
ನಿರ್ದೇಶಕ ರಾಜಮೌಳಿ (Rajamouli) ಅವರು ಸಿನಿಮಾ ಮಾಡುತ್ತಾರೆ ಎಂದರೆ ಅದರ ಬಜೆಟ್ ಸಾಮಾನ್ಯವಾಗಿ ಹೆಚ್ಚೇ ಇರುತ್ತದೆ. ಇದಕ್ಕೆ ಕಾರಣ ಕಲಾವಿದರಿಂದ ಅವರು ಪಡೆಯೋ ದೀರ್ಘ ಕಾಲ್ಶೀಟ್, ಅದ್ದೂರಿ ಸೆಟ್ ಹಾಗೂ ರಾಜಿ ಆಗದ ವಿಎಫ್ಎಕ್ಸ್. ಈ ಎಲ್ಲಾ ಕಾರಣದಿಂದ ಸಿನಿಮಾ ದುಬಾರಿ ಆಗುತ್ತದೆ. ಅದೇ ರೀತಿ ಕಲೆಕ್ಷನ್ ಕೂಡ ಜೋರೇ ಇರುತ್ತದೆ. ಈಗ ಮಹೇಶ್ ಬಾಬು ಜೊತೆಗಿನ ಸಿನಿಮಾಗಾಗಿ ಚಿತ್ರರಂಗದ ಇತಿಹಾಸದಲ್ಲೇ ದುಬಾರಿ ಸೆಟ್ ಒಂದನ್ನು ನಿರ್ಮಾಣ ಮಾಡಲು ರಾಜಮೌಳಿ ರೆಡಿ ಆಗಿದ್ದಾರೆ. ಈ ಸೆಟ್‌ನ ಬಜೆಟ್ ಬರೋಬ್ಬರಿ 50 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
ರಾಜಮೌಳಿ ಅವರ ಆಲೋಚನೆಗಳು ಯಾವ ರೀತಿ ಇರುತ್ತವೆ ಎಂಬುದು ಈಗಾಗಲೇ ಅನೇಕ ಬಾರಿ ಸಾಬೀತಾಗಿದೆ. ಈ ಮೊದಲು ‘ಬಾಹುಬಲಿ’ ಸರಣಿಗೆ ಅವರು ಹಾಕಿದ ಸೆಟ್ ಅದ್ದೂರಿಯಾಗಿತ್ತು. ರಾಮೋಜಿ ಫಿಲ್ಮ್ ಸಿಟಿಯಲ್ಲೇ ಇದನ್ನು ನಿರ್ಮಾಣ ಮಾಡಲಾಗಿತ್ತು. ವಿಶೇಷ ಎಂದರೆ ಈ ಸೆಟ್ಗಳನ್ನು ಅಲ್ಲಿಯವರು ನಾಶ ಮಾಡಿಲ್ಲ. ಬದಲಿಗೆ ಪ್ರೇಕ್ಷಣೀಯ ಸ್ಥಳವನ್ನಾಗಿ ಹಾಗೆಯೇ ಇಟ್ಟಿದ್ದಾರೆ. ಈಗ ಇದೇ ಸಿನಿಮಾ ನಗರಿಯಲ್ಲಿ ಮತ್ತೊಂದು ಅದ್ದೂರಿ ಸೆಟ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಈ ಸೆಟ್ಗಳು ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಲೇ ಎಗ್ಸೈಟ್ ಆಗಿದ್ದಾರೆ.
ವಾರಣಸಿಯಲ್ಲಿ ಸಿನಿಮಾದ ಶೂಟ್ ಮಾಡಬೇಕಿದೆ. ಆದರೆ, ಸ್ಟಾರ್ ಕಲಾವಿದರನ್ನು ಇಟ್ಟುಕೊಂಡು ಅಲ್ಲಿ ಚಿತ್ರೀಕರಣ ಮಾಡೋದು ನಿಜಕ್ಕೂ ಚಾಲೆಂಜ್. ಅಲ್ಲದೆ, ಕೆಲವೊಮ್ಮೆ ತಮಗೆ ಇಷ್ಟಬಂದಂತೆ ಟೇಕ್ನ ತೆಗೆದುಕೊಳ್ಳಲು ಸಾಧ್ಯವಾಗದೆಯೂ ಇರಬಹುದು. ಈ ಎಲ್ಲಾ ಕಾರಣದಿಂದ ರಾಜಮೌಳಿ ಅವರು ವಾರಣಸಿಯನ್ನು ಹೈದರಾಬಾದ್ನಲ್ಲೇ ಸೃಷ್ಟಿ ಮಾಡುತ್ತಿದ್ದಾರೆ.
ಶೂಟಿಂಗ್ನ ನೈಜ ಪ್ರದೇಶದಲ್ಲಿ ಮಾಡುವುದು ಒಂದು ದೊಡ್ಡ ಚಾಲೆಂಜ್ ಆಗಿ ಪರಿಣಮಿಸುತ್ತದೆ. ಜನರು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಜಮೌಳಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೊದಲು 10-20 ಕೋಟಿ ರೂಪಾಯಿಯಲ್ಲಿ ಸೆಟ್ ನಿರ್ಮಾಣ ಆದ ಬಗ್ಗೆ ನೀವು ಕೇಳಿರಬಹುದು. ಆದರೆ, ಇದೇ ಮೊದಲ ಬಾರಿಗೆ ಬರೋಬ್ಬರಿ 50 ಕೋಟಿ ರೂಪಾಯಿಯಲ್ಲಿ ಸೆಟ್ ನಿರ್ಮಾಣ ಆಗುತ್ತಿದೆ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ: 20 ಕೋಟಿ ರೂ. ಕೊಟ್ಟರೂ ಆ ಪಾತ್ರ ಮಾಡಲ್ಲ: ರಾಜಮೌಳಿಗೆ ನೋ ಎಂದ ನಾನಾ ಪಾಟೇಕರ್
ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ದೇವದಾಸ್’ ಸಿನಿಮಾದ ಸೆಟ್ಗಳು ಸಾಕಷ್ಟು ಗಮನ ಸೆಳೆದಿದ್ದವು. ಈ ಚಿತ್ರದ ಒಟ್ಟಾರೆ ಬಜೆಟ್ 50 ಕೋಟಿ ರೂಪಾಯಿ ಆಗಿತ್ತು. ಆದರೆ, ರಾಜಮೌಳಿ ಒಂದೇ ಸೆಟ್ಗೆ ಇಷ್ಟು ಖರ್ಚು ಮಾಡುತ್ತಿದ್ದಾರೆ. ಸಿನಿಮಾದ ಬಜೆಟ್ 1000 ಕೋಟಿ ರೂಪಾಯಿ ಎನ್ನಲಾಗಿದೆ. ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Thu, 19 June 25