
ರಜನೀಕಾಂತ್ (Rajinikanth) ಭಾರತದ ಸೂಪರ್ ಸ್ಟಾರ್. 74 ವರ್ಷ ವಯಸ್ಸಾದರೂ ಈಗಲೂ ಅವರಿಗೆ ಫ್ಯಾನ್ಸ್ ಕ್ರೇಜ್ ಕಡಿಮೆ ಆಗಿಲ್ಲ. ಅವರ ಸಿನಿಮಾಗಳು ಮೊದಲ ದಿನವೇ ಕೋಟ್ಯಂತರ ಹಣ ಗಳಿಸುತ್ತವೆ. ಒಟಿಟಿಗಳು ಅವರ ಸಿನಿಮಾ ಖರೀದಿ ಮಾಡಲು ಸಾಲಿನಲ್ಲಿ ನಿಂತಿರುತ್ತಾರೆ. ಇದೀಗ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆ ಆಗಲಿಕ್ಕಿದೆ. ಸಿನಿಮಾ ಅನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವುದು ಸಿನಿಮಾದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದ್ದು, ಸಿನಿಮಾದ ಒಟಿಟಿ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.
‘ಕೂಲಿ’ ಸಿನಿಮಾ ಅನ್ನು ಅಮೆಜಾನ್ ಖರೀದಿ ಮಾಡಿದೆ. ಅಮೆಜಾನ್ ಪ್ರೈಂನಲ್ಲಿ ‘ಕೂಲಿ’ ಸಿನಿಮಾ ಸ್ಟ್ರೀಮ್ ಆಗಲಿದೆ. ರಜನೀಕಾಂತ್ ಜೊತೆಗೆ ನಾಗಾರ್ಜುನ, ಉಪೇಂದ್ರ, ಆಮಿರ್ ಖಾನ್ ಸಹ ನಟಿಸಿರುವ ಈ ಭಾರಿ ಬಜೆಟ್ ಸಿನಿಮಾಕ್ಕೆ 120 ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡಿದೆ ಅಮೆಜಾನ್ ಪ್ರೈಂ. ಆದರೆ ಅಮೆಜಾನ್, ‘ಕೂಲಿ’ ಸಿನಿಮಾವನ್ನು ನೇರವಾಗಿ ಸ್ಟ್ರೀಂ ಮಾಡಲಿದೆಯೇ ಅಥವಾ ರೆಂಟ್ ಆಧಾರದಲ್ಲಿ ಸ್ಟ್ರೀಂ ಮಾಡಲಿದೆಯೆ ಎಂಬುದು ಕುತೂಹಲ ಕೆರಳಿಸಿದೆ.
‘ಕೂಲಿ’ ಸಿನಿಮಾ ಭೂಗತ ಜಗತ್ತು ಹಾಗೂ ಒಬ್ಬ ಸಾಮಾನ್ಯ ವ್ಯಕ್ತಿಯ ನಡುವೆ ನಡೆಯುವ ದ್ವೇಷದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಅಕ್ಕಿನೇನಿ ನಾಗಾರ್ಜುನ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಉಪೇಂದ್ರ ಅವರಿಗೂ ಸಹ ನೆಗೆಟಿವ್ ಶೇಡ್ನ ಪಾತ್ರವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಮೊದಲ ಬಾರಿಗೆ ಆಮಿರ್ ಖಾನ್ ಈ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಆಮಿರ್ ಖಾನ್ ಸಹ ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ ಸಿನಿಮಾಕ್ಕಾಗಿ ಒಳ್ಳೆಯ ಪಾತ್ರವುಳ್ಳ ಸಿನಿಮಾ ಬಿಟ್ಟ ಶ್ರುತಿ ಹಾಸನ್
ಲೋಕೇಶ್ ಕನಗರಾಜ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ. ಸಿನಿಮಾ ಸಂಪೂರ್ಣವಾಗಿ ಮುಗಿಸಿದ್ದು, ಕೆಲ ದಿನಗಳ ಹಿಂದಷ್ಟೆ ಸಿನಿಮಾ ಅನ್ನು ರಜನೀಕಾಂತ್ ಅವರಿಗೆ ತೋರಿಸಿದರಂತೆ. ಸಿನಿಮಾ ನೋಡಿದ ರಜನೀಕಾಂತ್ ಬಹುವಾಗಿ ಮೆಚ್ಚಿ, ಲೋಕೇಶ್ ಅವರನ್ನು ಅಪ್ಪಿಕೊಂಡರಂತೆ. ಈ ಹಿಂದೆ ಇದೇ ಲೋಕೇಶ್ ಕನಗರಾಜ್ ಅವರು ಕಮಲ್ ಹಾಸನ್ ಅವರಿಗಾಗಿ ‘ವಿಕ್ರಂ’ ಸಿನಿಮಾ ನಿರ್ದೇಶಿಸಿದ್ದರು. ಆ ಸಿನಿಮಾ ಸಹ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ರಜನೀಕಾಂತ್ ಅವರಿಗಾಗಿ ‘ಕೂಲಿ’ ಸಿನಿಮಾ ಮಾಡಿದ್ದಾರೆ. ಸಿನಿಮಾದ ‘ಮೋನಿಕಾ’ ಹಾಡು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಟ್ರೆಂಡಿಂಗ್ನಲ್ಲಿದೆ. ‘ಮೋನಿಕಾ’ ಹಾಡಿನಲ್ಲಿ ಪೂಜಾ ಹೆಗ್ಡೆ ಡ್ಯಾನ್ಸ್ ಮಾಡಿದ್ದಾರೆ. ಈ ಸಿನಿಮಾನಲ್ಲಿ ಶ್ರುತಿ ಹಾಸನ್ ಸಹ ಇದ್ದು, ಅವರು ನಾಯಕಿಯಾ ಎಂಬುದು ಖಾತ್ರಿ ಇಲ್ಲ. ಸಿನಿಮಾದ ಟ್ರೈಲರ್ ಬಿಡುಗಡೆ ಆಗುವುದಿಲ್ಲ ಎನ್ನಲಾಗುತ್ತದೆ. ಸಿನಿಮಾ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ