ಜೈಲು ಯೂನಿಫಾರ್ಮ್ನಲ್ಲಿ ನಟ ದರ್ಶನ್, ಏಕಿದು ಹೊಸ ವೇಷ?
Darshan Thoogudeepa: ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಆದರೆ ವಿಚಾರಣಾಧೀನ ಖೈದಿ ಆಗಿದ್ದ ನಟ ದರ್ಶನ್ ಜೈಲುಡುಗೆ ಧರಿಸಿರಲಿಲ್ಲ. ಅಪರಾಧಿಗಳಿಗೆ ಮಾತ್ರವೇ ಜೈಲುಡುಗೆ ನೀಡಲಾಗುತ್ತದೆ. ಇದೀಗ ದರ್ಶನ್ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿತ್ರದಲ್ಲಿ ದರ್ಶನ್ ಜೈಲುಡುಗೆ ಧರಿಸಿದ್ದಾರೆ.

ನಟ ದರ್ಶನ್ (Darshan) ಪಾಲಿಗೆ ಕಳೆದೊಂದು ವರ್ಷ ಅತ್ಯಂತ ಸಂಕಷ್ಟಮಯವಾಗಿತ್ತು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬೆನ್ನೇರಿ, ಜೈಲು ಪಾಲಾಗಬೇಕಾಯ್ತು. ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಅಲ್ಲಿಯೂ ಸಹ ವಿವಾದಕ್ಕೆ ಕಾರಣವಾದರು. ಆ ಬಳಿಕ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡರು. ಅಲ್ಲಿ ತೀವ್ರ ಕಠಿಣವಾದ ಶಿಸ್ತಿನಡಿ ಅವರು ದಿನ ದೂಡಬೇಕಾಯ್ತು, ಕ್ರಮೇಣ ಬೆನ್ನು ನೋವಿಗೆ ಹೆಚ್ಚಾಗಿ ಅದೇ ಕಾರಣವನ್ನು ನ್ಯಾಯಾಲಯದ ಮುಂದಿಟ್ಟು ಜಾಮೀನು ಸಹ ಪಡೆದುಕೊಂಡರು.
ದರ್ಶನ್ ವಿಚಾರಣಾಧೀನ ಖೈದಿ ಆಗಿದ್ದರಿಂದ ಅವರು ಜೈಲಿನ ಸಮವಸ್ತ್ರ ಧರಿಸಿರಲಿಲ್ಲ. ಆದರೆ ಇದೀಗ ದರ್ಶನ್ ಅವರು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರ್ಶನ್ ಜೈಲುಡುಗೆ ತೊಟ್ಟು ಫೋಟೊಕ್ಕೆ ಫೋಸು ನೀಡಿದ್ದಾರೆ. ನಿಜ ಜೀವನದಲ್ಲಿ ಜೈಲು ವಾಸ ಅನುಭವಿಸಿದರೂ ಜೈಲುಡುಗೆ ತೊಟ್ಟಿರಲಿಲ್ಲ. ಆದರೆ ಸಿನಿಮಾಕ್ಕಾಗಿ ಈಗ ಮತ್ತೊಮ್ಮೆ ದರ್ಶನ್ ಜೈಲುಡುಗೆ ಧರಿಸಿದ್ದಾರೆ.
ದರ್ಶನ್ ನಟಿಸುತ್ತಿರುವ ‘ಡೆವಿಲ್’ ಸಿನಿಮಾದ ದೃಶ್ಯವೊಂದಕ್ಕಾಗಿ ದರ್ಶನ್ ಜೈಲುಡುಗೆ ಧರಿಸಿದ್ದಾರೆ. ಕೇವಲ ಜೈಲುಡುಗೆ ಧರಿಸಿರುವುದು ಮಾತ್ರವೇ ಅಲ್ಲ. ದರ್ಶನ್, ಅವರ ಮೆಚ್ಚಿನ ನಟ, ತಂದೆ ಸಮಾನರಾದ ಅಂಬರೀಶ್ ಅವರ ಸಿನಿಮಾದ ಲುಕ್ ಅನ್ನು ಮಾಡಿಕೊಂಡಿದ್ದಾರೆ. ಅಂಬರೀಶ್ ಅವರ ಬ್ಲಾಕ್ ಬಸ್ಟರ್ ಸಿನಿಮಾ ‘ಅಂತ’ ಸಿನಿಮಾದ ಲುಕ್ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ‘ಡೆವಿಲ್’ ಸಿನಿಮಾದ ಕಾಮಿಡಿ ಸೀನ್ಗೆ ಅಥವಾ ಹಾಡಿನ ದೃಶ್ಯಕ್ಕಾಗಿ ಹೀಗೆ ಅಂಬರೀಶ್ ಅವರ ‘ಅಂತ’ ಸಿನಿಮಾದ ವೇಷ ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಕೇರಳದ ಮತ್ತೊಂದು ದೇವಸ್ಥಾನಕ್ಕೆ ದರ್ಶನ್ ಭೇಟಿ, ಏನಿದರ ವಿಶೇಷತೆ?
ಅಂದಹಾಗೆ ನಟ ದರ್ಶನ್, ಈ ಹಿಂದೆ ಕೆಲವಾರು ಸಿನಿಮಾಗಳಲ್ಲಿ ಜೈಲು ಖೈದಿಯ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆ ನಟಿಸಿದಾಗೆಲ್ಲ ಅವರ ಜೈಲುಡುಗೆ ಮೇಲೆ 171 ಸಂಖ್ಯೆ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ ಈಗ ವೈರಲ್ ಆಗಿರುವ ಜೈಲುಡುಗೆ ಮೇಲೆ ಯಾವುದೇ ಸಂಖ್ಯೆ ಇಲ್ಲ. ಈಗಾಗಲೇ ದರ್ಶನ್ ಅವರ ‘ಅಂತ’ ಲುಕ್ನ ಪೋಸ್ಟರ್ ಸಹ ಬಿಡುಗಡೆ ಆಗಿದೆ.
‘ಡೆವಿಲ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಮುಗಿದ ಕಾರಣಕ್ಕೆ ಇಂದು (ಜೂನ್ 18) ದರ್ಶನ್, ಕೇರಳದ ಕೊಟ್ಟೆಯೂರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




