ಭಾರತೀಯ ಚಿತ್ರರಂಗದಲ್ಲಿ ನಟ ಪ್ರಭಾಸ್ (Prabhas) ಮತ್ತು ನಿರ್ದೇಶಕ ರಾಜಮೌಳಿ ಅವರು ಮಾಡಿದ ಮೋಡಿಯನ್ನು ಮರೆಯಲು ಸಾಧ್ಯವಿಲ್ಲ. ‘ಬಾಹುಬಲಿ’ (Baahubali Movie) ಸಿನಿಮಾ ಮೂಲಕ ಅವರು ವಿಶ್ವದ ಗಮನ ಸೆಳೆದರು. ಆಳವಾದ ಕಥೆ, ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ, ಕಲಾವಿದರ ಅತ್ಯುತ್ತಮ ನಟನೆ ಮತ್ತು ನಿರ್ದೇಶಕರ ಶ್ರಮದಿಂದಾಗಿ ‘ಬಾಹುಬಲಿ’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ್ದು ಈಗ ಇತಿಹಾಸ. ಎರಡು ಪಾರ್ಟ್ಗಳಲ್ಲಿ ಮೂಡಿಬಂದ ಆ ಸಿನಿಮಾದಿಂದಾಗಿ ನಟ ಪ್ರಭಾಸ್ ಅವರಿಗೆ ದೇಶದಾದ್ಯಂತ ಜನಪ್ರಿಯತೆ ಹೆಚ್ಚಿತು. ಪ್ಯಾನ್ ಇಂಡಿಯಾ ಹೀರೋ ಆಗಿ ಅವರು ಹೊರಹೊಮ್ಮಿದರು. ‘ಬಾಹುಬಲಿ’ಗೂ ಮುನ್ನ ‘ಛತ್ರಪತಿ’ ಸಿನಿಮಾದಲ್ಲಿ ರಾಜಮೌಳಿ (Rajamouli) ಮತ್ತು ಪ್ರಭಾಸ್ ಜೊತೆಯಾಗಿ ಕೆಲಸ ಮಾಡಿದ್ದರು. ‘ಬಾಹುಬಲಿ’ ಪಾರ್ಟ್ 1 ಮತ್ತು ಪಾರ್ಟ್ 2 ಸಲುವಾಗಿ ಅವರಿಬ್ಬರು ಅವರು ಹಲವು ವರ್ಷಗಳನ್ನು ಮೀಸಲಿಟ್ಟಿದ್ದರು. ಮತ್ತೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಹೊಸದೊಂದು ಸಿನಿಮಾ ಮೂಡಿಬಂದರೆ ಹೇಗಿರಲಿದೆ? ಅಭಿಮಾನಿಗಳಿಗೆ ಮನರಂಜನೆಯ ಮಹೋತ್ಸವ ಗ್ಯಾರಂಟಿ. ಆ ಬಗ್ಗೆ ಪ್ರಭಾಸ್ ಅವರು ಈಗ ಗುಡ್ ನ್ಯೂಸ್ ನೀಡಿದ್ದಾರೆ. ಅದನ್ನು ಕೇಳಿ ಫ್ಯಾನ್ಸ್ ಫುಲ್ ಖುಷಿ ಆಗಿದ್ದಾರೆ. ಆದಷ್ಟು ಬೇಗ ಈ ನಟ-ನಿರ್ದೇಶಕನ ಕಾಂಬಿನೇಷನ್ನಲ್ಲಿ ಇನ್ನೊಂದು ಸಿನಿಮಾ ಬರಲಿ ಎಂದು ಅಭಿಮಾನಿಗಳು ಕಾಯುವಂತಾಗಿದೆ.
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅವರು ‘ರಾಧೆ ಶ್ಯಾಮ್’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರದ ಪ್ರಚಾರಕ್ಕಾಗಿ ಅವರು ಊರೂರು ಸುತ್ತುತ್ತಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಸಿನಿಮಾದ ಪ್ರಚಾರಕಾರ್ಯ ಮಾಡಲಾಗುತ್ತಿದೆ. ಮುಂಬೈನ ಅಂಧೇರಿಯಲ್ಲಿ ಈ ಸಿನಿಮಾದ ಟ್ರೇಲರ್ ಲಾಂಚ್ ಮಾಡಲಾಯಿತು. ಈ ವೇಳೆ ಪ್ರಭಾಸ್ ಮತ್ತು ರಾಜಮೌಳಿ ಅವರ ಕಾಂಬಿನೇಷನ್ನ ನಾಲ್ಕನೇ ಸಿನಿಮಾದ ಸಾಧ್ಯತೆ ಬಗ್ಗೆ ಪ್ರಶ್ನೆ ಎದುರಾಯಿತು.
‘ರಾಜಮೌಳಿ ಮತ್ತು ನಾನು ಜೊತೆಯಾಗಿ ಮತ್ತೊಂದು ಸಿನಿಮಾ ಮಾಡಬೇಕು ಎಂಬ ಬಗ್ಗೆ ಈ ಹಿಂದೆ ಪ್ಲ್ಯಾನ್ ಮಾಡಿದ್ದು ನಿಜ. ಆದರೆ ರಾಧೆ ಶ್ಯಾಮ್ ಸಿನಿಮಾದ ಬಿಡುಗಡೆ ವಿಳಂಬ ಆಗಿದ್ದರಿಂದ ಆ ಯೋಜನೆಯನ್ನು ಸ್ವಲ್ಪ ಬದಿಗೆ ಇರಿಸಿದ್ದೇವೆ. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬಿಟ್ಟುಕೊಡುತ್ತೇವೆ’ ಅಂತ ಪ್ರಭಾಸ್ ಹೇಳಿದ್ದಾರೆ ಎಂದು ‘ಬಾಲಿವುಡ್ ಲೈಫ್’ ವರದಿ ಪ್ರಕಟಿಸಿದೆ. ಬಹುನಿರೀಕ್ಷಿತ ‘ರಾಧೆ ಶ್ಯಾಮ್’ ಸಿನಿಮಾ ಮಾ.11ರಂದು ಬಿಡುಗಡೆ ಆಗುತ್ತಿದೆ. ಸದ್ಯ ಈ ಚಿತ್ರದ ಟ್ರೇಲರ್ ಧೂಳೆಬ್ಬಿಸುತ್ತಿದೆ.
ಹೇಗಿದೆ ‘ರಾಧೆ ಶ್ಯಾಮ್’ ಟ್ರೇಲರ್?
ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿರುವ ‘ರಾಧೆ ಶ್ಯಾಮ್’ಗೆ ಹಲವು ಭಾಷೆಗಳ ದಿಗ್ಗಜರು ಸಾಥ್ ನೀಡಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ಕುಮಾರ್ ಅವರು ಕನ್ನಡ ಅವತರಣಿಕೆಯ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಅಮಿತಾಭ್ ಬಚ್ಚನ್ ಹಿಂದಿ ಅವತರಣಿಕೆಗೆ ಧ್ವನಿ ನೀಡಿದ್ದಾರೆ. ತೆಲುಗಿಗೆ ರಾಜಮೌಳಿ ಧ್ವನಿ ನೀಡಿದ್ದು, ಮಲಯಾಳಂನಲ್ಲಿ ಪೃಥ್ವಿರಾಜ್ ಅವರು ನಿರೂಪಿಸಿದ್ದಾರೆ. ಪ್ರಸ್ತುತ ರಿಲೀಸ್ ಆಗಿರುವ ಟ್ರೇಲರ್ ಕೊನೆಯಲ್ಲಿ ಆಯಾ ಭಾಷೆಯ ತಾರೆಯರ ಧ್ವನಿ ಇದೆ.
ಹತ್ತು ಹಲವು ವಿಚಾರಗಳನ್ನು ಟ್ರೇಲರ್ ಹೊತ್ತುತಂದಿದೆ. ಇದನ್ನು ನೋಡಿದ ಪ್ರಭಾಸ್ ಫ್ಯಾನ್ಸ್ ಮತ್ತಷ್ಟು ಎಕ್ಸೈಟ್ ಆಗಿದ್ದಾರೆ. ಟ್ರೇಲರ್ ಕೊನೆಯಲ್ಲಿ ಶಿವರಾಜ್ಕುಮಾರ್ ಧ್ವನಿ ಕೇಳಿಸಿದೆ. ‘ಪ್ರೀತಿ ಮತ್ತು ವಿಧಿ ನಡುವೆ ನಡೆಯುವ ಯುದ್ಧವೇ ರಾಧೆ ಶ್ಯಾಮ್’ ಎನ್ನುವ ಸಾಲುಗಳ ಮೂಲಕ ಚಿತ್ರ ಹೇಗಿರಬಹುದು ಎಂಬ ಕಲ್ಪನೆಯನ್ನು ಟ್ರೇಲರ್ನಲ್ಲಿ ಕಟ್ಟಿಕೊಡಲಾಗಿದೆ. ಹಸ್ತ ನೋಡಿ ಭವಿಷ್ಯ ತಿಳಿಯುವ ವ್ಯಕ್ತಿಯ ಪಾತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದಾರೆ. ಲವರ್ ಬಾಯ್ ಇಮೇಜ್ನಲ್ಲಿ ಅವರು ನಟಿಸಿದ್ದಾರೆ. 1970ರ ಕಾಲಘಟ್ಟದಲ್ಲಿ ಯುರೋಪ್ನಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು, ರಾಧಾಕೃಷ್ಣ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:
‘ಆರ್ಆರ್ಆರ್’ ನಿರ್ಮಾಪಕನ ಖಾತೆಯಿಂದ ಪ್ರಭಾಸ್ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?
‘ಅಲ್ಲು ಅರ್ಜುನ್, ರಾಜಮೌಳಿ ಕನ್ನಡಿಗರಾಗಿದ್ದರೆ ಮೋದಿ ಸ್ಯಾಂಡಲ್ವುಡ್ನ ಹೊಗಳುತ್ತಿದ್ದರು’; ಆರ್ಜಿವಿ ಟೀಕೆ