
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಯಶ್ ಅವರ ಕುರಿತು ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಈ ಹಿಂದೆ ನೀಡಿದ್ದ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ಕುರಿತು ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಪ್ರತಿಕ್ರಿಯೆ ನೀಡಿದ್ದು, ಅಲ್ಲು ಅರವಿಂದ್ ಪರ ಬ್ಯಾಟಿಂಗ್ ಮಾಡಿದ್ದಾರೆ.
‘ಎಕ್ಸ್’ (ಟ್ವಿಟರ್) ಮೂಲಕ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ರಾಮ್ ಗೋಪಾಲ್ ವರ್ಮಾ, ‘ನಟ ಯಶ್ ಕುರಿತು ಅಲ್ಲು ಅರವಿಂದ್ ನೀಡಿರುವ ಹೇಳಿಕೆಯನ್ನು ಹಿಡಿದುಕೊಂಡು ವಿವಾದ ಮಾಡುತ್ತಿರುವುದು ತೀರಾ ಹಾಸ್ಯಾಸ್ಪದವಾಗಿದೆ’ ಎಂದಿದ್ದಾರೆ. ಅಲ್ಲದೇ, ಅದು ಯಾಕೆ ಹಾಸ್ಯಾಸ್ಪದ ಎಂಬುದನ್ನು ಅವರು ವಿವರವಾಗಿ ಹೇಳಿದ್ದಾರೆ.
‘ಬಾಹುಬಲಿ ಬರುವುದಕ್ಕಿಂತ ಮುಂಚೆ ಹಿಂದಿ ಪ್ರೇಕ್ಷಕರಿಗೆ ಪ್ರಭಾಸ್ ಯಾರು ಎಂದು ತಿಳಿದಿರಲಿಲ್ಲ. ಕಾಂತಾರ ಬರುವ ಮುನ್ನ ರಿಷಬ್ ಶೆಟ್ಟಿ ಪರಿಚಯ ಇರಲಿಲ್ಲ. ಗಾಡ್ ಫಾದರ್ ಸಿನಿಮಾ ನೋಡುವ ಮುನ್ನ ನನಗೂ ಬ್ರಾಂಡೋ ಯಾರು ಎಂದು ಗೊತ್ತಿರಲಿಲ್ಲ. ಕೆಲವು ಸಿನಿಮಾಗಳು ನಟರನ್ನು ದೊಡ್ಡ ಸ್ಟಾರ್‌ಗಳನ್ನಾಗಿ ಮಾಡುತ್ತವೆ ಹೊರತು, ನಟರಿಂದ ಸಿನಿಮಾಗಳು ದೊಡ್ಡದಾಗುವುದಿಲ್ಲ. ಅಲ್ಲು ಅರವಿಂದ್ ಅವರ ಸಾಮಾನ್ಯ ಹೇಳಿಕೆಯನ್ನು ಅಹಂಕಾರದಿಂದ ತಮ್ಮ ಸ್ವಂತ ವಿಷಯವಾಗಿ ತೆಗೆದುಕೊಳ್ಳುವವರು ಮಾತ್ರ ಈ ರೀತಿ ವಿವಾದ ಮಾಡುತ್ತಾರೆ’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
2023ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಲ್ಲು ಅರವಿಂದ್, ‘ಕೆಜಿಎಫ್’ ಹಿಟ್ ಆಗುವ ಮುನ್ನ ಯಶ್ ಅವರ ಜನಪ್ರಿಯತೆ ಎಷ್ಟಿತ್ತು ಎಂಬರ್ಥದಲ್ಲಿ ಪ್ರಶ್ನಿಸಿದ್ದರು. ಇದು ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಿರುವ ಬೆನ್ನಲ್ಲೇ ಈ ಹಳೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ: ‘ಧುರಂಧರ್’ ಹೊಗಳುವ ನೆಪದಲ್ಲಿ ‘ಟಾಕ್ಸಿಕ್’ ತೆಗಳಿದ್ರಾ ರಾಮ್ ಗೋಪಾಲ್ ವರ್ಮಾ?
ಇನ್ನೊಂದೆಡೆ, ಅಲ್ಲು ಅರವಿಂದ್ ಅವರ ಹೆಸರು ಪ್ರಸ್ತಾಪಿಸದೆ ಪ್ರತಿಕ್ರಿಯಿಸಿದ್ದ ಯಶ್ ಅವರ ತಾಯಿ ಪುಷ್ಪಾ, ‘ಕೆಜಿಎಫ್‌ಗೂ ಮುನ್ನವೇ ಯಶ್ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟನಾಗಿ ಗುರುತಿಸಿಕೊಂಡಿದ್ದರು. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ವರ್ಷಗಳ ಕಾಲ ಶ್ರಮಪಟ್ಟು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ಈ ಪ್ಯಾನ್ ಇಂಡಿಯಾ ಯಶಸ್ಸು ರಾತ್ರೋರಾತ್ರಿ ಬಂದಿದ್ದಲ್ಲ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.