‘ಇದೆಲ್ಲ ನಮ್ಮ ತಲೆಯಲ್ಲಿ ಇರೋದು’; ಇಂಡಸ್ಟ್ರಿ ಬಗ್ಗೆ ಅಪಸ್ವರ ತೆಗೆದಿದ್ದ ರಾನಾ ದಗ್ಗುಬಾಟಿ
ರಾನಾ ದಗ್ಗುಬಾಟಿ ಅವರು ಭಾರತೀಯ ಸಿನಿಮಾ ರಂಗದಲ್ಲಿ ವಿವಿಧ ಭಾಷಾ ಚಿತ್ರಗಳ ನಡುವಿನ ಗಡಿಗಳನ್ನು ಮುರಿಯುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರ ಚಿತ್ರಗಳು ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗುವುದನ್ನು ಉದಾಹರಣೆಯಾಗಿ ನೀಡಿದ ಅವರು, ನಾವು ಸ್ವಯಂ ನಿರ್ಮಿತ ಗಡಿಗಳನ್ನು ಮುರಿಯಬೇಕೆಂದು ಸೂಚಿಸಿದ್ದಾರೆ.
ಭಾರತದಲ್ಲಿ ಹಲವು ಸಿನಿಮಾ ಇಂಡಸ್ಟ್ರಿಗಳು ಇವೆ. ಈ ಮೊದಲು ಬಾಲಿವುಡ್ ಪಾರುಪತ್ಯ ಸಾಧಿಸಿತ್ತು. ಭಾರತೀಯ ಸಿನಿಮಾ ಎಂದರೆ ಬಾಲಿವುಡ್ ಎಂಬ ರೀತಿ ಆಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಎಲ್ಲರೂ ದಕ್ಷಿಣದ ಸಿನಿಮಾ ಇಂಡಸ್ಟ್ರಿಯನ್ನು ಗುರುತಿಸುತ್ತಿದ್ದಾರೆ. ಕನ್ನಡದ ‘ಕೆಜಿಎಫ್ 2’, ತೆಲುಗಿನ ‘ಆರ್ಆರ್ಆರ್’ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ಇಂಡಸ್ಟ್ರಿಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುವವರಿದ್ದಾರೆ. ಈ ಬಗ್ಗೆ ರಾನಾ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅನೇಕರು ಕನ್ನಡ ಇಂಡಸ್ಟ್ರಿ ಶ್ರೇಷ್ಠ ಎಂದರೆ ಇನ್ನೂ ಕೆಲವರು ತೆಲುಗು ಇಂಡಸ್ಟ್ರಿ ಉತ್ತಮ ಎನ್ನುತ್ತಾರೆ. ಕೆಲವರು ಬಾಲಿವುಡ್ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಾರೆ. ಇನ್ನೂ ಕೆಲವರು ಎಲ್ಲಾ ಇಂಡಸ್ಟ್ರಿ ಒಂದು ಎನ್ನುವ ರೀತಿಯ ಅಭಿಪ್ರಾಯ ಹೊರಹಾಕುತ್ತಾರೆ. ರಾನಾ ದಗ್ಗುಬಾಟಿ ಕೂಡ ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದರು.
‘ನೀವು ಅನೇಕ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದೀರಿ. ಏನಾದರೂ ಭಿನ್ನತೆ ಕಂಡಿದೆಯೇ’ ಎಂದು ಕೇಳಲಾಯಿತು. ಇದಕ್ಕೆ ರಾನಾ ಉತ್ತರಿಸಿದ್ದರು. ‘ಬೇರೆ ರಾಜ್ಯಗಳ ಬಗ್ಗೆ ನಾವು ಎಷ್ಟು ಡಂಬ್ ಆಗಿದ್ದೀವಿ. ಕ್ಯಾಮೆರಾ, ಸ್ಟೋರಿ ಹಾಗೂ ಒಂದಷ್ಟು ಕಲಾವಿದರು ಇದ್ದರೆ ಸಿನಿಮಾ ಮಾಡಬಹುದು. ತೆಲುಗಿನಲ್ಲಿ ಮಾಡಿದರೆ ತೆಲುಗು ಸಿನಿಮಾ, ಇಂಗ್ಲಿಷ್ನಲ್ಲಿ ಮಾಡಿದರೆ ಇಂಗ್ಲಿಷ್ ಸಿನಿಮಾ’ ಎಂದರು ರಾನಾ.
‘ನಮ್ಮ ತಲೆಯಲ್ಲಿ ನಾವು ಇಂಡಸ್ಟ್ರಿ ಮಾಡಿಕೊಂಡಿದ್ದೇವೆ. ತೆಲುಗಿನವರು ತೆಲುಗು ಸಿನಿಮಾ ಮಾಡುತ್ತಾರೆ. ತಮಿಳುವರು ತಮಿಳು ಸಿನಿಮಾ ಮಾಡ್ತಾರೆ. ಹೀಗಿರುವಾಗ ವ್ಯತ್ಯಾಸ ಏನು ಬಂತು. ರಜನಿಕಾಂತ್ ಸಿನಿಮಾ ಡಬ್ ಆಗಿ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗುತ್ತದೆ. ಹೀಗಾಗಿ, ಬೌಂಡರಿ ಅನ್ನೋದು ಇಲ್ಲ. ನಾವು ಬೌಂಡರಿ ಹಾಕಿಕೊಳ್ಳೋದು’ ಎಂದಿದ್ದರು ಅವರು.
ಇದನ್ನೂ ಓದಿ: ರಾನಾ ಜೊತೆ ಪೋಸ್ ಕೊಟ್ಟ ರಿಷಬ್; ‘ಕಾಂತಾರ’ ಚಿತ್ರಕ್ಕಾ?
ರಾನಾ ಅವರು ‘ವೆಟ್ಟೈಯನ್’ ಚಿತ್ರದಲ್ಲಿ ನಟಿಸಿದ್ದಾರೆ. ಇದು ರಜನಿಕಾಂತ್ ನಟನೆಯ ಸಿನಿಮಾ. ಈ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದರು. ಸದ್ಯ ಅವರ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ. ಅವರು ಇತ್ತೀಚೆಗೆ ಸಿನಿಮಾಗಳ ಆಯ್ಕೆಯಲ್ಲಿ ನಿಧನವಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:57 am, Thu, 21 November 24