ಕೇವಲ 25 ಲಕ್ಷ ರೂ. ಗಳಿಸಿದ ‘ಥಗ್ ಲೈಫ್; ಕರ್ನಾಟಕದಲ್ಲಿ ಚಿತ್ರ ರಿಲೀಸ್ ಆದರೆ ಮತ್ತಷ್ಟು ನಷ್ಟ
ಕಮಲ್ ಹಾಸನ್ ಅವರು ತಮ್ಮ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಹಠ ಹಿಡಿದಿದ್ದಾರೆ. ಸುಪ್ರೀಂ ಕೋರ್ಟ್ ಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಆದರೆ, ಕಳಪೆ ಬಾಕ್ಸ್ ಆಫೀಸ್ ಗಳಿಕೆಯಿಂದಾಗಿ ವಿತರಕರು ಮುಂದೆ ಬರುವುದು ಅನುಮಾನ. ವೆಂಕಟೇಶ್ ಚಿತ್ರದ ವಿತರಣೆಯಿಂದ ಹಿಂದೆ ಸರಿದಿದ್ದಾರೆ.

‘ಥಗ್ ಲೈಫ್’ (Thug Life Movie) ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲೇಬೇಕು ಎಂಬ ಹಠವನ್ನು ಕಮಲ್ ಹಾಸನ್ ಹೊತ್ತಿದ್ದಾರೆ. ಈ ಕಾರಣದಿಂದಲೇ ಸಿನಿಮಾ ರಿಲೀಸ್ ಮಾಡಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಈಗ ಸುಪ್ರೀಂಕೋರ್ಟ್ನಿಂದ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ, ಹಂಚಿಕೆ ಮಾಡಲು ಯಾರೊಬ್ಬರೂ ಮುಂದಾಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಆಗಿದ್ದು ಸಿನಿಮಾ ಪರ್ಫಾರ್ಮೆನ್ಸ್.
‘ಥಗ್ ಲೈಫ್’ ಸಿನಿಮಾದ ಗಳಿಕೆ ಹೀನಾಯ ಸ್ಥಿತಿಯಲ್ಲಿದೆ. ಈ ಚಿತ್ರ ಮಂಗಳವಾರ (ಜೂನ್ 17) ಕೇವಲ 25 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾದ ಒಟ್ಟೂ ಗಳಿಕೆ ಇನ್ನೂ 47 ಕೋಟಿ ರೂಪಾಯಿಯಲ್ಲಿದೆ. ಈ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆದರೂ ಜನರು ಚಿತ್ರವನ್ನು ಇಷ್ಟಪಡೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಹೀಗಾಗಿ, ತಂಡಕ್ಕೆ ಮತ್ತೊಂದಷ್ಟು ನಷ್ಟವೇ ಉಂಟಾಗಲಿದೆ.
ಈ ಮೊದಲು ‘ಥಗ್ ಲೈಫ್’ ಚಿತ್ರವನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿದ್ದ ವೆಂಕಟೇಶ್ ಅವರು ತಾವು ಸಿನಿಮಾನ ಹಂಚಿಕೆ ಮಾಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅವರು ದೊಡ್ಡ ಮೊತ್ತಕ್ಕೆ ಸಿನಿಮಾನ ಖರೀದಿ ಮಾಡಿದ್ದರು. ಈಗ ಸಿನಿಮಾ ವಿಳಂಬ ಆಗಿ ರಿಲೀಸ್ ಆಗುತ್ತಿರುವುದರಿಂದ ಬಿಡಿಗಾಸು ಬರುವುದಿಲ್ಲ ಅನ್ನೋದು ಅವರಿಗೆ ಸ್ಪಷ್ಟವಾಗಿದೆ.
ಇನ್ನು, ಬೇರೆ ಯಾರಾದರೂ ಹಂಚಿಕೆದಾರರು ‘ಥಗ್ ಲೈಫ್’ ಚಿತ್ರವನ್ನು ಹಂಚಿಕೆ ಮಾಡಲು ಮುಂದೆ ಬರೋದು ಅನುಮಾನ ಎಂದು ಹೇಳಲಾಗುತ್ತಿದೆ. ಇನ್ನು, ಕಮಲ್ ಹಾಸನ್ಗೆ ಇದು ಪ್ರತಿಷ್ಠೆಯ ವಿಷಯ ಆಗಿರುವುದರಿಂದ ಅವರೇ ಹಣ ನೀಡಿ ಯಾರನ್ನಾದರೂ ಸಿನಿಮಾ ಹಂಚಿಕೆ ಮಾಡಲು ಮುಂದಕ್ಕೆ ತರಬಹುದು. ಆದರೆ, ಥಿಯೇಟರ್ ಬಾಡಿಗೆ ಸೇರಿದಂತೆ ಅನೇಕ ಖರ್ಚಿರುತ್ತದೆ. ಸಿನಿಮಾ ಕಳಪೆ ವಿಮರ್ಶೆ ಪಡೆದಿರುವದರಿಂದ ಕಲೆಕ್ಷನ್ ಆಗೋದು ಕೂಡ ಅನುಮಾನದಲ್ಲೇ ಇದೆ. ಹೀಗಾಗಿ, ಸಿನಿಮಾ ರಿಲೀಸ್ ಮಾಡಿದರೂ ಇನ್ನೊಂದಿಷ್ಟು ನಷ್ಟವನ್ನೇ ಅನುಭವಿಸಬೇಕಾಗುತ್ತದೆ.
ಇದನ್ನೂ ಓದಿ: ‘ಥಗ್ ಲೈಫ್’ ರಿಲೀಸ್ಗೆ ಸುಪ್ರೀಂ ಅನುಮತಿ; ಆದರೂ ಕರ್ನಾಟಕದಲ್ಲಿ ಬರಲ್ಲ ಕಮಲ್ ಚಿತ್ರ
‘ಥಗ್ ಲೈಫ್’ ಚಿತ್ರದಲ್ಲಿ ಕಮಲ್ ಹಾಸನ್, ತ್ರಿಷಾ, ಅಭಿರಾಮಿ, ಸಿಂಬು ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದು, ಕಮಲ್ ಹಾಸನ್ ಅವರ ನಿರ್ಮಾಣ ಇದೆ. ಈ ಚಿತ್ರದಿಂದ ಅವರಿಗೆ ದೊಡ್ಡ ನಷ್ಟ ಉಂಟಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








