‘ರಾಜಿಯ ಮಾತೇ ಇಲ್ಲ, ಕಾನೂನು ಹೋರಾಟಕ್ಕೆ ಸಿದ್ಧ’; ಗುಡುಗಿದ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಹಕ್ಕುಸ್ವಾಮ್ಯ, ಪ್ರಸಾರದ ಹಕ್ಕನ್ನು ಖರೀದಿಸದೆ ಹಾಡುಗಳ ಬಳಕೆ ಮಾಡಿದ್ದಾಗಿ ನವೀನ್ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಅವರು ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
‘ನ್ಯಾಯ ಎಲ್ಲಿದೆ..’ ಹಾಗೂ ‘ಗಾಳಿಮಾತು..’ ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ಯಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಎಂಆರ್ಟಿ ಮ್ಯೂಸಿಕ್ನವರು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಎರಡು ವಾರಗಳ ಬಳಿಕ ರಕ್ಷಿತ್ ಶೆಟ್ಟಿ ಅವರು ಈಗ ವಿಚಾರಣೆಗೆ ಹಾಜರಾಗಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಜುಲೈ 15ರಂದು ರಕ್ಷಿತ್ ಶೆಟ್ಟಿ ವಿರುದ್ಧ ನವೀನ್ ಕುಮಾರ್ ಅವರು ದೂರು ನೀಡಿದ್ದರು. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ..’ ಹಾಗೂ ‘ಗಾಳಿಮಾತು..’ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಈಗ ಒಂದು ಗಂಟೆ ವಿಚಾರಣೆಗೆ ಹಾಜರಾಗಿ ಕಾನೂನು ಹೋರಾಟಕ್ಕೆ ಸಜ್ಜಾಗುವ ಎಚ್ಚರಿಕೆಯನ್ನು ರಕ್ಷಿತ್ ಶೆಟ್ಟಿ ನೀಡಿದ್ದಾರೆ.
‘ನಾನು ರಾಜಿಯಾಗಲ್ಲ. ಕಾನೂನು ಹೋರಾಟಕ್ಕೆ ಸಜ್ಜಾಗುತ್ತೇನೆ. ನಾವು ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಕೆಲವು ಹಾಡುಗಳನ್ನ ಬಳಸಿರುತ್ತೇವೆ. ಕಾಪಿ ರೈಟ್ ಆ್ಯಕ್ಟ್ ಏನು ಎಂಬುದು ಇನ್ನೂ ಯಾರಿಗೂ ಅರ್ಥ ಆಗಿಲ್ಲ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಈ ಮೂಲಕ ತಾವು ಮಾಡಿದ್ದು ತಪ್ಪಲ್ಲ ಎಂದು ಪುನರುಚ್ಚರಿಸಿದ್ದಾರೆ.
‘ವಿಚಾರಣೆಗೆ ಕರೆದಿದ್ದರು. ಬಂದು ವಿಚಾರಣೆ ಎದುರಿಸಿದ್ದೇನೆ. ಕಾಪಿರೈಟ್ ಬಗ್ಗೆ ಸಿನಿಮಾ ರಂಗದವರಿಗೆ ಜ್ಞಾನ ಇಲ್ಲ. ನಾವು ಬಳಕೆ ಮಾಡಿರುವ ಹಾಡು ಹಕ್ಕು ಸ್ವಾಮ್ಯದ ಉಲ್ಲಂಘನೆ ಅಲ್ಲ. ಸಂಧರ್ಭಕ್ಕೆ ಬೇಕಾದಂತಹ ಹಿನ್ನಲೆಯಲ್ಲಿ ಒಂದು ಸಾಂಗ್ 6 ಸೆಕೆಂಡ್ ಬಳಕೆಯಾಗಿದೆ. ಹಾಗಾದರೆ ಕನ್ನಡದ ಯಾವ ಹಾಡನ್ನು ಸಿನಿಮಾಗಳಲ್ಲಿ ಬಳಕೆ ಮಾಡುವಂತೆಯೇ ಇಲ್ಲವಾ’ ಎಂದು ಪ್ರಶ್ನೆ ಮಾಡಿದ್ದಾರೆ.
‘ಈ ಪ್ರಕರಣವನ್ನು ನಾನು ಕೋರ್ಟ್ನಲ್ಲಿ ಫೈಟ್ ಮಾಡ್ತಿನಿ. ಕಾಪಿರೈಟ್ ಏನು ಅನ್ನೋದು ಕೋರ್ಟ್ನಲ್ಲಿ ನಾನೂ ತಿಳಿದುಕೊಳ್ಳಬೇಕು. ಈ ಹಿಂದೆ ಕೂಡ ಕಾಪಿ ರೈಟ್ ಆ್ಯಕ್ಟ್ ಪ್ರಕರಣ ಬಂದಾಗ ನಾನು ಅದನ್ನ ಫೈಟ್ ಮಾಡಿದ್ದೆ’ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ‘ಕಿರಿಕ್ ಪಾರ್ಟಿ’ ಚಿತ್ರದ ‘ಯಾರಿವನು..’ ಹಾಡಿನ ಬಗ್ಗೆ ಲಹರಿ ಸಂಸ್ಥೆ ದೂರು ದಾಖಲು ಮಾಡಿತ್ತು.
ಕರೆ ಮಾಡಿದ್ವಿ..
‘ಮೂರ್ನಾಲ್ಕು ಹಳೆ ಹಾಡುಗಳನ್ನ ಬ್ಯಾಕ್ಗ್ರೌಂಡ್ನಲ್ಲಿ ಬಳಸುವ ಸನ್ನಿವೇಶವಿತ್ತು. ಹಾಡುಗಳ ಬಳಕೆಗೆ ಒಪ್ಪಿಗೆ ತೆಗದುಕೊಳ್ಳೋದಕ್ಕೆ ಪ್ರೊಡಕ್ಷನ್ ಮ್ಯಾನೇಜರ್ ರಾಜೇಶ್ ಅವರಿಗೆ ಹೇಳಿದ್ದೆ. ರಾಜೇಶ್ ಅವರು ಫೋನ್ ಮಾಡಿದಾಗ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್ ಬಂತು. ಅಷ್ಟೊಂದು ಮೊತ್ತ ಕೊಡುವ ಅವಶ್ಯಕತೆಯಿಲ್ಲ ಎಂಬುದು ನನ್ನ ಭಾವನೆ ಆಗಿತ್ತು. ಆಗ ಮೂರ್ನಾಲ್ಕು ಬಾರಿ ಮಾತುಕತೆಯಾಗಿತ್ತು. ನಾವು ರಾಯಲ್ಟಿ ಕೊಡೋ ಬಗ್ಗೆ ಮಾತುಕತೆ ಆಗಿತ್ತು’ ಎಂದಿದ್ದಾರೆ ರಕ್ಷಿತ್.
Published On - 2:05 pm, Fri, 2 August 24