‘ಕಲ್ಕಿ’ ಹಾದಿ ಹಿಡಿದ ರಾಜಮೌಳಿ, ಹೈದರಾಬಾದ್ನಲ್ಲೇ ವಾರಣಾಸಿ ಸೃಷ್ಟಿಸಿದ ನಿರ್ದೇಶಕ
SS Rajamouli: ಎಸ್ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಸಿನಿಮಾ ಹಾಲಿವುಡ್ ಲೆವೆಲ್ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಇದೊಂದು ಸಾಹಸಮಯ ಪ್ರಯಾಣದ ಕತೆಯನ್ನು ಒಳಗೊಂಡಿದ್ದು, ಭಾರತ ಸೇರಿದಂತೆ ವಿಶ್ವದ ಹಲವು ನಗರಗಳಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. ಇದೀಗ ರಾಜಮೌಳಿ, ಹೈದರಾಬಾದ್ನಲ್ಲಿ ಬೀಡು ಬಿಟ್ಟಿದ್ದು, ವಾರಣಾಸಿಯನ್ನೇ ಹೈದರಾಬಾದ್ನಲ್ಲಿ ಸೃಷ್ಟಿಸಿದ್ದಾರೆ.

ವಾರಣಾಸಿ ಭೂಮಿಯ ಮೇಲೆ ಸೃಷ್ಟಿಯಾದ ಮೊದಲ ನಗರ, ಎಂದೂ ಅಳಿಯದ ಎನ್ನುತ್ತದೆ ಪುರಾಣ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ವಾರಣಾಸಿ (Varanasi) ನಗರದ ಬಗ್ಗೆ ಸಾಕಷ್ಟು ವಿಷಯವನ್ನು ಹೇಳಲಾಗಿತ್ತು. ಆ ಸಿನಿಮಾದ ಕತೆ ನಡೆಯುವುದೇ ವಾರಣಾಸಿ ನಗರದಲ್ಲಿ. ಇದೀಗ ರಾಜಮೌಳಿ ಸಹ ವಾರಣಾಸಿ ನಗರದ ಪುರಾಣ ಐತಿಹ್ಯಕ್ಕೆ ಮನಸೋತಂತಿದೆ. ತಾವು ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣವನ್ನು ಅವರು ವಾರಣಾಸಿಯಲ್ಲಿ ಮಾಡಲಿದ್ದಾರೆ. ಹಾಗೆಂದು ರಾಜಮೌಳಿ ವಾರಣಾಸಿ ನಗರಕ್ಕೆ ಹೋಗುತ್ತಿಲ್ಲ ಬದಲಿಗೆ ಹೈದರಾಬಾದ್ನಲ್ಲೇ ವಾರಣಾಸಿಯನ್ನು ಸೃಷ್ಟಿಸುತ್ತಿದ್ದಾರೆ!
ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಮೂರನೇ ಶೆಡ್ಯೂಲ್ ಹೈದರಾಬಾದ್ನಲ್ಲಿ ಪ್ರಾರಂಭವಾಗಿದೆ. ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಫಿಲಂ ಸಿಟಿಯಲ್ಲಿ ಬಲು ಅದ್ಧೂರಿಯಾಗಿ ವಾರಣಾಸಿ ನಗರದ ಸೆಟ್ ಅನ್ನು ನಿರ್ಮಾಣ ಮಾಡಲಾಗುತ್ತಿದೆಯಂತೆ. ರಾಜಮೌಳಿ ನಿರ್ದೇಶಿಸುತ್ತಿರುವ ಕತೆ ಸಾಹಸಮಯ ಪ್ರಯಾಣದ ಕತೆ ಹೊಂದಿದ್ದು, ಸಿನಿಮಾನಲ್ಲಿ ಪೌರಾಣಿಕ ಕತೆಯನ್ನು ಆಧರಿಸಿ ಕುತೂಹಲಕಾರಿ ತಿರುವುಗಳು ಇರಲಿವೆ.
ಇದೇ ಕಾರಣಕ್ಕೆ ರಾಜಮೌಳಿಯ ಸಿನಿಮಾ ಪೌರಾಣಿಕ ಮಹತ್ವ ಹೊಂದಿದ ಭಾರತದ ನಗರಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಮಾತ್ರವಲ್ಲದೆ ವಿದೇಶದಲ್ಲಿಯೂ ಸಾಕಷ್ಟು ಚಿತ್ರೀಕರಣ ನಡೆಯಲಿದೆ. ಈಗಾಗಲೇ ಒರಿಸ್ಸಾ, ಅಸ್ಸಾಂ ಇನ್ನೂ ಕೆಲವೆಡೆ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಈಗ ಫಿಲಂ ಸಿಟಿಯಲ್ಲಿ ವಾರಣಾಸಿಯ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಮುಂದಿನ ಶೆಡ್ಯೂಲ್ನಲ್ಲಿ ಚಿತ್ರತಂಡ ಕೀನ್ಯಾಕ್ಕೆ ತೆರಳಲಿದ್ದು, ಕೀನ್ಯಾನಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆಯಂತೆ.
ಇದನ್ನೂ ಓದಿ:ಕಡಿಮೆ ಬಜೆಟ್ ಸಿನಿಮಾ ನೋಡಿ ಮನಸಾರೆ ಕೊಂಡಾಡಿದ ರಾಜಮೌಳಿ
ಕೀನ್ಯಾದ ಬಯಲು ಪ್ರದೇಶದಲ್ಲಿ ಅದ್ಧೂರಿ ಚೇಸ್ ಸೀಕ್ವೆನ್ಸ್ ಚಿತ್ರೀಕರಣ ಮಾಡಲಾಗುತ್ತದೆಯಂತೆ. ಅದಾದ ಬಳಿಕ ಚಿತ್ರತಂಡ ಅಮೆಜಾನ್ ಕಾಡುಗಳಿಗೆ ತೆರಳಲಿದ್ದು, ಅಲ್ಲಿ ಕುತೂಹಲಕಾರಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಿದೆ. ಈ ಸಿನಿಮಾ, ಭಾರತದ ಈ ವರೆಗಿನ ಬಲು ದುಬಾರಿ ಸಿನಿಮಾ ಆಗಿರಲಿದ್ದು, ಸಿನಿಮಾಕ್ಕಾಗಿ ಸುಮಾರು 700 ಕೋಟಿ ಬಜೆಟ್ ಹಾಕಲಾಗುತ್ತಿದೆ. ಸಿನಿಮಾನಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ, ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸುತ್ತಿದ್ದಾರೆ.
‘ಇಂಡಿಯಾನಾ ಜೋನ್ಸ್’ ಹಾಲಿವುಡ್ ಸಿನಿಮಾದಿಂದ ಸ್ಪೂರ್ತಿ ಪಡೆದು ಈ ಸಿನಿಮಾವನ್ನು ರಾಜಮೌಳಿ ಮಾಡುತ್ತಿದ್ದಾರೆ. ‘ಇಂಡಿಯಾನಾ ಜೋನ್ಸ್’ ಒಂದು ಸಾಹಸಮಯ ಯಾತ್ರೆಯ ಕತೆ ಒಳಗೊಂಡಿತ್ತು. ಈ ಸಿನಿಮಾಕ್ಕಾಗಿ ರಾಜಮೌಳಿ ಹಲವು ಹಾಲಿವುಡ್ ಸ್ಟುಡಿಯೋಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದು, ಅದ್ಧೂರಿ ವಿಎಫ್ಎಕ್ಸ್, ಸೌಂಡ್ ಡಿಸೈನ್ ಇನ್ನೂ ಕೆಲವು ನವೀನ ತಂತ್ರಜ್ಞಾನಗಳನ್ನು ಸಿನಿಮಾಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




