ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅತಿಥಿ ಪಾತ್ರ?

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ಸ್ಪಿರಿಟ್’ ಸಿನಿಮಾದ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ. ಯಶಸ್ವಿ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಅತಿಥಿ ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅತಿಥಿ ಪಾತ್ರ?
Prabhas, Ranbir Kapoor

Updated on: Nov 25, 2025 | 8:05 PM

ನಟ ಪ್ರಭಾಸ್ (Prabhas) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ಅಭಿನಯಿಸಿರುವ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ಅವರ ಹೊಸ ಸಿನಿಮಾ ‘ಸ್ಪಿರಿಟ್’ (Spirit Movie) ಸೆಟ್ಟೇರಿದೆ. ಈ ಸಿನಿಮಾಗೆ ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಮುಹೂರ್ತ ಮಾಡಲಾಗಿದೆ. ನಟ ಮೆಗಾ ಸ್ಟಾರ್ ಚಿರಂಜೀವಿ ಅವರು ಮುಹೂರ್ತ ಸಮಾರಂಭಕ್ಕೆ ಬಂದು ಶುಭ ಕೋರಿದರು. ಅದರ ಬೆನ್ನಲ್ಲೇ ‘ಸ್ಪಿರಿಟ್’ ಪಾತ್ರವರ್ಗದ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು ಕೇಳಿಬರುತ್ತಿವೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಕೂಡ ನಟಿಸುತ್ತಾರೆ ಎಂಬ ಗಾಸಿಪ್ ಹಬ್ಬಿದೆ.

ಸಂದೀಪ್ ರೆಡ್ಡಿ ವಂಗ ಅವರು ಪ್ಯಾನ್ ಇಂಡಿಯಾ ನಿರ್ದೇಶಕ ಆಗಿದ್ದಾರೆ. ಅದೇ ರೀತಿ ಪ್ರಭಾಸ್ ಕೂಡ ಪ್ಯಾನ್ ಇಂಡಿಯಾ ಸ್ಟಾರ್. ಹಾಗಾಗಿ ‘ಸ್ಪಿರಿಟ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಅದಕ್ಕೆ ತಕ್ಕಂತೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಬಾಲಿವುಡ್ ನಟಿ ತೃಪ್ತಿ ದಿಮ್ರಿ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ. ಬಾಲಿವುಡ್​​ನ ಇನ್ನೂ ಕೆಲವು ಕಲಾವಿದರು ಬಣ್ಣ ಹಚ್ಚುವ ಸಾಧ್ಯತೆ ಇದೆ.

‘ಸ್ಪಿರಿಟ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಒಂದು ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಸಿನಿಮಾದ ಒಂದು ಪ್ರಮುಖ ದೃಶ್ಯದಲ್ಲಿ ಅವರ ಪಾತ್ರ ಬರಲಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ. ಇದೇ ಮೊದಲ ಬಾರಿಗೆ ಪ್ರಭಾಸ್ ಮತ್ತು ರಣಬೀರ್ ಕಪೂರ್ ಅವರು ಒಂದೇ ಸಿನಿಮಾದಲ್ಲಿ ನಟಿಸಲಿರುವುದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ಪ್ರಭಾಸ್, ತೃಪ್ತಿ ದಿಮ್ರಿ ಜೊತೆ ವಿವೇಕ್ ಒಬೆರಾಯ್, ಪ್ರಕಾಶ್ ರಾಜ್ ಮುಂತಾದ ಅನುಭವಿ ಕಲಾವಿದರು ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ರಣಬೀರ್ ಕಪೂರ್ ಅವರು ನಟಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆ ಬಗ್ಗೆ ಚಿತ್ರತಂಡವೇ ಬಾಯಿ ಬಿಡಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ಇದನ್ನೂ ಓದಿ: ಪ್ರಭಾಸ್ ಸಿನಿಮಾನಲ್ಲಿ ಮೆಗಾಸ್ಟಾರ್ ಚಿರಂಜೀವಿ: ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು?

‘ಸ್ಪಿರಿಟ್’ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಮತ್ತು ನಟ ರಣಬೀರ್ ಕಪೂರ್ ನಡುವೆ ಉತ್ತಮ ಒಡನಾಟ ಇದೆ. ಈಗಾಗಲೇ ಅವರಿಬ್ಬರು ‘ಅನಿಮಲ್’ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಆ ಸ್ನೇಹದ ಕಾರಣದಿಂದ ಈಗ ರಣಬೀರ್ ಕಪೂರ್ ಅವರು ‘ಸ್ಪಿರಿಟ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲು ಒಪ್ಪಿಕೊಂಡಿರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.