ಯಾರ ಬಳಿಯೂ ಆಟೋಗ್ರಾಫ್ ಕೇಳದ ರಜನಿಕಾಂತ್ ಪಡೆದಿದ್ದು ಕನ್ನಡ ಈ ನಟನ ಸಹಿ ಮಾತ್ರ

ವರನಟ ಡಾ. ರಾಜ್‌ಕುಮಾರ್ ಅವರ ಸರಳತೆ ಹಾಗೂ ಅಭಿನಯವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಒಬ್ಬ ರಾಜ್‌ಕುಮಾರ್ ಹತ್ತು ಎಂಜಿಆರ್‌ಗೆ ಸಮ ಎಂದು ಹೇಳಿರುವ ರಜನಿ, ತಮ್ಮ ಇಡೀ ಜೀವಮಾನದಲ್ಲಿ ಪಡೆದ ಏಕೈಕ ಆಟೋಗ್ರಾಫ್ ಅಣ್ಣಾವ್ರದ್ದು ಮಾತ್ರ ಎಂದು ನೆನಪಿಸಿಕೊಂಡಿದ್ದಾರೆ. ಜೊತೆಗೆ ರಾಜ್‌ಕುಮಾರ್ ಅವರ ಹಿಟ್ ಸಿನಿಮಾಗಳನ್ನು ತಮಿಳಿಗೆ ರಿಮೇಕ್ ಮಾಡಿ ಯಶಸ್ಸು ಕಂಡಿದ್ದಾರೆ.

ಯಾರ ಬಳಿಯೂ ಆಟೋಗ್ರಾಫ್ ಕೇಳದ ರಜನಿಕಾಂತ್ ಪಡೆದಿದ್ದು ಕನ್ನಡ ಈ ನಟನ ಸಹಿ ಮಾತ್ರ
ರಜಿನಿ

Updated on: Sep 26, 2026 | 12:26 PM

ಮುಖ್ಯಾಂಶಗಳು

  • ರಜನಿಕಾಂತ್ ಪಡೆದ ಏಕೈಕ ಆಟೋಗ್ರಾಫ್ ಯಾರದ್ದು ಗೊತ್ತಾ?
  • ಕೆಂಪಾಂಬುಧಿ ಕೆರೆ ಬಳಿ ನಡೆದಿದ್ದ ಘಟನೆ ನೆನೆದ ರಜನಿ
  • ತಮಿಳಿನಲ್ಲಿ ರಿಮೇಕ್ ಆಗಿ ಬ್ಲಾಕ್‌ಬಸ್ಟರ್ ಆದ ಕನ್ನಡ ಚಿತ್ರಗಳು

ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾ. ರಾಜ್‌ಕುಮಾರ್ ಅವರ ಸರಳತೆ ಹಾಗೂ ಅಭಿನಯಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ಅನೇಕರು ರಾಜ್​​ಕುಮಾರ್ ಅವರನ್ನು ಹಾಡಿ ಹೊಗಳಿದ ಉದಾಹರಣೆ ಇದೆ. ಇದಕ್ಕೆ ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಹೊರತಾಗಿಲ್ಲ. ಅವರು ರಾಜ್​ಕುಮಾರ್ ಬಗ್ಗೆ ಈ ಹಿಂದೆ ಹೇಳಿದ ವಿಡಿಯೋ ವೈರಲ್ ಆಗಿದೆ. ‘ಒಬ್ಬ ರಾಜ್​ಕುಮಾರ್ 10 ಎಂಜಿಆರ್​ಗೆ ಸಮ’ ಎಂದು ರಜನಿಕಾಂತ್ ಮುಕ್ತವಾಗಿ ಕೊಂಡಾಡಿದ್ದರು.

‘2.0’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ರಜನಿಕಾಂತ್ ತಮಿಳು ಮಾಧ್ಯಮಗಳ ಜೊತೆ ಮಾತನಾಡಿದ್ದರು. ಈ ವೇಳೆ ರಾಜ್​ಕುಮಾರ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ತಮಿಳು ಚಿತ್ರರಂಗದಲ್ಲಿ ಮಾಸ್, ರಾಜಕೀಯ ಮತ್ತು ಸಾಮಾಜಿಕ ಕೆಲಸಕ್ಕೆ ಎಂ. ಜಿ. ರಾಮಚಂದ್ರನ್ (ಎಂಜಿಆರ್) ಹೆಸರುವಾಸಿಯಾಗಿದ್ದಾರೆ. ಅದೇ ರೀತಿ ಶಿವಾಜಿ ಗಣೇಶನ್ ನಟನೆಯಲ್ಲಿ ಮಿಂಚಿದ್ದರು. ಎಂಜಿಆರ್​ಗೆ ನಟನೆಯ ಜೊತೆಗೆ ರಾಜಕೀಯದ ನಂಟಿತ್ತು. ಆದರೆ, ರಾಜಕೀಯದ ಲಿಂಕ್ ಇಲ್ಲದೆ, ಕೇವಲ ಅಭಿನಯ ಸಾಮರ್ಥ್ಯದ ಮೂಲಕ ಗಮನ ಸೆಳೆದವರು ಅಂದರೆ ಅದು ಡಾ. ರಾಜ್‌ಕುಮಾರ್ ಎಂದು ರಜನಿಕಾಂತ್ ವಿವರಣೆ ನೀಡಿದ್ದರು. ಬೆಂಗಳೂರಿನಲ್ಲಿ ನಡೆದ ಡಾ. ರಾಜ್‌ಕುಮಾರ್ ಸ್ಮಾರಕ ಲೋಕಾರ್ಪಣೆ ಸಮಾರಂಭದಲ್ಲೂ ರಜನಿಕಾಂತ್ ಈ ಮಾತನ್ನು ಅತ್ಯಂತ ಹೆಮ್ಮೆಯಿಂದ ಪುನರುಚ್ಚರಿಸಿದ್ದರು.

ಇದನ್ನೂ ಓದಿ: ರಜನಿಕಾಂತ್ ಮೇಲಿನ ಗೌರವಕ್ಕೆ ತಮ್ಮ ಓಂ  ಸಿನಿಮಾ ರಿಲೀಸ್ ದಿನಾಂಕ ಮುಂದೂಡಿದ ನಟ ಧನುಷ್

ಜೀವನದಲ್ಲಿ ಪಡೆದ ಏಕೈಕ ಆಟೋಗ್ರಾಫ್

ರಜನಿಕಾಂತ್ ಅವರು ಎಂದಿಗೂ ಮತ್ತೊಬ್ಬರ ಅಭಿಮಾನಿಯಾಗಿ ಕ್ಯೂನಲ್ಲಿ ನಿಂತವರಲ್ಲ. ಆದರೆ ಡಾ. ರಾಜ್‌ಕುಮಾರ್ ಅಂದರೆ ಅವರಿಗೆ ವಿಶೇಷ ಪ್ರೀತಿ ಹಾಗೂ ಗೌರವ. ‘ಬೆಂಗಳೂರಿನಲ್ಲಿ ಓದುತ್ತಿದ್ದಾಗ ಕೆಂಪಾಂಬುಧಿ ಕೆರೆಯ ಬಳಿ ಅಣ್ಣಾವ್ರು ಬಂದಿದ್ದಾಗ ಓಡಿಹೋಗಿ ರಾಜ್​ಕುಮಾರ್ ಆಟೋಗ್ರಾಫ್ ಪಡೆದುಕೊಂಡಿದ್ದಾಗಿ’ ರಜನಿ ಈ ಮೊದಲು ನೆನಪಿಸಿಕೊಂಡಿದ್ದರು. ವಿಶೇಷವೆಂದರೆ, ರಜನಿಕಾಂತ್ ತಮ್ಮ ಇಡೀ ಜೀವಮಾನದಲ್ಲಿ ಪಡೆದುಕೊಂಡ ಏಕೈಕ ಆಟೋಗ್ರಾಫ್ ಡಾ. ರಾಜ್‌ಕುಮಾರ್ ಅವರದ್ದು ಮಾತ್ರ.

ಸಿನಿಮೀಯ ಅನುಬಂಧ ಹಾಗೂ ರಿಮೇಕ್‌ಗಳ ಯಶಸ್ಸು

ಡಾ. ರಾಜ್‌ಕುಮಾರ್ ಅವರ ಮೇಲಿದ್ದ ಅಪಾರ ಗೌರವವು ರಜನಿಕಾಂತ್ ಅವರ ವೃತ್ತಿಜೀವನದಲ್ಲೂ ಪ್ರತಿಫಲಿಸಿತ್ತು. ರಾಜ್‌ಕುಮಾರ್ ಅಭಿನಯದ ಸೂಪರ್‌ಹಿಟ್ ಕನ್ನಡ ಸಿನಿಮಾಗಳನ್ನು ತಮಿಳಿಗೆ ರಿಮೇಕ್ ಮಾಡಿ ರಜನಿಕಾಂತ್ ಭಾರಿ ಯಶಸ್ಸು ಕಂಡರು. ಡಾ. ರಾಜ್ ಅವರ ‘ಪ್ರೇಮದ ಕಾಣಿಕೆ’ ಚಿತ್ರವನ್ನು ತಮಿಳಿನಲ್ಲಿ ‘ಪೊಲ್ಲಾದವನ್’ ಆಗಿ ರಿಮೇಕ್ ಮಾಡಲಾಯಿತು. ‘ನಾ ನಿನ್ನ ಮರೆಯಲಾರೆ’ ಚಿತ್ರವನ್ನು ‘ಪುದು ಕವಿದೈ’ ಆಗಿ ಹಾಗೂ ಭಾರಿ ಸದ್ದು ಮಾಡಿದ್ದ ‘ಅನುರಾಗ ಅರಳಿತು’ ಚಿತ್ರವನ್ನು ‘ಮನ್ನನ್’ ಆಗಿ ರಿಮೇಕ್ ಮಾಡಿ ರಜನಿಕಾಂತ್ ನಟಿಸಿದ್ದರು. ಡಾ. ರಾಜ್‌ಕುಮಾರ್ ಅವರ ಮೇಲಿರುವ ಭಕ್ತಿ-ಗೌರವವನ್ನು ರಜನಿಕಾಂತ್ ಇಂದಿಗೂ ಪ್ರತಿಯೊಂದು ವೇದಿಕೆಯಲ್ಲೂ ಮುಕ್ತವಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us