‘ವೀರಭದ್ರ ಸ್ವಾಮಿ ಮಹಿಮೆ’: ‘ರುದ್ರಾಭಿಷೇಕಂ’ ಸಿನಿಮಾಕ್ಕೆ ರಂಭಾಪುರಿ ಶ್ರೀ ಶುಭ ಹಾರೈಕೆ

ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾ ಸೆಪ್ಟೆಂಬರ್ 25 ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಪ್ರಚಾರ ಬಲು ಬಿರುಸಾಗಿ ಜಾರಿಯಲ್ಲಿದೆ. ಸಿನಿಮಾದ ಹಾಡುಗಳು, ಪೋಸ್ಟರ್ ಬಿಡುಗಡೆ ಆಗಿದ್ದು, ಗಮನ ಸೆಳೆದಿವೆ. ‘ರುದ್ರಾಭಿಷೇಕಂ’ ಸಿನಿಮಾವು ವೀರಭದ್ರ ಸ್ವಾಮಿಯ ಮಹಿಮೆಯ ಕತೆಯನ್ನು ಒಳಗೊಂಡಿದ್ದು, ಇದೀಗ ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ‘ರುದ್ರಾಭಿಷೇಕಂ’ ಸಿನಿಮಾಕ್ಕೆ ಶುಭ ಹಾರೈಕೆ ಮಾಡಿದ್ದು, ಭಕ್ತಾಧಿಗಳೆಲ್ಲ ಸಿನಿಮಾ ವೀಕ್ಷಿಸಿ ಎಂದು ಕರೆ ನೀಡಿದ್ದಾರೆ.

‘ವೀರಭದ್ರ ಸ್ವಾಮಿ ಮಹಿಮೆ’: ‘ರುದ್ರಾಭಿಷೇಕಂ’ ಸಿನಿಮಾಕ್ಕೆ ರಂಭಾಪುರಿ ಶ್ರೀ ಶುಭ ಹಾರೈಕೆ
Rudrabhishekam

Updated on: Sep 11, 2026 | 5:24 PM

ವಿಜಯ್ ರಾಘವೇಂದ್ರ ನಟನೆಯ ‘ರುದ್ರಾಭಿಷೇಕಂ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದ್ದು, ಚಿತ್ರತಂಡವು ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೆ ಸಿನಿಮಾಕ್ಕೆ ವಿ ಮನೋಹರ್, ಥ್ರಿಲ್ಲರ್ ಮಂಜು, ಪ್ರಿಯಾಂಕಾ ತಿಮ್ಮೇಶ್ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳು ಶುಭ ಕೋರಿದ್ದರು. ಸಿನಿಮಾ ಅನ್ನು ವೀಕ್ಷಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು. ಇದೀಗ ನಾಡಿನ ಪ್ರಮುಖ ಭಕ್ತಿ ಕೇಂದ್ರಗಳಲ್ಲಿ ಒಂದಾದ ಬಾಳೆ ಹೊನ್ನೂರಿನ ರಂಭಾಪುರಿ ಪೀಠದ ಶ್ರೀಗಳು ‘ರುದ್ರಾಭಿಷೇಕಂ’ ಸಿನಿಮಾಕ್ಕೆ ಬೆಂಬಲಿಸಿದ್ದು, ವೀರಭದ್ರ ಸ್ವಾಮಿಯ ಮಹಿಮೆ ಇದೆಂದು ಕೊಂಡಾಡಿದ್ದಾರೆ.

‘ನಟ ವಿಜಯ್ ರಾಘವೇಂದ್ರ ಅವರು ನಟಿಸಿರುವ ‘ರುದ್ರಾಭಿಷೇಕಂ’ ಸಿನಿಮಾನಲ್ಲಿ ವೀರಭದ್ರಸ್ವಾಮಿಯವರ ಮಹಿಮೆಯನ್ನು ಅಡಕಗೊಳಿಸಲಾಗಿದೆ. ಈ ಹಿಂದೆ ಯಾರೂ ಮಾಡಿರದ ಸಾಹಸವನ್ನು ನಿರ್ದೇಶಕ ವಸಂತ್ ಕುಮಾರ್ ಮತ್ತು ತಂಡ ಮಾಡಿದೆ. ಯಾರೂ ಸಹ ಈ ವರೆಗೆ ವೀರಭದ್ರ ಸ್ವಾಮಿ ಅವರ ಅಪಾರ ಮಹಿಮೆ ಕುರಿತಾದ ಕತೆಯನ್ನು ತೆರೆಗೆ ತಂದಿದ್ದಿಲ್ಲ. ಆದರೆ ಈಗ ವಸಂತ್ ಕುಮಾರ್ ಅವರು ಆ ಸಾಹಸ ಮಾಡಿರುವುದು ವೈಯಕ್ತಿಕವಾಗಿ ನಮಗೆ ತೀವ್ರ ಸಂತೋಷ ಉಂಟು ಮಾಡಿದೆ’ ಎಂದಿದ್ದಾರೆ ರಂಭಾಪುರಿ ಶ್ರೀ.

‘ರುದ್ರಾಭಿಷೇಕಂ’ ಸಿನಿಮಾ ಮೂಲಕ ವೀರಭದ್ರನ ಅಪಾರ ಮಹಿಮೆಯನ್ನು ಸಾದರ ಪಡಿಸುತ್ತಿರುವುದು ಅಪಾರ ಸಂಖ್ಯೆಯಲ್ಲಿರುವ ಅವರ ಭಕ್ತರಿಗೆ ಅತೀವ ಸಂತೋಷದ ವಿಷಯ. ಈ ರೀತಿಯ ಪ್ರಯತ್ನಗಳ ಮೂಲಕ ಶಿವಾದ್ವೈತ ಸಿದ್ಧಾಂತವನ್ನು ಪ್ರಸಾರ ಮಾಡಬೇಕಿರುವುದು ಅಗತ್ಯ. ಮುಂದಿನ ದಿನಗಳಲ್ಲಿ ಮಾನವತಾವಾದಿ, ವಿಶ್ವ ವಿಭು ಜಗದ್ಗುರು ಶ್ರೀ ರೇಣುಕಾಚಾರ್ಯರ ಜೀವನ ಸಹ, ಐತಿಹಾಸಿಕ ಪುರಾವೆಗಳನ್ನು ಒಳಗೊಂಡಂತೆ ಸಿನಿಮಾ ಆಗಬೇಕು ಎಂಬುದು ನಮ್ಮ ಬಯಕೆ’ ಎಂದು ಶ್ರೀಗಳು ಹೇಳಿದ್ದಾರೆ. ಮುಂದುವರೆದು ಮಾತನಾಡಿ, ‘ಸೆಪ್ಟೆಂಬರ್ 25ರಂದು ವೀರಭದ್ರ ಸ್ವಾಮಿಯ ಮಹಿಮೆಯನ್ನು ಒಳಗೊಂಡ ‘ರುದ್ರಾಭಿಷೇಕಂ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಭಕ್ತಾಧಿಗಳೆಲ್ಲರೂ ವೀಕ್ಷಿಸಿ, ಸಿನಿಮಾ ಅನ್ನು ವಿಜಯೀಭವಗೊಳಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಇದನ್ನೂ ಓದಿ:ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ

‘ರುದ್ರಾಭಿಷೇಕಂ’ ಸಿನಿಮಾವು ಆಕ್ಷನ್, ಥ್ರಿಲ್ಲರ್, ಹಾರರ್ ಮತ್ತು ಪೌರಾಣಿಕ ಹೀಗೆ ನಾನಾ ಆಯಾಮಗಳನ್ನು ಹೊಂದಿರುವ ಕತೆಯನ್ನು ಒಳಗೊಂಡ ಸಿನಿಮಾ ಆಗಿದೆ. ಸಿನಿಮಾ ಅನ್ನು ವಸಂತ್ ಕುಮಾರ್ ನಿರ್ದೇಶಿಸಿದ್ದು, ಸಿನಿಮಾನಲ್ಲಿ ವಿಜಯ್ ರಾಘವೇಂದ್ರ ಅವರು ಹಲವು ವಿಭಿನ್ನ ಲುಕ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ರಾಜು ಬಾಲವಾಡಿ, ನವನೀತಾ ಶೆಟ್ಟಿ ಇನ್ನೂ ಹಲವರು ನಟನೆ ಮಾಡಿದ್ದಾರೆ.

ಈ ಸಿನಿಮಾಕ್ಕೆ ಬರೋಬ್ಬರಿ ಒಂಬತ್ತು ನಿರ್ಮಾಪಕರು ಎಂಬುದು ಮತ್ತೊಂದು ವಿಶೇಷ. ರೈತರುಗಳು ಒಟ್ಟಾಗಿ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಅಡಿಯಲ್ಲಿ ಲಾಯರ್ ಜಯರಾಂ, ಕೆ ಮಂಜುನಾಥ್, ಕೆ ವೆಂಕಟೇಶ್, ಬಿ ಚಿದಾನಂದ ಮೂರ್ತಿ, ಸುರೇಶ್ ಬಾಬು, ರವಿ, ಅಶ್ವತ್ಥ್ ನಾರಾಯಣ, ಡಾ ಶಿವಕುಮಾರ್, ಕುಸುಮಾ ವಸಂತ್ ಕುಮಾರ್ ಅವರುಗಳು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ವಿ ಮನೋಹರ್ ನೀಡಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ಸಿನಿಮಾಕ್ಕಿದೆ. ಸಿನಿಮಾ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us