2026ಕ್ಕೆ ತೆರೆಗೆ ಬರಲಿದೆ ರಾಜಮೌಳಿ ಮುಂದಿನ ಸಿನಿಮಾ; ಮಾಹಿತಿ ಹಂಚಿಕೊಂಡ ಜ್ಯೂ.ಎನ್ಟಿಆರ್
ಮಹೇಶ್ ಬಾಬು ಹಾಗೂ ನಿಮ್ಮ ಕಾಂಬಿನೇಷನ್ ಸಿನಿಮಾದ ಕೆಲಸ ಆರಂಭವಾಗೋದು ಯಾವಾಗ ಎನ್ನುವ ಪ್ರಶ್ನೆಯನ್ನು ರಾಜಮೌಳಿಗೆ ಕೇಳಲಾಯಿತು. ಇದಕ್ಕೆ ಜ್ಯೂ.ಎನ್ಟಿಆರ್ ಉತ್ತರಿಸೋಕೆ ಮುಂದಾದರು.
ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿದರೂ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರುತ್ತದೆ. ಈ ಹಿಂದೆ ಅವರು ಅಂಥ ಅದ್ದೂರಿ ಸಿನಿಮಾಗಳನ್ನು ನೀಡಿದ್ದೇ ಇದಕ್ಕೆ ಕಾರಣ. ಇನ್ನು, ಅವರ ಸಿನಿಮಾ ಅನೌನ್ಸ್ ಆದ ದಿನದಿಂದಲೇ ಹೊಸ ಹೊಸ ಗಾಸಿಪ್ಗಳು ಕೂಡ ಕೇಳಿಬರಲು ಆರಂಭಿಸುತ್ತವೆ. ‘ಆರ್ಆರ್ಆರ್’ ಸಿನಿಮಾ ತೆರೆಗೆ ಬರೋಕೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗಲೇ ‘ಪ್ರಿನ್ಸ್’ ಮಹೇಶ್ ಬಾಬು ಜತೆ ಮಾಡಲಿರುವ ಚಿತ್ರದ ಬಗ್ಗೆಯೂ ಹಲವು ಗಾಸಿಪ್ಗಳು ಹುಟ್ಟಿಕೊಂಡಿವೆ. ಈ ವಿಚಾರದ ಬಗ್ಗೆ ಜ್ಯೂ.ಎನ್ಟಿಆರ್ ಮಾಹಿತಿ ನೀಡಿದ್ದಾರೆ.
ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ನಲ್ಲಿ ಸಿನಿಮಾ ಆಗುತ್ತಿರುವುದೇನೋ ನಿಜ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯಲು ಆರಂಭಿಸಿದ್ದಾರೆ ಎಂಬುದು ಬಿಟ್ಟರೆ ಸದ್ಯಕ್ಕಂತೂ ಬೇರೆ ಯಾವ ಕೆಲಸಗಳೂ ಶುರು ಆಗಿಲ್ಲ. ಪ್ರಸ್ತುತ ‘ಆರ್ಆರ್ಆರ್’ ಚಿತ್ರದ ಪ್ರಚಾರದ ಕೆಲಸಗಳಲ್ಲಿ ರಾಜಮೌಳಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಮಹೇಶ್ ಬಾಬು ಜೊತೆಗಿನ ಚಿತ್ರದ ಕಥೆಯ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ‘ಆರ್ಆರ್ಆರ್’ ಪ್ರೆಸ್ಮೀಟ್ನಲ್ಲಿ ಕೇಳಲಾದ ಪ್ರಶ್ನೆಗೆ ಜ್ಯೂ.ಎನ್ಟಿಆರ್ ಉತ್ತರಿಸಿದ್ದಾರೆ.
ಮಹೇಶ್ ಬಾಬು ಹಾಗೂ ನಿಮ್ಮ ಕಾಂಬಿನೇಷನ್ ಸಿನಿಮಾದ ಕೆಲಸ ಆರಂಭವಾಗೋದು ಯಾವಾಗ ಎನ್ನುವ ಪ್ರಶ್ನೆಯನ್ನು ರಾಜಮೌಳಿಗೆ ಕೇಳಲಾಯಿತು. ಇದಕ್ಕೆ ಜ್ಯೂ.ಎನ್ಟಿಆರ್ ಉತ್ತರಿಸೋಕೆ ಮುಂದಾದರು. ನನಗೆ ಈ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿದೆ ಎಂದು ಮೈಕ್ ತೆಗೆದುಕೊಂಡರು. ಅವರು ಮಾತು ಕೇಳಿ ಎಲ್ಲರೂ ನಕ್ಕರು. ಏಕೆಂದರೆ ಅವರು ಹೇಳಿದ್ದು ಕೇವಲ ಜೋಕ್ಗಾಗಿ ಮಾತ್ರ ಆಗಿತ್ತು.
‘ಈ ಚಿತ್ರಕ್ಕೆ ಸಂಬಂಧಿಸಿದ ಚರ್ಚೆಗಳು 2022ರಲ್ಲಿ ಪ್ರಾರಂಭವಾಗುತ್ತದೆ. ಚಿತ್ರೀಕರಣವು 2023 ರಲ್ಲಿ ಶುರುವಾಗಬಹುದು. ಬಹುಶಃ 2026ರಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದು ನಕ್ಕರು ಜ್ಯೂ.ಎನ್ಟಿಆರ್. ಈ ವೇಳೆ ಮೈಕ್ ಕಸಿದುಕೊಂಡ ರಾಮ್ ಚರಣ್, ‘ಸಾಂಕ್ರಾಮಿಕ ಇಲ್ಲದಿದ್ದರೆ ಈ ಚಿತ್ರ 2025ರಲ್ಲೇ ರಿಲೀಸ್ ಆಗುತ್ತದೆ’ ಎಂದರು. ಇದನ್ನು ಕೇಳಿ ಎಲ್ಲರೂ ಮತ್ತೊಮ್ಮೆ ನಕ್ಕರು.
ಇದನ್ನೂ ಓದಿ: ಮತ್ತೆ ಮುಂದೂಡಲ್ಪಡುತ್ತೆ ‘ಆರ್ಆರ್ಆರ್’ ರಿಲೀಸ್ ದಿನಾಂಕ? ರಾಜಮೌಳಿ ತಂಡಕ್ಕೆ ಮೊದಲ ಹಿನ್ನಡೆ
Published On - 10:03 pm, Mon, 27 December 21