‘ಅಮ್ಮನ ಲಾಲಿ’ ಸಿನಿಮಾದಲ್ಲಿ ಡಿವಿಜಿರವರ ‘ಮಂಕುತಿಮ್ಮನ ಕಗ್ಗ’ ಜೊತೆ ಲಕ್ಷಿನಾರಾಯಣ ಭಟ್ಟ ಮತ್ತು ದೊಡ್ಡರಂಗೇಗೌಡರ ಸಾಹಿತ್ಯವನ್ನು ಬಳಸಿದ್ದಾರೆ. ಈ ಗೀತೆಗಳಿಗೆ ಎಂ.ಡಿ. ಪಲ್ಲವಿ, ರಾಮ್​ ಪ್ರಸಾದ್ ಅವರು ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: ನನ್ನೊಬ್ಬನಿಂದ ಕನ್ನಡ ಚಿತ್ರರಂಗ ಅಲ್ಲ, ಹೊಸಬರಿಗೂ ಪ್ರೋತ್ಸಾಹ ಸಿಗಲಿ: ಯಶ್

‘ಇಂದಿನ ದಿನಗಳಲ್ಲಿ ಕೆಲವು ಮನೆಗಳಲ್ಲಿ ನಡೆಯುವ ಘಟನಾವಳಿಗಳು ಈ ಸಿನಿಮಾದಲ್ಲಿ ಇವೆ. ತಾಯಿ-ಮಗಳ ನಡುವೆ ನಡೆಯುವಂತಹ ಆರೋಗ್ಯಕರವಾದ ವಾಗ್ವಾದಗಳು ಮತ್ತು ಸಮಸ್ಯೆಗಳು ತಮ್ಮದೇ ರೀತಿಯಲ್ಲಿ ಅಂತ್ಯವನ್ನು ಕಾಣುತ್ತವೆ’ ಎಂದು ಚಿತ್ರತಂಡದವರು ಹೇಳಿದ್ದಾರೆ. ಆದರೆ ಸಿನಿಮಾದ ನಿರ್ದಿಷ್ಟ ಅಂಶ ಏನು ಎಂಬುದರ ಬಗ್ಗೆ ಏನನ್ನೂ ಬಾಯಿ ಬಿಡದೇ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ.

‘ಅಮ್ಮನ ಲಾಲಿ’ ಸಿನಿಮಾ ಪೋಸ್ಟರ್​, ಸಂಗೀತ ನಿರ್ದೇಶಕ ರವಿ ದತ್ತಾತ್ರೇಯ

ಸ್ಯಾಂಡಲ್​ವುಡ್​ನ ಹಿರಿಯ ಕಲಾವಿದೆ ಭವ್ಯ ಅವರು ಈ ಸಿನಿಮಾದಲ್ಲಿ ಅಮ್ಮನ ಪಾತ್ರ ಮಾಡಿದ್ದಾರೆ. ಯತಿರಾಜ್, ಶರತ್, ಪದ್ಮಾ, ರೂಪಾ, ನಂದಿನಿ, ಸೌಮ್ಯ, ಗೀತಾ ಮುಂತಾದವರು ಕೂಡ ‘ಅಮ್ಮನ ಲಾಲಿ’ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾದಲ್ಲಿ ಒಂದು ದೃಶ್ಯವು ಅಮೆರಿಕದಲ್ಲಿ ನಡೆಯುವುದರಿಂದ ಅಲ್ಲಿನ ಕಲಾವಿದರಾದ ರಮ್ಯಾ, ಗೌರವ್‌ ಅವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.