ಡ್ರಗ್ಸ್​ ಕೇಸ್​: ರಾಣಾ ದಗ್ಗುಬಾಟಿ, ರಾಕುಲ್, ರವಿತೇಜ ಸೇರಿ ಟಾಲಿವುಡ್​ನ 8 ಸೆಲೆಬ್ರಿಟಿಗಳಿಗೆ ಇಡಿ ಸಮನ್ಸ್​

| Updated By: ಮದನ್​ ಕುಮಾರ್​

Updated on: Aug 26, 2021 | 8:07 AM

ಸೆ.6ರಂದು ರಾಕುಲ್​ ಪ್ರೀತ್​ ಸಿಂಗ್​, ಸೆ.8ರಂದು ರಾಣಾ ದಗ್ಗುಬಾಟಿ, ಸೆ.9ರಂದು ರವಿತೇಜ, ಸೆ.31ರಂದು ನಿರ್ದೇಶಕ ಪುರಿ ಜಗನ್ನಾಥ್​ ಅವರ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಒಟ್ಟು 8 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯವು ಸಮನ್ಸ್​ ಜಾರಿ ಮಾಡಿದೆ.

ಡ್ರಗ್ಸ್​ ಕೇಸ್​: ರಾಣಾ ದಗ್ಗುಬಾಟಿ, ರಾಕುಲ್, ರವಿತೇಜ ಸೇರಿ ಟಾಲಿವುಡ್​ನ 8 ಸೆಲೆಬ್ರಿಟಿಗಳಿಗೆ ಇಡಿ ಸಮನ್ಸ್​
ರಾಣಾ ದಗ್ಗುಬಾಟಿ, ರಾಕುಲ್, ರವಿತೇಜ
Follow us on

ಡ್ರಗ್ಸ್​ ಪಿಡುಗಿನ (Drug Case) ಜೊತೆ ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಮುಜುಗರ ತರಿಸುವಂತಹ ಸಂಗತಿ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಮಾದಕ ವಸ್ತು ಜಾಲ ಹರಡಿರುವ ಬಗ್ಗೆ ಸುಳಿವು ಸಿಗುತ್ತಿದೆ. ಕನ್ನಡ ಮತ್ತು ಹಿಂದಿ ಚಿತ್ರರಂಗದ ಅನೇಕರು ಡ್ರಗ್ಸ್​ ಕೇಸ್​ನಲ್ಲಿ ಜೈಲು ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅಷ್ಟರಲ್ಲಾಗಲೇ ತೆಲುಗು ಚಿತ್ರರಂಗದ 8 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (Enforcement Directorate) ಸಮನ್ಸ್​ ಜಾರಿ ಮಾಡಿದೆ. ರಾಣಾ ದಗ್ಗುಬಾಟಿ (Rana Daggubati), ರಾಕುಲ್​ ಪ್ರೀತ್​ ಸಿಂಗ್​ (Rakul Preet Singh), ಪುರಿ ಜಗನ್ನಾಥ್​​, ರವಿತೇಜ ಮುಂತಾದವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. 

ಅಂದಹಾಗೆ, ಇದು 4 ವರ್ಷ ಹಿಂದಿನ ಪ್ರಕರಣ. 2017ರಲ್ಲಿ ದೊಡ್ಡ ಮಾದಕ ವಸ್ತು ಜಾಲ ಪತ್ತೆ ಆಗಿತ್ತು. ಅದರಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವುದು ಕೂಡ ಕಂಡುಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ 12 ಕೇಸ್​ಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಈಗ ಈ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಯಲಾಗಿದೆ. ‘ಇವರೆಲ್ಲರನ್ನು ಆರೋಪಿಗಳು ಎಂದು ಹೇಳಲಾಗಿಲ್ಲ. ಅಕ್ರಮ ಹಣ ವರ್ಗಾವಣೆಯಲ್ಲಿ ಈ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೋ ಇಲ್ಲವೋ ಎಂದು ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಮಾಧ್ಯಮವೊಂದಕ್ಕೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಸೆ.6ರಂದು ರಾಕುಲ್​ ಪ್ರೀತ್​ ಸಿಂಗ್​, ಸೆ.8ರಂದು ರಾಣಾ ದಗ್ಗುಬಾಟಿ, ಸೆ.9ರಂದು ರವಿತೇಜ, ಸೆ.31ರಂದು ನಿರ್ದೇಶಕ ಪುರಿ ಜಗನ್ನಾಥ್​ ಅವರ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಒಟ್ಟು 8 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯವು ಸಮನ್ಸ್​ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 30 ಜನರನ್ನು ಬಂಧಿಸಲಾಗಿದೆ. 62 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆ ಪೈಕಿ 11 ಮಂದಿಗೆ ಸಿನಿಮಾ ಸೆಲೆಬ್ರಿಟಿಗಳ ಜೊತೆ ಸಂಪರ್ಕ ಇರುವುದು ತಿಳಿದುಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ಹೈದರಾಬಾದ್​ನಲ್ಲಿ ಹಲವು ಡ್ರಗ್ಸ್​ ಪ್ರಕರಣಗಳು ಬೆಳಕಿಗೆ ಬಂದಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ ಮಾಡುತ್ತಿರುವುದು ಗೊತ್ತಾಗಿದೆ. 26 ಶಾಲೆಗಳು, 27 ಕಾಲೇಜುಗಳು ಹಾಗೂ ಮಕ್ಕಳ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿಲಾಗಿದೆ. ಬ್ಯಾನ್​ ಆಗಿರುವ ಅನೇಕ ಡ್ರಗ್​ಗಳನ್ನು ಪಬ್​, ಶಾಲೆ, ಕಾಲೇಜುಗಳಿಗೆ ಬಂಧಿತರು ಪೂರೈಕೆ ಮಾಡುತ್ತಿದ್ದರು. ಇಂಜಿನಿಯರಿಂಗ್​ ಪದವಿಧರರು, ಸುಶಿಕ್ಷಿತರು, ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕೂಡ ಇದರಲ್ಲಿ ಭಾಗಿ ಆಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:

Sandalwood Drug Case: ಡ್ರಗ್ ಸೇವನೆ ದೃಢಪಟ್ಟ ಬೆನ್ನಲ್ಲೇ ವಕೀಲರ ಸಲಹೆ ಪಡೆದ ನಟಿ ರಾಗಿಣಿ ದ್ವಿವೇದಿ!
ಸಂಜನಾಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ; ಆದ್ದರಿಂದಲೇ ಅವರು ಊಟ ಕೊಡಲು ಬಂದಿಲ್ಲ: ರೇಷ್ಮಾ ಗಲ್ರಾನಿ