
ರಜನೀಕಾಂತ್ (Rajinikanth) ಹಾಗೂ ವಿಜಯ್ (Vijay) ಅಭಿಮಾನಿಗಳ ನಡುವೆ ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಪದೇ-ಪದೇ ಭಿನ್ನಾಭಿಪ್ರಾಯ, ಪರಸ್ಪರ ಮೂದಲಿಕೆಗಳು ನಡೆಯುತ್ತಲೇ ಇವೆ. ವಿಜಯ್ ಅಭಿಮಾನಿಗಳು ರಜನೀಕಾಂತ್ ಅವರನ್ನು ಟೀಕಿಸುವುದು, ರಜನೀಕಾಂತ್ ಅಭಿಮಾನಿಗಳು ವಿಜಯ್ ಅವರನ್ನು ಟೀಕಿಸುವುದು ನಡೆದೇ ಇದೆ. ಆದರೆ ಹಿರಿಯರಾಗಿರುವ ರಜನೀಕಾಂತ್, ಇದಕ್ಕೆಲ್ಲ ಆಸ್ಪದ ನೀಡದೆ, ವಿಜಯ್ ಹಾಗೂ ತಮ್ಮ ನಡುವೆ ಯಾವುದೇ ಸ್ಪರ್ಧೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ‘ಲಾಲ್ ಸಲಾಮ್’ ಸಿನಿಮಾದ ಆಡಿಯೋ ಲಾಂಚ್ನಲ್ಲಿ ವಿಜಯ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
‘ಜೈಲರ್’ ಸಿನಿಮಾದ ಕಾರ್ಯಕ್ರಮದಲ್ಲಿ ‘ಕಾಗೆ ಹಾಗೂ ಹದ್ದಿ’ನ ಉದಾಹರಣೆಯೊಂದನ್ನು ರಜನೀಕಾಂತ್ ನೀಡಿದ್ದರು. ರಜನೀಕಾಂತ್ ಈ ಹೋಲಿಕೆಯನ್ನು ವಿಜಯ್ ಹಾಗೂ ತಮ್ಮ ನಡುವಿನ ಹೋಲಿಗೆ ಉದಾಹರಣೆಯಾಗಿ ನೀಡಿದ್ದಾರೆ. ವಿಜಯ್ ಅನ್ನು ಕಾಗೆ ಎಂದು ಕರೆದಿದ್ದಾರೆ ಎಂದುಕೊಳ್ಳಲಾಗಿತ್ತು. ಇದೇ ವಿಷಯವನ್ನು ಇಟ್ಟುಕೊಂಡು ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದಿದ್ದರು. ಇದೀಗ ಇದಕ್ಕೆಲ್ಲ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ ರಜನೀಕಾಂತ್.
‘ನಾನು ಕಾಗೆ ಹಾಗೂ ಹದ್ದಿನ ಬಗ್ಗೆ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿ, ವಿಜಯ್ ಅನ್ನು ಉದ್ದೇಶಿಸಿ ನಾನು ಆ ಮಾತು ಹೇಳಿದೆ ಎಂದು ತಿರುಚಿರುವುದು ನನ್ನ ಬೇಸರಕ್ಕೆ ಕಾರಣವಾಗಿದೆ. ವಿಜಯ್ ಹಾಗೂ ನಾನು ಈ ಮೊದಲೇ ಹೇಳಿದ್ದೇವೆ, ನಾವು ಯಾರ ಮೇಲೂ ಸ್ಪರ್ಧೆಗೆ ಬಿದ್ದಿಲ್ಲ, ನಮ್ಮದೇನಿದ್ದರು ಸ್ವ-ಸ್ಪರ್ಧೆ. ನಾನು ನಮ್ಮ ಮೇಲೆ ಮಾತ್ರವೇ ಸ್ಪರ್ಧೆ ಮಾಡುತ್ತಿದ್ದೇವೆ. ನಾನು ವಿಜಯ್ ಮೇಲೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದರೆ ನನ್ನ ಗೌರವ ಕಳೆದು ಹೋದಂತೆ, ಅಂತೆಯೇ ವಿಜಯ್, ನನ್ನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆಂದರೆ ಅವರ ಗೌರವ ಮಣ್ಣಾದಂತೆ’ ಎಂದಿದ್ದಾರೆ.
ಇದನ್ನೂ ಓದಿ:ನನ್ನ ತಂದೆ ‘ಸಂಘಿ’ ಅಲ್ಲ: ಅಪ್ಪನ ಟೀಕಿಸಿದವರಗೆ ರಜನೀಕಾಂತ್ ಪುತ್ರಿ ತಿರುಗೇಟು
‘ವಿಜಯ್ ನನ್ನ ಮುಂದೆಯೇ ಬಳೆದು ಬಂದಿರುವ ನಟ. 1988ರಲ್ಲಿ ನಾನು ‘ಧರ್ಮತಿನ್ ತಲೈವನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದೆ. ಸಿನಿಮಾದ ಚಿತ್ರೀಕರಣ ವಿಜಯ್ ಅವರ ಮನೆಯಲ್ಲಿಯೇ ನಡೆಯುತ್ತಿತ್ತು. ಆಗ ವಿಜಯ್ಗೆ 13-14 ವರ್ಷ ವಯಸ್ಸಿರಬಹುದು. ಅವರ ತಂದೆ ಎಸ್ಎ ಚಂದ್ರಶೇಖರ್, ವಿಜಯ್ ಅನ್ನು ನನಗೆ ಪರಿಚಯಿಸಿದರು. ಇವನಿಗೂ ನಟನೆಯಲ್ಲಿ ಆಸಕ್ತಿ ಇದೆ, ಏನಾದರೂ ಸಲಹೆ ಕೊಡಿ ಎಂದರು. ಆಗ ನಾನು ಮೊದಲು ನೀನು ವಿದ್ಯಾಭ್ಯಾಸ ಪೂರ್ತಿ ಮಾಡಿಕೊ ಆನಂತರವೇ ಚಿತ್ರರಂಗಕ್ಕೆ ಬಾ ಎಂದು ಸಲಹೆ ನೀಡಿದ್ದೆ’ ಎಂದು ಸ್ಮರಿಸಿಕೊಂಡಿದ್ದಾರೆ.
‘ಆಗಿನಿಂದ ಈಗಿರುವ ಸ್ಥಾನದ ವರೆಗೂ ವಿಜಯ್ ಬೆಳೆದು ಬಂದಿದ್ದಾರೆ. ಯಾರ ಬೆಂಬಲವೂ ಇಲ್ಲದೇ ಕೇವಲ ತಮ್ಮ ಶ್ರಮ, ಡೆಡಿಕೇಷನ್, ಶಿಸ್ತಿನಿಂದ ಇಷ್ಟು ದೂರ ಬಂದು ಒಂದು ಗೌರವಯುತ ಸ್ಥಾನದಲ್ಲಿ ವಿಜಯ್ ಇಂದು ನಿಂತಿದ್ದಾರೆ’ ಎಂದು ವಿಜಯ್ರ ಪಯಣವನ್ನು ಕೊಂಡಾಡಿರುವ ರಜನೀಕಾಂತ್, ಅಭಿಮಾನಿಗಳು ದಯವಿಟ್ಟು ಸುಳ್ಳು ಸುದ್ದಿ, ಜಗಳಗಳನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಹಿರಿಯರಾದ ರಜನೀಕಾಂತ್ ಅವರೇ ಒಂದು ಹೆಜ್ಜೆ ಮುಂದೆ ಹೋಗಿ ಅಭಿಮಾನಿಗಳ ನಡುವಿನ ಜಗಳ ನಿಲ್ಲಿಸುವಂತೆ ಹೇಳಿದ್ದಾರೆ. ಇದಕ್ಕೆ ವಿಜಯ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಕಾದು ನೋಡಬೇಕಿದೆ.
ರಜನೀಕಾಂತ್ ‘ಲಾಲ್ ಸಲಾಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾವನ್ನು ಅವರ ಪುತ್ರಿ ಐಶ್ವರ್ಯಾ ರಜನೀಕಾಂತ್ ನಿರ್ದೇಶನ ಮಾಡಿದ್ದಾರೆ. ಕೋಮು ಸೌಹಾರ್ಧತೆ ಹಾಗೂ ಕ್ರಿಕೆಟ್ ಅನ್ನು ಸಿನಿಮಾದ ವಸ್ತುವನ್ನಾಗಿಸಿಕೊಳ್ಳಲಾಗಿದೆ. ಸಿನಿಮಾದಲ್ಲಿ ಮೋಯಿದ್ದೀನ್ ಭಾಯ್ ಹೆಸರಿನ ಪಾತ್ರದಲ್ಲಿ ರಜನೀಕಾಂತ್ ನಟಿಸಿದ್ದು, ಸಿನಿಮಾದಲ್ಲಿ ಮಾಜಿ ಕ್ರಿಕೆಟಿಗ ದಂತಕತೆ ಕಪಿಲ್ ದೇವ್ ಸಹ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Sat, 27 January 24