
ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿರುವ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚುತ್ತಿದೆ. ಪ್ರತಿಷ್ಠಿತ 32ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಶಾರ್ಟ್‌ಲಿಸ್ಟ್‌ನಲ್ಲಿ ಈ ಚಿತ್ರ ಸ್ಥಾನ ಪಡೆದಿದೆ. ಅತ್ಯುತ್ತಮ ವಿಜ್ಯುವಲ್ ಎಫೆಕ್ಟ್ಸ್ ಮತ್ತು ಅತ್ಯುತ್ತಮ ಸ್ಟಂಟ್ ಡಿಸೈನ್ ವಿಭಾಗಗಳಲ್ಲಿ ‘ರಾಮಾಯಣ’ ಸ್ಪರ್ಧೆಗೆ ಇಳಿದಿದ್ದು, ಭಾರತೀಯ ಚಿತ್ರರಂಗಕ್ಕೆ ಹೊಸ ಹೆಮ್ಮೆ ತಂದಿದೆ.
ಸುಮಾರು 500ಕ್ಕೂ ಹೆಚ್ಚು ಸಿನಿಮಾ ವಿಮರ್ಶಕರು ಹಾಗೂ ಪತ್ರಕರ್ತರನ್ನು ಒಳಗೊಂಡಿರುವ ಕ್ರಿಟಿಕ್ಸ್ ಚಾಯ್ಸ್ ಅಸೋಸಿಯೇಷನ್ ಈ ಪಟ್ಟಿಯನ್ನು ಪ್ರಕಟಿಸಿದೆ. ತಾಂತ್ರಿಕ ವಿಭಾಗದ ಒಟ್ಟು 12 ಕೆಟಗರಿಗಳಲ್ಲಿ ಶಾರ್ಟ್‌ಲಿಸ್ಟ್ ಬಿಡುಗಡೆಯಾಗಿದೆ. ವಿಜ್ಯುವಲ್ ಎಫೆಕ್ಟ್ಸ್ ವಿಭಾಗದಲ್ಲಿ ‘ರಾಮಾಯಣ’ ಚಿತ್ರಕ್ಕೆ ಹಾಲಿವುಡ್‌ನ ‘ದಿ ಒಡಿಸ್ಸಿ’, ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಮತ್ತು ‘ಗಾಡ್ಜಿಲ್ಲಾ ಮೈನಸ್ ಜೀರೋ’ ಚಿತ್ರಗಳಿಂದ ಭಾರಿ ಪೈಪೋಟಿ ಎದುರಾಗಿದೆ. ಅಂತೆಯೇ ಸ್ಟಂಟ್ ವಿಭಾಗದಲ್ಲಿ ‘ಡ್ಯೂನ್: ಪಾರ್ಟ್ 3’ ಹಾಗೂ ‘ರೆಸಿಡೆಂಟ್ ಎವಿಲ್’ ಸಿನಿಮಾಗಳೊಂದಿಗೆ ಯಶ್ ಚಿತ್ರ ಸೆಣಸಾಡಲಿದೆ.
ಈ ಬಾರಿಯ ತಾಂತ್ರಿಕ ವಿಭಾಗದ ಶಾರ್ಟ್‌ಲಿಸ್ಟ್‌ನಲ್ಲಿ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಚಿತ್ರ ಅಗ್ರಸ್ಥಾನದಲ್ಲಿದೆ. ಒಟ್ಟು 12 ವಿಭಾಗಗಳಲ್ಲಿ 11 ಸ್ಥಾನಗಳನ್ನು ಈ ಸಿನಿಮಾ ಬಾಚಿಕೊಂಡಿದೆ. ನಂತರದ ಸ್ಥಾನದಲ್ಲಿ ‘ಡ್ಯೂನ್: ಪಾರ್ಟ್ 3’ ಮತ್ತು ಸ್ಪ್ಯಾನಿಷ್ ಸಿನಿಮಾ ‘ಲಾ ಬೋಲಾ ನೆಗ್ರಾ’ ತಲಾ ಎಂಟು ವಿಭಾಗಗಳಲ್ಲಿ ಸ್ಥಾನ ಪಡೆದಿವೆ. ‘ಗಾಡ್ಜಿಲ್ಲಾ ಮೈನಸ್ ಜೀರೋ’ ಹಾಗೂ ‘ವೈಲ್ಡ್‌ವುಡ್’ ಚಿತ್ರಗಳು ತಲಾ ಏಳು ವಿಭಾಗಗಳಲ್ಲಿ ಆಯ್ಕೆಯಾಗಿ ಮೂರನೇ ಸ್ಥಾನ ಹಂಚಿಕೊಂಡಿವೆ.
ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗಳನ್ನು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳ ಮುನ್ಸೂಚಕ ಎಂದೇ ಕರೆಯಲಾಗುತ್ತದೆ. ಈ ಹಿಂದೆ ಇಲ್ಲಿ ಗೆದ್ದ ‘ಗ್ಲಾಡಿಯೇಟರ್’ ಮತ್ತು ‘ಪ್ಯಾರಾಸೈಟ್’ ಚಿತ್ರಗಳು ಆಸ್ಕರ್ ಕೂಡ ಗೆದ್ದಿದ್ದವು. ನವೆಂಬರ್ 26ರಿಂದ ಅಂತಿಮ ನಾಮನಿರ್ದೇಶನಕ್ಕಾಗಿ ಮತದಾನ ಆರಂಭವಾಗಲಿದೆ. ಡಿಸೆಂಬರ್ 4ರಂದು ಅಂತಿಮ ಪಟ್ಟಿ ಹೊರಬೀಳಲಿದೆ. ನಟನೆ ಮತ್ತು ಚಿತ್ರಕಥೆ ವಿಭಾಗಗಳಲ್ಲಿಯೂ ‘ರಾಮಾಯಣ’ ನಾಮನಿರ್ದೇಶನಗೊಳ್ಳುವ ಭರವಸೆಯಲ್ಲಿದೆ. 2027ರ ಜನವರಿ 3ರಂದು ಲಾಸ್ ಏಂಜಲೀಸ್‌ನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇದನ್ನೂ ಓದಿ: ‘ರಾಮಾಯಣ’ 19 ದಿನಕ್ಕೆ 1,704 ಕೋಟಿ ರೂಪಾಯಿ ಗಳಿಕೆ; 2,000 ಕೋಟಿ ಕ್ಲಬ್ ಸೇರುತ್ತಾ ಸಿನಿಮಾ?
ಭಾರತದ ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಉತ್ತಮ ಗಳಿಕೆ ಕಾಣುತ್ತಿದ್ದರೂ ಹಳೆಯ ದಾಖಲೆಗಳನ್ನು ಮುರಿಯಲು ಸಾಧ್ಯವಾಗಿಲ್ಲ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ ಈ ಚಿತ್ರ ಭಾರತದಲ್ಲಿ ಒಟ್ಟು 955.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಆದರೆ ‘ಪುಷ್ಪ 2’ (1,234.10 ಕೋಟಿ), ‘ಧುರಂಧರ್ 2’ (1,149.30 ಕೋಟಿ) ಮತ್ತು ‘ಬಾಹುಬಲಿ 2’ (1,030.42 ಕೋಟಿ) ಚಿತ್ರಗಳ ದಾಖಲೆಯನ್ನು ಹಿಂದಿಕ್ಕಲು ‘ರಾಮಾಯಣ’ ವಿಫಲವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.