‘ಥಗ್ ಲೈಫ್’ ರಿಲೀಸ್ಗೆ ಸುಪ್ರೀಂ ಅನುಮತಿ; ಆದರೂ ಕರ್ನಾಟಕದಲ್ಲಿ ಬರಲ್ಲ ಕಮಲ್ ಚಿತ್ರ
ಸುಪ್ರೀಂ ಕೋರ್ಟ್ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದೆ. ಆದಾಗ್ಯೂ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಅನುಮಾನದಲ್ಲಿದೆ. ವಿತರಕ ವೆಂಕಟೇಶ್ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರಾಕರಿಸಿದ್ದಾರೆ. ಫಿಲ್ಮ್ ಚೇಂಬರ್ ಕೋರ್ಟ್ ಆದೇಶ ಪಾಲಿಸುವುದಾಗಿ ಹೇಳಿದೆ ಆದರೆ ವಿತರಕರ ನಿರ್ಧಾರವೇ ಅಂತಿಮ ಎಂದು ಹೇಳಿದೆ.

ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ (Thug Life Movie) ರಿಲೀಸ್ ವಿಚಾರ ಕೋರ್ಟ್ನಲ್ಲಿ ಇತ್ತು. ಈಗ ಈ ಪ್ರಕರಣ ಒಂದು ಹಂತಕ್ಕೆ ಇತ್ಯರ್ಥ ಆಗಿದೆ. ‘ಥಗ್ ಲೈಫ್’ ಸಿನಿಮಾ ರಿಲೀಸ್ಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ. ಆದಾಗ್ಯೂ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗೋದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಆಗಿರೋದು ಹಂಚಿಕೆದಾರ ವೆಂಕಟೇಶ್ ನಿರ್ಧಾರ. ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನಂತೂ ಸಿನಿಮಾ ರಿಲೀಸ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಅನುಮಾನ ಎನ್ನಲಾಗುತ್ತಿದೆ.
ಸುಪ್ರೀಂ ಆದೇಶ
‘ಥಗ್ ಲೈಫ್’ ಸಿನಿಮಾ ತಂಡದ ಪರವಾಗಿ ಸುಪ್ರೀಂಕೋರ್ಟ್ ಆದೇಶ ಪ್ರಕಟಿಸಿದೆ. ‘ಯಾವ ಸಿನಿಮಾ ಪ್ರದರ್ಶಿಸಬೇಕು, ಯಾವುದನ್ನು ಪ್ರದರ್ಶಿಸಬಾರದು ಎಂಬುದನ್ನು ಗೂಂಡಾಗಳ ಗುಂಪು ನಿರ್ಧರಿಸಬಾರದು’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ, ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದ ಚಿತ್ರಗಳನ್ನು ತಡೆಯುವ ಯಾವ ಹಕ್ಕೂ ಇಲ್ಲ ಎಂದು ಕೋರ್ಟ್ ಹೇಳಿದೆ.
ಹಂಚಿಕೆದಾರ ಹೇಳೋದೇನು?
‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡಲು ವೆಂಕಟೇಶ್ ಎಂಬುವವರು ಮುಂದೆ ಬಂದಿದ್ದರು. ಅವರು ಬರೋಬ್ಬರಿ 8 ಕೋಟಿ ರೂಪಾಯಿಗೆ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದರು. ಆದರೆ, ಈಗಾಗಲೇ ಸಿನಿಮಾ ರಿಲೀಸ್ ವಿಳಂಬ ಆಗಿದೆ. ಸಿನಿಮಾ ಕೂಡ ಚೆನ್ನಾಗಿಲ್ಲ ಎನ್ನುವ ವಿಮರ್ಶೆ ಸಿಕ್ಕಿದೆ. ಹೀಗಾಗಿ, ಈ ಸಂದರ್ಭದಲ್ಲಿ ಅವರು ಸಿನಿಮಾನ ರಾಜ್ಯದಲ್ಲಿ ರಿಲೀಸ್ ಮಾಡಿದರೆ ಕೈ ಸುಟ್ಟುಕೊಳ್ಳೋದು ಪಕ್ಕಾ. ಹೀಗಾಗಿ, ಈ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ‘ನಾನು ಈಗ ಸಿನಿಮಾ ರಿಲೀಸ್ ಮಾಡುವುದಿಲ್ಲ. ಈಗಾಗಲೇ ಅಡ್ವಾನ್ಸ್ ಕೊಟ್ಟು ಸಿನಿಮಾ ಖರೀದಿ ಮಾಡಿದ್ದೆ. ಆ ಹಣ ಇನ್ನೂ ನನಗೆ ವಾಪಾಸ್ ಬಂದಿಲ್ಲ. ಅದರ ಓಡಾಟದಲ್ಲಿ ಇದ್ದೇನೆ’ ಎಂದು ಹೇಳಿದ್ದಾರೆ. ಈ ಮೂಲಕ ಅವರು ಸಿನಿಮಾನ ಹಂಚಿಕೆ ಮಾಡಲ್ಲ ಎಂಬುದು ಸ್ಪಷ್ಟವಾಗಿದೆ.
ಫಿಲ್ಮ್ ಚೇಂಬರ್ ಸ್ಪಷ್ಟನೆ
ಕೋರ್ಟ್ ಆದೇಶಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಪ್ರತಿಕ್ರಿಯಿಸಿದ್ದಾರೆ. ‘ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಏನು ಆದೇಶ ಮಾಡುತ್ತದೆಯೋ ಅದಕ್ಕೆ ನಾವು ತಲೆಬಾಗುತ್ತೇವೆ. ಥಗ್ ಲೈಫ್ ರಿಲೀಸ್ ಮಾಡುವುದಿಲ್ಲ ಎಂದು ನಾವು ಎಂದಿಗೂ ಹೇಳಿಲ್ಲ. ನಾವು ರಿಲೀಸ್ ಮಾಡೋಕೆ ರೆಡಿ ಇಲ್ಲ ಎಂದು ಕಮಲ್ ಹಾಸನ್ ಅವರೇ ಹೇಳಿರೋದು. ಕನ್ನಡಪರ ಸಂಘಟನೆಗಳು, ಸರ್ಕಾರದ ಪರ ನಾವಿರುತ್ತೇವೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:
‘ವಿತರಕರೇ ಇಲ್ಲಿ ರಿಲೀಸ್ ಮಾಡೋಕೆ ಸಿದ್ಧರಿಲ್ಲ. ರಿಲೀಸ್ ಮಾಡಿ ದುಡ್ಡು ಕಳೆದುಕೊಳ್ಳಲು ಯಾರಿಗೂ ಇಷ್ಟ ಇಲ್ಲ. ಹೀಗಾಗಿ, ಯಾವ ವಿತರಕರು ಮುಂದೆ ಬರುವುದಿಲ್ಲ. ಮುಂದೆ ಬಂದರೆ ಆಗ ನಾವು ಚರ್ಚೆ ಮಾಡಿತ್ತೇವೆ. ಆ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ’ ಎಂದು ನರಸಿಂಹಲು ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








